ADVERTISEMENT

ಉಮ್ಮತ್ತೂರು: 5ನೇ ಗೋಶಾಲೆ ಆರಂಭ

ನದಿಮೂಲದಿಂದ 24 ಕೆರೆಗಳಿಗೆ ನೀರು ಭರ್ತಿ ಮಾಡುವ ಕಾಮಗಾರಿಗೆ ತಿಂಗಳಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 7:14 IST
Last Updated 7 ಮಾರ್ಚ್ 2017, 7:14 IST
ಉಮ್ಮತ್ತೂರು: 5ನೇ ಗೋಶಾಲೆ ಆರಂಭ
ಉಮ್ಮತ್ತೂರು: 5ನೇ ಗೋಶಾಲೆ ಆರಂಭ   
ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಸೋಮವಾರ 5ನೇ ಗೋಶಾಲೆಗೆ ಚಾಲನೆ ನೀಡಲಾಯಿತು. ಬರಗಾಲದ ಹಿನ್ನೆಲೆಯಲ್ಲಿ ಮಂಗಲ, ರಾಮಾಪುರ, ಹುತ್ತೂರು ಮತ್ತು ಬಂಡಳ್ಳಿಯಲ್ಲಿ ಗೋಶಾಲೆ ತೆರೆಯಲಾಗಿದೆ.
 
ಗೋಶಾಲೆಗೆ ಚಾಲನೆ ನೀಡಿದ ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ‘ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ಸಂಕಷ್ಟದಲ್ಲಿ ರುವ ಜನರ ನೆರವಿಗೆ ಬರುವ ಉದ್ದೇಶದಿಂದ ಸರ್ಕಾರ ಬರ ಪರಿಹಾರ ಕಾಮಗಾರಿ ಕೈಗೊಂಡಿದೆ. ಜಾನುವಾರು ಗಳಿಗೆ ಮೇವು ಒದಗಿಸುವ ಉದ್ದೇಶದಿಂದ  ಹೋಬಳಿಗೆ ಒಂದರಂತೆ ಗೋ ಶಾಲೆ ತೆರೆಯಲಾಗುತ್ತಿದೆ’ ಎಂದು ತಿಳಿಸಿದರು. 
 
ಈಗಾಗಲೇ, 4 ಗೋಶಾಲೆ ತೆರೆಯಲಾಗಿದೆ. ವಿವಿಧೆಡೆ ಮೇವು ನಿಧಿ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. ರೈತರಿಗೆ ಬೇಡಿಕೆಗೆ ಅನುಗುಣವಾಗಿ ಮೇವು ವಿತರಣೆ ಮಾಡಲಾಗುತ್ತಿದೆ ಎಂದ ಅವರು, ಬರ ಪರಿಹಾರ ಕಾಮಗಾರಿ ವಿಷಯದಲ್ಲಿ ಜನರು ಕೂಡ ಸಹಕಾರ ನೀಡಬೇಕು ಎಂದು ಕೋರಿದರು. ಗೋಶಾಲೆ ಆರಂಭಿಸಿದರೆ ಸಾಲದು. ನಿರಂತರವಾಗಿ ಮೇವು, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಬೇಕು. ಸಮರ್ಪಕವಾಗಿ ನಿರ್ವಹಣೆಯ ಹೊಣೆಗಾರಿಕೆಯೂ ಅಧಿಕಾರಶಾಹಿ ಮೇಲಿದೆ ಎಂದರು.
 
ಟೆಂಡರ್ ಪ್ರಕ್ರಿಯೆ: ಉಮ್ಮತ್ತೂರು ಸೇರಿ ದಂತೆ ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ 24 ಕೆರೆಗಳಿಗೆ ₹ 236 ಕೋಟಿ ವೆಚ್ಚದಲ್ಲಿ ನೀರು ತುಂಬಿ ಸುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
 
ತಾಂತ್ರಿಕ ಬಿಡ್ ಪೂರ್ಣಗೊಂಡಿದೆ. ಫೈನಾನ್ಸಿಯಲ್ ಬಿಡ್ ಮಾತ್ರ ಬಾಕಿ ಉಳಿದಿದೆ. ಇನ್ನೊಂದು ತಿಂಗಳಲ್ಲಿ ಮುಖ್ಯಮಂತ್ರಿ ಅವರಿಂದಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಕೊಡಿಸಲಾಗುವುದು. ಒಂದು ವರ್ಷ 6 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಅಂತರ್ಜಲ ಹೆಚ್ಚಳವಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದರು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಬರ ಪರಿಸ್ಥಿತಿ ನಿಭಾಯಿಸಲು ವಿಶೇಷ ಕ್ರಮ ತೆಗೆದು ಕೊಳ್ಳಲಾಗಿದೆ. ಮೇವು ಕೊರತೆಯಾಗಿದೆ. ಹಾಗಾಗಿ, ಬಳ್ಳಾರಿಯಿಂದ ಮೇವು ಖರೀದಿಸಿ ವಿತರಿಸುವ ಕೆಲಸ ನಡೆದಿದೆ. ನೀರು, ನೆರಳು, ಮೇವು ಲಭ್ಯತೆ ಅನು ಸಾರ ಗೋಶಾಲೆ ತೆರೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದರು.
 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ‘ಈ ಭಾಗದಲ್ಲಿ ಗೋಶಾಲೆ ತೆರೆಯಬೇಕೆಂದು ರೈತರು ಒತ್ತಾಯಿಸಿದ್ದರು. 
ಸ್ಥಳೀಯರಾದ ಪುಟ್ಟಣ್ಣ ಅವರು ಗೋಶಾಲೆಗೆ ಜಾಗ ಕಲ್ಪಿಸಿಕೊಟ್ಟಿದ್ದಾರೆ. ಶಿವಣ್ಣ ಅವರು ನೀರು ವ್ಯವಸ್ಥೆ ಮಾಡಲು ಮುಂದೆ ಬಂದಿದ್ದಾರೆ. ತಾಲ್ಲೂಕು ಆಡಳಿತದೊಂದಿಗೆ ಸಹ ಕರಿಸಿದ ಹಿನ್ನೆಲೆಯಲ್ಲಿ ಗೋಶಾಲೆ ತೆರೆಯ ಲಾಗಿದೆ ಎಂದರು.
 
ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ನಿರ್ದೇಶಕರಾದ ಶಂಕರ ಮೂರ್ತಿ, ತಾಲ್ಲೂಕು ಪಂಚಾ ಯಿತಿ ಸದಸ್ಯೆ ಸುಧಾ ಮಲ್ಲಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹಾಜರಿದ್ದರು.
 
* ಯಾವುದೇ ದೂರುಗಳಿಗೆ ಅವಕಾಶ ಬಾರದಂತೆ ಗೋಶಾಲೆ ನಡೆಸುವ ಮೂಲಕ ಜಾನುವಾರುಗಳ ಪೋಷಕರಿಗೆ ನೆರವಾಗುವುದು ಅಧಿಕಾರಿಗಳ ಹೊಣೆ
ಆರ್. ಧ್ರುವನಾರಾಯಣ, ಸಂಸದ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.