ADVERTISEMENT

ಊರಿಗೊಂದು ಕೆರೆ; ಸರ್ವೆಗೆ ಸೂಚನೆ

ಎಪಿಎಂಸಿಯಲ್ಲಿ ಬಿಳಿಚೀಟಿ ವ್ಯವಹಾರಕ್ಕೆ ಕಡಿವಾಣ: ಸಚಿವ ಮಹದೇವಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 10:35 IST
Last Updated 27 ಆಗಸ್ಟ್ 2016, 10:35 IST
ಚಾಮರಾಜನಗರದ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿದರು
ಚಾಮರಾಜನಗರದ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿದರು   

ಚಾಮರಾಜನಗರ: ‘ಊರಿಗೊಂದು ಕೆರೆ ನಿರ್ಮಿಸುವ ಸಂಬಂಧ ಜಿಲ್ಲಾ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಸರ್ವೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಸೂಚಿಸಿದರು.

ನಗರದ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ಗ್ರಾಮದಲ್ಲೂ ಕೆರೆ ಇರಬೇಕು. ಪೂರ್ವಿಕರು ಕೆರೆ ನಿರ್ಮಿಸಿದ್ದರು. ಆದರೆ, ಅವುಗಳ ಒತ್ತುವರಿ ನಡೆದಿದೆ. ಸುಪ್ರೀಂ ಕೋರ್ಟ್‌ ಕೂಡ ಕೆರೆಗಳ ಒತ್ತುವರಿ ತಡೆಗಟ್ಟಿ ಸಂರಕ್ಷಣೆ ಮಾಡುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ ಎಂದರು.

ಜಿಲ್ಲೆಯ ಯಾವ ಗ್ರಾಮಗಳಲ್ಲಿ ಕೆರೆಗಳಿಲ್ಲ ಎನ್ನುವ ಬಗ್ಗೆ ಸರ್ವೆ ನಡೆಸಬೇಕು. ಅಂಥಹ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ಖರೀದಿಸಿ ಕೆರೆ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಂತ ಹಂತವಾಗಿ ಜಿಲ್ಲೆಯ ಪ್ರಮುಖ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸಲು ಕ್ರಮಕೈಗೊಳ್ಳಲಾಗುವುದು. ಹನೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಈ ಬಗ್ಗೆ ತ್ವರಿತವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

‘ರೈತರೇ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಜತೆಗೆ, ಇದಕ್ಕೆ ಅಗತ್ಯ ನೆರವು ಕೂಡ ಕಲ್ಪಿಸಲು ಬದ್ಧ. ಪಾಲಿಹೌಸ್‌ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೂ ಶೇ 70ರಷ್ಟು ಸಹಾಯಧನ ಕಲ್ಪಿಸಲು ಪರಿಶೀಲಿಸಲಾಗುವುದು. ಈ ಸಂಬಂಧ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀಡಿರುವ ಸೌಲಭ್ಯದ ಬಗ್ಗೆ ಪರಾಮರ್ಶೆ ನಡೆಸುತ್ತೇನೆ. ಕೃಷಿ ಸಚಿವರೊಂದಿಗೂ ಮಾತುಕತೆ ನಡೆಸುತ್ತೇನೆ’ ಎಂದರು.

‘ವೈಯಕ್ತಿಕ ಬೆಳೆ ವಿಮೆ ಪಾವತಿಯಲ್ಲಿನ ಗೊಂದಲದ ಬಗ್ಗೆ ಅರಿವಿದೆ. ಹಿಂದೆಯೂ ಈ ಸಮಸ್ಯೆ ಬಗೆಹರಿಸಲು ಸರ್ಕಾರದಮಟ್ಟದಲ್ಲಿ ಪ್ರಸ್ತಾಪಿಸಿದ್ದೇನೆ ಎಂದ ಅವರು, ಎಪಿಎಂಸಿಯಲ್ಲಿ ಬಿಳಿಚೀಟಿ ವ್ಯವಹಾರಕ್ಕೆ ಕಡಿವಾಣ ಹಾಕಲು ಕ್ರಮವಹಿಸಲಾಗುವುದು. ಶೀಘ್ರವೇ, ಈ ಸಂಬಂಧ ಅಧಿಕಾರಿಗಳು, ರೈತರು ಮತ್ತು ವರ್ತಕರ ಸಭೆ ನಡೆಸುತ್ತೇನೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಕ್ರಮ ಕರಿಕಲ್ಲು, ಬಿಳಿಕಲ್ಲು ಗಣಿಗಾರಿಕೆ ತಡೆಗೆ ಕ್ರಮಕೈಗೊಳ್ಳಲಾಗುವುದು. ರಾಜ್ಯದಲ್ಲಿ ಉತ್ತಮ ಮಳೆಯಾಗಿಲ್ಲ. ಜಿಲ್ಲೆಯೂ ಇದರಿಂದ ಹೊರತಲ್ಲ. ಕಬಿನಿ ಜಲಾಶಯದಲ್ಲಿ ಶೇ 35ರಷ್ಟು ನೀರಿನ ಸಂಗ್ರಹದ ಕೊರತೆಯಿದೆ. ಹಾಗಾಗಿ, ಕಬಿನಿ ಬಲದಂಡೆ ನಾಲೆಗೆ ನೀರು ಬಿಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೊಳ್ಳೇಗಾಲ ತಾಲ್ಲೂಕಿನ ಚೆಂಗಡಿ ಗ್ರಾಮದ ಸ್ಥಳಾಂತರದ ಬಗ್ಗೆ ಕ್ರಮವಹಿಸಲಾಗುತ್ತದೆ. ಜತೆಗೆ, ಮಲೆಮಹದೇಶ್ವರ ಸ್ವಾಮಿ ಪ್ರಾಧಿಕಾರದಿಂದ ಆ ಭಾಗದ ಗಿರಿಜನರ ಪೋಡುಗಳನ್ನು ದತ್ತುಪಡೆದು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಬಿ. ರಾಮು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್ ಆರ್‌. ಜೈನ್‌ ಹಾಜರಿದ್ದರು.

ಆಮೆಕೆರೆ ರೈತರಿಗೆ ಪರಿಹಾರ
ಚಾಮರಾಜನಗರ:  ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿರುವ ಆಮೆಕೆರೆ ಪ್ರದೇಶದ ರೈತರ ಜಮೀನು ಖರೀದಿಗಾಗಿ ಅರಣ್ಯ ಇಲಾಖೆಯಿಂದ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ.

ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಸ್‌.ಎಸ್‌. ಲಿಂಗರಾಜ ಮಾತನಾಡಿ, ‘101 ರೈತರಿಗೆ ಸೇರಿದ ಜಮೀನು ಖರೀದಿಗೆ ₹ 9 ಕೋಟಿ ಅನುದಾನ ಬೇಕಿದೆ. ಮೊದಲ ಹಂತದಲ್ಲಿ ₹ 1 ಕೋಟಿ ಬಿಡುಗಡೆಯಾಗಿದೆ. 1 ಎಕರೆಗೆ ₹ 2.75 ಲಕ್ಷ ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಡಿ ಸಮಿತಿ ಮೂಲಕ ರೈತರಿಗೆ ಪರಿಹಾರ ವಿತರಿಸಲಾಗುವುದು’ ಎಂದು ಸಭೆಗೆ ತಿಳಿಸಿದರು

ಸಭೆಯಲ್ಲಿ ರೈತ ಮುಖಂಡರ ಬೇಡಿಕೆಗಳ ಪಟ್ಟಿ
ಚಾಮರಾಜನಗರ: ‘ಕಬ್ಬು ಮತ್ತು ಬಾಳೆ ಬೆಳೆಗಾರರ ಸಾಲ ಮರುಪಾವತಿ ಅವಧಿ ವಿಸ್ತರಿಸಬೇಕು. ಕಾಡುಪ್ರಾಣಿಗಳ ಹಾವಳಿ ತಪ್ಪಿಸಬೇಕು. ಸಮರ್ಪಕ ರಸ್ತೆ ನಿರ್ಮಿಸಬೇಕು. ಸಾಲ ಮನ್ನಾ ಮಾಡಬೇಕು. ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಬೇಕು. ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಗ್ರಾ.ಪಂ. ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು...’

–ಇವು ನಗರದ ಕೆಡಿಪಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವ ಮಹದೇವಪ್ರಸಾದ್‌ ಅವರ ಮುಂದೆ ರೈತ ಮುಖಂಡರು ಮಂಡಿಸಿದ ಬೇಡಿಕೆಗಳ ಪಟ್ಟಿ.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಂಚಾಲಕ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿ, ‘ಶೂನ್ಯ ಬಡ್ಡಿದರದಡಿ ಸಾಲ ಮರುಪಾವತಿಗೆ 12 ತಿಂಗಳು ಕಾಲಾವಕಾಶ ನೀಡಲಾಗಿದೆ. ಇದರಿಂದ ಕಬ್ಬು, ಬಾಳೆ ಬೆಳೆಗಾರರಿಗೆ ತೊಂದರೆಯಾಗಿದೆ. ಈ ಫಸಲು ಕೈ ಸೇರಲು 12 ತಿಂಗಳು ಸಾಕಾಗುವುದಿಲ್ಲ’ ಎಂದರು.

ಹಾಗಾಗಿ, ಸಾಲ ಮರುಪಾವತಿ ಅವಧಿಯನ್ನು ಕನಿಷ್ಠ 16 ತಿಂಗಳಿಗೆ ವಿಸ್ತರಿಸಬೇಕು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ, 1 ಟನ್‌ ಕಬ್ಬಿಗೆ ₹ 3 ಸಾವಿರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ‘ನರೇಗಾ ಯೋಜನೆಯ ಉದ್ಯೋಗ ಚೀಟಿಗಳು ಗುತ್ತಿಗೆದಾರರ ಬಳಿ ಇವೆ. ಜನರಿಗೆ ಕಮಿಶನ್‌ ನೀಡಿ ಗುತ್ತಿಗೆದಾರರು ಕಾಮಗಾರಿ ಮಾಡಿಸುತ್ತಾರೆ. ಜಿಲ್ಲೆಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ. ಇದರಲ್ಲಿ ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ಶಾಮೀಲಾಗಿದ್ದಾರೆ. ತನಿಖೆ ನಡೆಸಿ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಕಾಡಂಚಿನ ಜನರಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡಬೇಕು. ನ್ಯಾಯಬೆಲೆ ಅಂಗಡಿಗಳ ಮೂಲಕ ಸಿರಿಧಾನ್ಯ ವಿತರಣೆಗೆ ಕ್ರಮವಹಿಸಬೇಕು ಎಂದು ಕೋರಿದರು.

ಯಳಂದೂರು ತಾಲ್ಲೂಕು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕರ ನಿರಾಕರಣೆ ಚಳವಳಿ ಇದೆ. ಕೃಷಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವವರೆಗೂ ಸೆಸ್ಕ್‌ಗೆ ಕರ ಪಾವತಿಸುವುದಿಲ್ಲ ಎಂದು ಹೋರಾಟ ನಡೆಸಲಾಗುತ್ತಿದೆ. ಹಳೆಯ ಬಾಕಿ ಮನ್ನಾ ಮಾಡಿದರೆ ಮುಂದಿನ ದಿನಗಳಲ್ಲಿ ವಿದ್ಯುತ್‌ ಶುಲ್ಕ ಪಾವತಿಸುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್‌ ಮಾತನಾಡಿ, ‘ರೈತರ ಉತ್ಪಾದನಾ ವೆಚ್ಚದ ಅನ್ವಯ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಶೀಘ್ರವೇ, ಕಬ್ಬಿನ ದರ ನಿಗದಿಪಡಿಸಬೇಕು. ಜಿಲ್ಲೆಯ ಎಲ್ಲ ಕೆರೆಗಳಲ್ಲಿ ಸಂಗ್ರಹಗೊಂಡಿರುವ ಹೂಳು ತೆಗೆಸಿ ನೀರು ತುಂಬಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡ ಕರಿಯಪ್ಪ ಮಾತನಾಡಿ, ಕೊಳ್ಳೇಗಾಲ ತಾಲ್ಲೂಕಿನ ಚೆಂಗಡಿ ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲ. ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಸೂಕ್ತ ಸ್ಥಳಾವಕಾಶ ಕಲ್ಪಿಸಿದರೆ ನಾವು ಬೇರೆಡೆಗೆ ಸ್ಥಳಾಂತರಕ್ಕೆ ಸಿದ್ಧರಾಗಿದ್ದೇವೆ ಎಂದರು. ಸಭೆಯಲ್ಲಿ ಮುಖಂಡರಾದ ಹೊನ್ನೂರು ಬಸವಣ್ಣ, ಮಾಡ್ರಳ್ಳಿ ಮಹದೇವಪ್ಪ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT