ADVERTISEMENT

ಕನ್ನಡದ ಬೆಳವಣಿಗೆಗೆ ಇಚ್ಛಾಶಕ್ತಿ ಕೊರತೆ

​ಪ್ರಜಾವಾಣಿ ವಾರ್ತೆ
Published 6 ಮೇ 2016, 9:50 IST
Last Updated 6 ಮೇ 2016, 9:50 IST

ಚಾಮರಾಜನಗರ: ‘ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಮಾತೃಭಾಷೆ ಕನ್ನಡದ ಬೆಳವಣಿಗೆ ಕುಂಠಿತಗೊಳ್ಳಲು ಮೂಲ ಕಾರಣವಾಗಿದೆ’ ಎಂದು ಸಾಹಿತಿ ಕೆ.ಎಂ. ವೀರಶೆಟ್ಟಿ ವಿಷಾದಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ಗುರುವಾರ ನಡೆದ ಪರಿಷತ್‌ನ 101ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತಿದೆ. ಇತರೇ ರಾಜ್ಯಗಳಿಗೆ ದೊರೆಯುತ್ತಿರುವ ಸೌಲಭ್ಯ ರಾಜ್ಯಕ್ಕೆ ಲಭಿಸುತ್ತಿಲ್ಲ ಎಂದರು.

ಪ್ರಸ್ತುತ ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಉದ್ಯೋಗ ಸಿಗುವುದಿಲ್ಲ ಎಂಬ ಮನೋಭಾವ ಬಲಗೊಂಡಿದೆ. ಹಾಗಾಗಿ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಕೂಗಿಗೆ ಬೆಲೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಪ್ಪಟ ಕನ್ನಡ ಮಾತನಾಡುವ ಪ್ರದೇಶಗಳಲ್ಲೂ ಅನ್ಯಭಾಷಿಗರು ಹಿಡಿತ ಸಾಧಿಸುತ್ತಿದ್ದಾರೆ. ಕಸಾಪ 101ನೇ ಸಂಸ್ಥಾಪನಾ ದಿನ ಆಚರಿಸುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಸಾಹಿತಿ ಕೆ. ವೆಂಕಟರಾಜು ಮಾತನಾಡಿ, ಪ್ರಾಚೀನ ಭಾಷೆಯಾದ ಕನ್ನಡ ತನ್ನತನ ಉಳಿಸಿಕೊಂಡಿದೆ. ಪರಿಪೂರ್ಣವಾಗಿ ಮಾತೃಭಾಷೆಯನ್ನು ಬಳಕೆ ಮಾಡಲು ಪ್ರತಿಯೊಬ್ಬರು ಮನಸ್ಸು ಮಾಡಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸುವ ಮೂಲಕ ಕನ್ನಡದ ಬೆಳವಣಿಗೆಗೆ ಶಕ್ತಿ ತುಂಬಿದರು ಎಂದು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಮ್ಮೇಳನ ಮಾಡುವ ಸಂಸ್ಥೆಯಾಗಿ ಉಳಿಯುವುದು ಬೇಡ. ಪ್ರತಿವರ್ಷ ಸಮ್ಮೇಳನ ಮಾಡುವ ಪರಿಪಾಠ ಸಲ್ಲದು. 3 ವರ್ಷಗಳ ಪರಿಷತ್ ಅವಧಿಯನ್ನು 5 ವರ್ಷಕ್ಕೆ ವಿಸ್ತರಿಸಬೇಕು. ಈ ಅವಧಿಯಲ್ಲಿ ಒಂದು ಸಮ್ಮೇಳನ ಮಾಡುವುದು ಒಳಿತು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಮಾತನಾಡಿ, ಪರಿಷತ್‌ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕನ್ನಡ ನಾಡು, ನುಡಿ ಹಾಗೂ ಜಲ ವಿಚಾರದಲ್ಲಿ ಹೋರಾಟ ಮಾಡಿದೆ. ಆಡಳಿತ ನಡೆಸುವ ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಬಿ.ಎಸ್. ವಿನಯ್, ಗೌರವ ಕಾರ್ಯದರ್ಶಿಗಳಾದ ಜಿ. ರಾಜಪ್ಪ, ಟಿ. ಬಂಗಾರ ಗಿರಿನಾಯಕ, ಕೋಶಾಧ್ಯಕ್ಷ ಎಸ್. ನಿರಂಜನ್‌ಕುಮಾರ್, ತಾಲ್ಲೂಕು ಅಧ್ಯಕ್ಷ ಬಿ. ಬಸವರಾಜು, ಸದಸ್ಯರಾದ ಹರದನಹಳ್ಳಿ ಬಸವರಾಜು, ಸಿ.ಎಂ. ನರಸಿಂಹಮೂರ್ತಿ, ಪ್ರಕಾಶ್, ನವಮಿ ಬಂಡಿಗೆರೆ, ಸಿದ್ದಮಲ್ಲಪ್ಪ, ಬಸವಣ್ಣ, ಸುರೇಶ್ ಋಗ್ವೇದಿ, ನಂಜುಂಡಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.