ADVERTISEMENT

ಕುಡಿಯುವ ನೀರಿನ ಸಮಸ್ಯೆ ಅನಾವರಣ

ನೇರ ಫೋನ್‌ ಇನ್‌ ಕಾರ್ಯಕ್ರಮ: 28 ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 9:01 IST
Last Updated 30 ಜನವರಿ 2017, 9:01 IST
ಕುಡಿಯುವ ನೀರಿನ ಸಮಸ್ಯೆ ಅನಾವರಣ
ಕುಡಿಯುವ ನೀರಿನ ಸಮಸ್ಯೆ ಅನಾವರಣ   
ಚಾಮರಾಜನಗರ: ಜಿಲ್ಲೆಯ ಗ್ರಾಮೀಣ, ಪಟ್ಟಣ, ನಗರ ಪ್ರದೇಶದ ವ್ಯಾಪ್ತಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವುದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅನುರಣಿಸಿತು.
 
ಕುಡಿಯುವ ನೀರಿನ ಸಮಸ್ಯೆ, ಉದ್ಯೋಗ ಖಾತ್ರಿ ಯೋಜನೆ, ಅಕ್ರಮ ಮದ್ಯ ಮಾರಾಟ, ಕೆರೆ ಒತ್ತುವರಿ ಸೇರಿದಂತೆ 28 ದೂರು ದಾಖಲಾದವು.
 
ಚಾಮರಾಜನಗರ ತಾಲ್ಲೂಕಿನ ಉತ್ತುವಳ್ಳಿ, ಗುಂಡ್ಲುಪೇಟೆ ತಾಲ್ಲೂಕಿನ ಚೌಡಳ್ಳಿ, ನಗರದ ಕೆಲವು ವಾರ್ಡ್‌ನ ನಿವಾಸಿಗಳು ಕರೆ ಮಾಡಿ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು.
 
ಲೊಕ್ಕನಹಳ್ಳಿ, ಹುತ್ತೂರು, ಚೌಡಳ್ಳಿ ಭಾಗದಿಂದ ಕರೆ ಮಾಡಿದ ಗ್ರಾಮಸ್ಥರು, ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಕೆಲಸ ನೀಡಲಾಗುತ್ತಿಲ್ಲ. ಜನರು ಉದ್ಯೋಗ ಹುಡುಕಿ ಗುಳೆ ಹೋಗುತ್ತಿದ್ದಾರೆ. ಕೆಲವೆಡೆ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೂ, ಕೆರೆ ಒತ್ತುವರಿ ತೆರವುಗೊಳಿಸಿಲ್ಲ ಎಂದು ಗಮನ ಸೆಳೆದರು.
 
ಅಂಕನಶೆಟ್ಟಿಮೋಳೆಯಿಂದ ಕರೆ ಮಾಡಿದ ವ್ಯಕ್ತಿಯಿಬ್ಬರು, ‘ಶವಸಂಸ್ಕಾರ ನೆರವು ಇನ್ನೂ ತಲುಪಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆದು ಒಂದು ವರ್ಷವಾಗಿದೆ. ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ’ ಎಂದು ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿ ಬಿ. ರಾಮು ಮಾತನಾಡಿ, ಶವಸಂಸ್ಕಾರ ನೆರವು ಧನ ಬಿಡುಗಡೆಯಾಗಿದೆ. ಶೀಘ್ರವೇ ತಲುಪಿಸಲಾಗುವುದು. ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವುದು ಎಂದರು.
 
ತಾಲ್ಲೂಕಿನ ಕೆಲ್ಲಂಬಳ್ಳಿ ಸಮೀಪ ಹೆದ್ದಾರಿಯಲ್ಲಿ ಅಕ್ರಮವಾಗಿ ಡಾಬಾ ಸೇರಿದಂತೆ ಇತರೆ ಹೋಟೆಲ್‌ಗಳು ತಲೆ ಎತ್ತಿವೆ. ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದರು.
 
ಕೊಳ್ಳೇಗಾಲ ಪಟ್ಟಣದ ಮುಖ್ಯ ರಸ್ತೆ, ಸರ್ಕಾರಿ ಜಮೀನಿನಲ್ಲಿ ಸಹ ಹೋಟೆಲ್, ಅಂಗಡಿಗಳನ್ನು ಪರವಾನಗಿ ಪಡೆಯದೆ ನಡೆಸಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರು ನೀಡಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಮು, ತಹಶೀಲ್ದಾರ್‌ಗಳು ಸ್ಥಳ ಪರಿಶೀಲನೆ ಮಾಡಿ ಅನುಮತಿ ಪಡೆಯದಿದ್ದರೆ ತೆರವುಗೊಳಿಸಬೇಕು ಎಂದು ಸೂಚಿಸಿದರು.
ಆಲೂರು ಗ್ರಾಮದಿಂದ ಕರೆ ಮಾಡಿದ ಗ್ರಾಮಸ್ಥರೊಬ್ಬರು, ಸ್ಥಳೀಯವಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಮಾರಾಟಕ್ಕೆ ಕ್ರಮ ತೆಗೆದುಕೊಂಡಿದ್ದರು. ಆದರೆ, ಇತ್ತೀಚೆಗೆ ಮತ್ತೆ ಅಕ್ರಮ ಮದ್ಯ ಮಾರಾಟ ಆರಂಭಗೊಂಡಿದೆ ಎಂದರು.
 
ಜಿಲ್ಲಾಧಿಕಾರಿ ರಾಮು ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ವಹಿಸುವುದಾಗಿ ತಿಳಿಸಿದರು.
 
ರಸ್ತೆ ಡಾಂಬರೀಕರಣ, ಚರಂಡಿ ಸ್ಪಚ್ಛತೆ, ಖಾತೆ ಬದಲಾವಣೆ, ಅಂಗಡಿ ಮಳಿಗೆಗಳ ವಿತರಣೆ ಸೇರಿದಂತೆ ಹಲವು ವಿಷಯ ಕುರಿತು ಫೋನ್ ಇನ್ ಕಾರ್ಯ ಕ್ರಮದಲ್ಲಿ ದೂರು  ಕೇಳಿಬಂದವು.
 
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ಕುಮಾರ್‌ ಆರ್‌. ಜೈನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.