ADVERTISEMENT

ಕುಡಿಯುವ ನೀರು; ಸಮಸ್ಯೆ ಹತ್ತಾರು!

ಅಮಿತ್ ಎಂ.ಎಸ್.
Published 20 ನವೆಂಬರ್ 2017, 7:06 IST
Last Updated 20 ನವೆಂಬರ್ 2017, 7:06 IST

ಚಾಮರಾಜನಗರ: ಬೆಳಕು ಹರಿಯುತ್ತಿದ್ದಂತೆಯೇ ಬೈಕ್‌, ಸೈಕಲ್‌ಗಳಲ್ಲಿ ನೀರಿನ ಕ್ಯಾನ್‌ ಇಟ್ಟುಕೊಂಡ ನಗರದ ನಿವಾಸಿಗಳು ಹೊರಡುವುದು ಶುದ್ಧ ಕುಡಿಯುವ ನೀರಿನ ಘಟಕಗಳತ್ತ. ಬೇಗನೆ ಹೋಗಿ ತಂದರೆ ಅದೃಷ್ಟ. ಇಲ್ಲವಾದರೆ, ಅಂಗಡಿಗಳಿಂದ ಖರೀದಿಸುವುದು ಅನಿವಾರ್ಯ. ಆದರೆ, ಘಟಕದ ಬಳಿ ಹೋದರೆ ಅದು ಇನ್ನೂ ತೆರೆದಿರುವುದಿಲ್ಲ. ಕೆಲವೊಮ್ಮೆ ಕೆಟ್ಟುಹೋಗಿದೆ ಎಂಬ ಉತ್ತರ ಬರುತ್ತದೆ.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಅಂಗಡಿಗಳಲ್ಲಿ ಸುಮಾರು ₹40 ತೆತ್ತು ಖರೀದಿಸುವ 20 ಲೀಟರ್‌ ನೀರು ಕೇವಲ ₹4ಕ್ಕೆ ದೊರಕುತ್ತಿದೆ. ಈ ಬಗ್ಗೆ ಸಾರ್ವಜನಿಕರು ಮೆಚ್ಚುಗೆಯ ಮಾತನ್ನಾಡುತ್ತಾರೆ. ಆದರೆ, ಅದರ ನಿರ್ವಹಣೆ ಕುರಿತು ಅಷ್ಟೇ ದೂರುಗಳನ್ನೂ ಹೇಳುತ್ತಾರೆ.

ಬಾಗಿಲೇ ತೆರೆಯುವುದಿಲ್ಲ: ನೀರಿನ ಘಟಕಗಳು ಬೆಳಿಗ್ಗೆ 6 ರಿಂದ 8 ಮತ್ತು ಸಂಜೆ 6 ರಿಂದ 8 ಗಂಟೆವರೆಗೆ ಕಾರ್ಯನಿರ್ವಹಿಸುತ್ತವೆ. ಹಾಗೆಂದು, ಘಟಕಗಳ ಮೇಲೆ ಬರೆದಿರುವ ಫಲಕ ತಿಳಿಸುತ್ತವೆ. ಆದರೆ, ಎಂದಿಗೂ ಬೆಳಿಗ್ಗೆ ಅಥವಾ ಸಂಜೆ ಸಮಯಕ್ಕೆ ಸರಿಯಾಗಿ ಅವು ತೆರೆಯುವುದಿಲ್ಲ. ಬಹುತೇಕ ಕಡೆ 7 ಗಂಟೆಯಾದರೂ ಘಟಕ ನಿರ್ವಹಿಸುವ ಸಿಬ್ಬಂದಿ ಅತ್ತ ಸುಳಿಯುವುದೇ ಇಲ್ಲ. ಇದರಿಂದ ಸಾರ್ವಜನಿಕರು ಅಲ್ಲಿಯೇ ಕಾಯುವುದೋ ಅಥವಾ ಬೇರೆ ಘಟಕದ ಕಡೆಗೆ ಹೋಗುವುದೋ ಎಂಬುದು ತಿಳಿಯದೆ ಚಡಪಡಿಸುವಂತಾಗುತ್ತದೆ.

ADVERTISEMENT

ಸಮೀಪದಲ್ಲಿ ಬೇರೆ ಘಟಕ ಇದ್ದರೂ, ಅಲ್ಲಿಯೂ ನೀರು ಸಿಗದೆ ಮತ್ತೆ ಬೇರೆಡೆ ಹುಡುಕುವ ಸ್ಥಿತಿ ಎದುರಾಗುತ್ತದೆ. ‘ವಿದ್ಯುತ್ ಇದ್ದರೆ ಮಾತ್ರ’ ಎಂಬ ಸೂಚನೆ ಈ ಘಟಕಗಳಲ್ಲಿದೆ. ವಿದ್ಯುತ್‌ ಇದ್ದ ಅವಧಿಯಲ್ಲಿಯೂ ಸರಿಯಾಗಿ ನೀರು ಸಿಗುತ್ತಿಲ್ಲ. ಸಿಬ್ಬಂದಿ ಬಂದು ಘಟಕ ಚಾಲೂ ಮಾಡುವವರೆಗೂ ಕಾಯಬೇಕು. ಇದರಿಂದ ಕಚೇರಿ, ಕೆಲಸಗಳಿಗೆ ಹೊರಡಲು ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಇನ್ನು ಕೆಲವು ಘಟಕಗಳು ಪದೇ ಪದೇ ಕೆಡುತ್ತಿವೆ. ರಾಮಸಮುದ್ರ, ಭ್ರಮರಾಂಬ ಬಡಾವಣೆ, ಪಿಡಬ್ಲ್ಯೂಡಿ ಕಾಲೊನಿ ಮುಂತಾದೆಡೆಗಳಲ್ಲಿನ ಘಟಕಗಳು ನೀರು ನೀಡುವ ದಿನಗಳಿಗಿಂತ ಮುಚ್ಚಿರುವ ದಿನಗಳೇ ಹೆಚ್ಚು. ಕೆಟ್ಟು ಹೋಗಿರುವುದರ ಬಗ್ಗೆ ಮಾಹಿತಿಯನ್ನೂ ಹಾಕುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ಚಿಲ್ಲರೆ ಸಮಸ್ಯೆ: ಕೆಲವು ತಿಂಗಳ ಹಿಂದೆ ₹1 ನಾಣ್ಯಕ್ಕೆ ಹತ್ತು ಲೀಟರ್‌ ನೀರು ದೊರಕುತ್ತಿತ್ತು. ಈಗ ₹2 ನಾಣ್ಯವನ್ನು ಬಳಸಬೇಕು. ಅದರಲ್ಲೂ ಎಲ್ಲ ನಾಣ್ಯಗಳೂ ಬಳಕೆಗೆ ಯೋಗ್ಯವಲ್ಲ. 2008–09ರ ಸಾಲಿನಲ್ಲಿ ಟಂಕಿಸಲಾದ ₹2 ನಾಣ್ಯವನ್ನೇ ಬಳಸಬೇಕಾಗಿದೆ. ಅದರ ಲಭ್ಯತೆ ತೀರಾ ಕಡಿಮೆ ಇರುವುದರಿಂದ ಜನರು ಚಿಲ್ಲರೆಗಾಗಿ ಪರದಾಡುವಂತಾಗಿದೆ.

ಕೆಲವು ಪ್ರಮುಖ ನಗರಿಗಳಲ್ಲಿ ₹1, ₹2 ಮತ್ತು ₹5ರ ವಿಭಿನ್ನ ನಾಣ್ಯಗಳನ್ನು ಬಳಸಲು ಅವಕಾಶವಿದೆ. ಇಲ್ಲಿಯೂ ಅಂತಹ ವ್ಯವಸ್ಥೆ ಅಳವಡಿಸಬೇಕು ಎನ್ನುವುದು ಅವರ ಆಗ್ರಹ.

ಅನೇಕ ಬಾರಿ ತಾಂತ್ರಿಕ ಸಮಸ್ಯೆಯಿಂದ ನಾಣ್ಯ ಹಾಕಲು ಆಗುವುದಿಲ್ಲ ಎಂದು ಸಿಬ್ಬಂದಿ ನೇರವಾಗಿ ನೀರು ಹರಿಸುತ್ತಾರೆ. ಜನರು ಅವರಿಗೇ ನೇರವಾಗಿ ಹಣ ನೀಡಿ ನೀರು ತುಂಬಿಸಿಕೊಳ್ಳುವಂತಾಗುತ್ತದೆ.

ಇನ್ನಷ್ಟು ಘಟಕಗಳಿಗೆ ಬೇಡಿಕೆ
‘ನಗರದಲ್ಲಿ 11 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳು ಇನ್ನೂ ಜಲಮಂಡಳಿಯ ಅಧೀನದಲ್ಲಿದ್ದು, ನಮಗೆ ಸಂಪೂರ್ಣ ಹಸ್ತಾಂತರ ಆಗಿಲ್ಲ. ನಿರ್ವಹಣೆ ಜವಾಬ್ದಾರಿ ಮಾತ್ರ ನಮಗೆ ನೀಡಲಾಗಿದೆ’ ಎಂದು ಪೌರಾಯುಕ್ತ ಎಂ. ರಾಜಣ್ಣ ತಿಳಿಸಿದರು.

‘ಘಟಕ ಕೆಟ್ಟು ಹೋದರೆ ಮೈಸೂರು ಅಥವಾ ಬೆಂಗಳೂರಿನಿಂದ ಪರಿಣತರು ಬರಬೇಕು. ಹೀಗಾಗಿ, ದುರಸ್ತಿ ಕಾರ್ಯ ವಿಳಂಬವಾಗುತ್ತದೆ. ಇನ್ನೂ ಕೆಲವೆಡೆ ಘಟಕ ಸ್ಥಾಪಿಸುವಂತೆ ಬೇಡಿಕೆಗಳು ಬಂದಿವೆ. ಈ ಸಂಬಂಧ ಶೀಘ್ರವೇ ಟೆಂಡರ್‌ ಹೊರಡಿಸಲಾಗುವುದು’ ಎಂದು ಹೇಳಿದರು. ಸಮಯಕ್ಕೆ ಸರಿಯಾಗಿ ಘಟಕ ತೆರೆಯುತ್ತಿಲ್ಲ ಎಂಬ ದೂರಿನ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.