ADVERTISEMENT

ಗೌರಿ ಹತ್ಯೆಗೆ ಖಂಡನೆ: ದಸಂಸ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:10 IST
Last Updated 8 ಸೆಪ್ಟೆಂಬರ್ 2017, 7:10 IST
ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಉಪತಹಶೀಲ್ದಾರ್ ಕಮಲಮ್ಮ ಅವರಿಗೆ ಮನವಿ ಸಲ್ಲಿಸಿದರು.
ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಉಪತಹಶೀಲ್ದಾರ್ ಕಮಲಮ್ಮ ಅವರಿಗೆ ಮನವಿ ಸಲ್ಲಿಸಿದರು.   

ಗುಂಡ್ಲುಪೇಟೆ: ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸಮಾವೇಶಗೊಂಡ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಗೌರಿ ಲಂಕೇಶ್ ಅವರನ್ನು ಅಮಾನವೀಯವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಘೋಷಣೆ ಕೂಗಿದರು.

ಗೌರಿ ಲಂಕೇಶ್ ಅವರು ಸಮಾಜದ ಅಂಕು, ಡೊಂಕುಗಳನ್ನು ತಮ್ಮ ಪತ್ರಿಕೆಯ ಮೂಲಕ ಸರಿಪಡಿಸುತ್ತಿದ್ದರು. ಆದರೆ ಕೋಮುವಾದಿ ಶಕ್ತಿಗಳು ಅವರ ವಿಚಾರಧಾರೆಗಳನ್ನು ಅರಗಿಸಿಕೊಳ್ಳಲಾರದೇ ಹೇಡಿತನವನ್ನು ಪ್ರದರ್ಶನಕ್ಕಿಟ್ಟಿವೆ ಎಂದು ದೂರಿದರು.

ಸಾಹಿತಿಗಳು ಹಾಗೂ ವಿಚಾರವಾದಿಗಳಾದ ಡಾ.ಎಂ.ಎಂ. ಕಲಬುರ್ಗಿ, ನರೇಂದ್ರ ಧಾಬೋಲ್ಕರ್, ಗೋವಿಂದ ಪನ್ಸಾರೆ, ಮಹಾರಾಷ್ಟ್ರದ ಅಂಬೇಡ್ಕರ್‌ವಾದಿ ಕೃಷ್ಣ ಕೀರ್‌ವಾಲೆ ಅವರ ಹತ್ಯೆಗಳಲ್ಲಿ ಸಾಮ್ಯತೆಯಿದೆ. ಹಾಗಾಗಿ, ಈ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ರಾಷ್ಟ್ರಭಕ್ತಿ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ನಡೆಯುತ್ತಿದೆ. ಅಸಹಿಷ್ಣುತೆ ಹೆಚ್ಚಾಗಿದ್ದು, ವ್ಯವಸ್ಥೆಯ ವಿರುದ್ಧ ಮಾತನಾಡದಂತೆ ನಿಯಂತ್ರಿಸಲಾಗುತ್ತಿದೆ ಎಂದು ಆರೋಪಿಸಿದರು.

ವಿಚಾರವಾದಿಗಳಿಗೆ ಬೆದರಿಕೆ ಯೊಡ್ಡುತ್ತಿರುವ ಆರೋಪಿಗಳನ್ನು ಶಿಕ್ಷಿಸುವಲ್ಲಿ ವಿಫಲ ಆಗುತ್ತಿರುವುದರಿಂದ ಇಂಥಹ ಕೃತ್ಯಗಳು ನಡೆಯುತ್ತಿದೆ. ವಿಚಾರವಂತರನ್ನು ಕಳೆದುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಗೌರಿ ಲಂಕೇಶ್ ಹತ್ಯೆ ಹಿಂದಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಜತೆಗೆ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಉಪತಹಶೀಲ್ದಾರ್ ಕಮಲಮ್ಮ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಪಾಳ್ಯ ಶ್ರೀನಿವಾಸ್, ನಾಗಯ್ಯ, ಸುಭಾಷ್ ಮಾಡ್ರಹಳ್ಳಿ, ಲೋಕೇಶ್ ಶೆಟ್ಟರಹುಂಡಿ, ಲಕ್ಕೂರು ಗಿರೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.