ADVERTISEMENT

ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

ಪೂರ್ವಭಾವಿ ಸಭೆ; ಹೆಚ್ಚುವರಿ ಜಿಲ್ಲಾಧಿಕಾರಿ ಅಧ್ಯಕ್ಷತೆ

​ಪ್ರಜಾವಾಣಿ ವಾರ್ತೆ
Published 9 ಮೇ 2017, 8:24 IST
Last Updated 9 ಮೇ 2017, 8:24 IST
ಚಾಮರಾಜನಗರ:  ಜಿಲ್ಲಾಡಳಿತದ ವತಿಯಿಂದ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ, ಸಂತಕವಿ ಸರ್ವಜ್ಞ, ದಲಿತ ವಚನಕಾರರು, ದೇವರ ದಾಸಿಮಯ್ಯ ಹಾಗೂ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸೋಮವಾರ ತೀರ್ಮಾನಿಸಲಾಯಿತು.
 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಮಹಾತ್ಮರ ಜಯಂತಿ ಆಚರಣೆಗೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಯಿತು.
 
ಇದೇ 20ರಂದು ದೇವರ ದಾಸಿಮಯ್ಯ ಜಯಂತಿ ಹಾಗೂ 23ರಂದು ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು.
 
ಚಾಮರಾಜೇಶ್ವರ ದೇವಾಲಯ ಬಳಿ ನಿಗದಿತ ದಿನಗಳಂದು ದೇವರ ದಾಸಿಮಯ್ಯ ಹಾಗೂ ಸರ್ವಜ್ಞರ ಭಾವಚಿತ್ರ ಮೆರವಣಿಗೆ ಏರ್ಪಡಿಸಲು ಹಾಗೂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ಅನುಮೋದಿಸಲಾಯಿತು.
 
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ‘ಮೆರವಣಿಗೆಗೆ ಅಗತ್ಯವಿರುವ ಕಲಾತಂಡಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಯೋಜಿಸಲಿದೆ. ಇನ್ನಿತರ ಅವಶ್ಯಕ ಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು. ಆಹ್ವಾನ ಪತ್ರಿಕೆ ಮುದ್ರಣ, ಮೆರವಣಿಗೆ ಮಾರ್ಗಗಳಲ್ಲಿ ಪೂರ್ಣಗೊಳಿಸಬೇಕಿರುವ ಕಾಮಗಾರಿ ಹಾಗೂ ಇತರೆ ಕೆಲಸಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗುವುದು’ ಎಂದರು.
 
‘ದಲಿತ ವಚನಕಾರರ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮಕ್ಕೂ ಜಿಲ್ಲಾಡಳಿತದ ವತಿಯಿಂದ ದಿನಾಂಕ ನಿಗದಿ ಮಾಡಲಾಗುತ್ತದೆ.
 
ಭಗವಾನ್ ಮಹಾವೀರರ ಜಯಂತಿ ಆಚರಣೆಯನ್ನೂ ಮಾಡಲಿದ್ದು ಸಮುದಾಯದ ಮುಖಂಡರು ದಿನಾಂಕ ಗೊತ್ತುಪಡಿಸುವ ಬಗ್ಗೆ ಅಭಿಪ್ರಾಯ ನೀಡಬೇಕು. ದಿನಾಂಕ ಅಂತಿಮವಾದ ಕೂಡಲೇ ಅಗತ್ಯ ಸಿದ್ಧತೆಗೆ ಕಾರ್ಯೋನ್ಮುಖರಾಗಲು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.
 
ವಿವಿಧ ಸಮುದಾಯದ ಮುಖಂಡರು, ಪ್ರತಿನಿಧಿಗಳು ಜಯಂತಿ ಆಚರಣೆ ಸಂಬಂಧ ಸಲಹೆಗಳನ್ನು ನೀಡಿದರು. ಸಿ. ವೆಂಕಟರಮಣ, ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನಾಗವೇಣಿ, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಶಾ. ಮುರಳಿ, ಮದ್ದೂರು ವಿರೂಪಾಕ್ಷ, ಸಿ.ಕೆ. ಮಂಜುನಾಥ್, ಗೋಪಾಲ್, ನಿಜಧ್ವನಿ ಗೋವಿಂದರಾಜು, ನಾಗರಾಜು, ಸುಂದರ್, ಗೋಪಾಲಕೃಷ್ಣ, ಕುಮಾರ್, ರಂಗಶೆಟ್ಟರ್, ಡಿ. ರಂಗಸ್ವಾಮಿ, ಸೋಮಶೇಖರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.