ADVERTISEMENT

ಜಾತಿ ವ್ಯವಸ್ಥೆ ಇರುವವರೆಗೂ ಶೋಷಣೆ

ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ; ಚಿಂತಕ ಪ್ರೊ.ಕೆ. ಮರುಳಸಿದ್ದಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:35 IST
Last Updated 4 ಮೇ 2017, 7:35 IST
ಡಾ.ಬಿ.ಆರ್. ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆಯಲ್ಲಿ ‘ಬುದ್ಧನಗೆಯ ತಾಯಿನದಿ’ ಕವನ ಸಂಕಲನವನ್ನು ಚಿಂತಕ ಪ್ರೊ.ಕೆ. ಮರುಳಸಿದ್ದಪ್ಪ ಬಿಡುಗಡೆ ಮಾಡಿದರು. ಭೈರಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಪ್ರೊ. ಶಿವಬಸವಯ್ಯ, ಪ್ರೊ. ಕೃಷ್ಣಮೂರ್ತಿ ಹನೂರು ಹಾಜರಿದ್ದರು
ಡಾ.ಬಿ.ಆರ್. ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆಯಲ್ಲಿ ‘ಬುದ್ಧನಗೆಯ ತಾಯಿನದಿ’ ಕವನ ಸಂಕಲನವನ್ನು ಚಿಂತಕ ಪ್ರೊ.ಕೆ. ಮರುಳಸಿದ್ದಪ್ಪ ಬಿಡುಗಡೆ ಮಾಡಿದರು. ಭೈರಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಪ್ರೊ. ಶಿವಬಸವಯ್ಯ, ಪ್ರೊ. ಕೃಷ್ಣಮೂರ್ತಿ ಹನೂರು ಹಾಜರಿದ್ದರು   

ಚಾಮರಾಜನಗರ: ‘ಸಮಾಜದಲ್ಲಿ ಎಲ್ಲಿಯವರೆಗೆ ಅಸಮಾನತೆ, ಮೇಲು–ಕೀಳು ಭೇದಭಾವ ಹೋಗುವುದಿಲ್ಲವೋ ಅಲ್ಲಿಯವರೆಗೂ ಶೋಷಣೆ ನಿಲ್ಲದು’ ಎಂದು ಹಿರಿಯ ಚಿಂತಕ ಪ್ರೊ.ಕೆ. ಮರುಳಸಿದ್ದಪ್ಪ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆ ಅಂಗ ವಾಗಿ ನಡೆದ ‘ಮಾತಿನ ಮಹಾಕಾವ್ಯ’ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ‘ಬುದ್ಧನ ಗೆಯ ತಾಯಿನದಿ’ ಕಾವ್ಯ ಸಂಕಲನ ಬಿಡು ಗಡೆಗೊಳಿಸಿ ಅವರು ಮಾತನಾಡಿದರು.

‘ಸಮಾನತೆಗೆ ಮಾರಕವಾಗಿರುವ ಜಾತಿ ವ್ಯವಸ್ಥೆಯ ನಿರ್ಮೂಲನೆಯಿಂದ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರೆಯಲಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವಿಲ್ಲದೆ. ಕೇವಲ ರಾಜಕೀಯವಾಗಿ ಸ್ವಾತಂತ್ರ್ಯ ಕಲ್ಪಿಸಿರು ವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಬೂಟಾಟಿಕೆಯಾಗಿದೆ’ ಎಂದರು.

‘ದೇಶದಲ್ಲಿ ಸಾವಿರಾರು ವರ್ಷದಿಂದ ನಡೆಯುತ್ತಿದ್ದ ಶೋಷಣೆಯ ನಿರ್ಮೂ ಲನೆಗೆ ಹಾಗೂ ಶೋಷಿತರ ನೋವಿನ ಕೂಗಿನಿಂದ ಅಂಬೇಡ್ಕರ್‌ ಜನಿಸಿದರು. ಶೋಷಿತರಿಗೆ ಆಶಾಕಿರಣವಾದರು. ಹೊಸ ಸಮಾಜ ನಿರ್ಮಾಣಕ್ಕೆ ಶ್ರಮಿಸಿ ದರು ಎಂದು ತಿಳಿಸಿದರು.

20ನೇ ಶತಮಾನದ ಮಹಾನ್‌ ಚಿಂತಕರಲ್ಲಿ ಅಂಬೇಡ್ಕರ್‌ ಮೊದಲಿಗರು ಎಂದ ಅವರು, ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧಿ ಜಗತ್ತಿನ ಪ್ರಭಾವಿ ವ್ಯಕ್ತಿಗಳು. ಇವರ ನಡುವೆ ವೈಚಾರಿಕ ವಾಗಿ ಹಲವು ಭಿನ್ನಾಭಿಪ್ರಾಯಗಳಿದ್ದರೂ ಅವು ಪರಸ್ಪರ ಪೂರಕವಾಗಿವೆ’ ಎಂದರು.

‘ಅಂಬೇಡ್ಕರ್‌ ಅವರು ಅಲ್ಪ ಸಂಖ್ಯಾತರಿಗೂ ಸಮಾನತೆ ಕಲ್ಪಿಸಿದವರು. ಮಹಿಳಾ ಸಮಾನತೆಗಾಗಿ ಶ್ರಮಿಸಿದರು. ಹಿಂದೂ ಕೋಡ್ ಬಿಲ್ ಅನುಷ್ಠಾನಕ್ಕೆ ತಂದಿಲ್ಲ ಎಂಬ ಕಾರಣಕ್ಕಾಗಿ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು’ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ಅಕ್ಷರವನ್ನು ಪಡೆಯಲು ಸಾಧ್ಯವಿಲ್ಲದ ವರ್ಗದಲ್ಲಿ ಅಂಬೇಡ್ಕರ್‌ ಜನಿಸಿ, ವಿಶ್ವದ ಮಹಾನ್‌ ಜ್ಞಾನಿಯಾ ದರು. ದೇಶದ ವರ್ಣ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರು’ ಎಂದು ತಿಳಿಸಿದರು.

‘ಹಿಂದೂ ತತ್ವ ಶ್ರೇಷ್ಠ ಎಂದು ನಂಬಿದ ಗಾಂಧೀಜಿ ಅವರನ್ನು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಬಿಳಿಯರು ರೈಲಿ ನಿಂದ ಹೊರಹಾಕಿ ಅವಮಾನಿಸಿ ದಾಗ ಅವರಿಗೆ ಭಾರತದಲ್ಲಿನ ಅಸ್ಪೃಶ್ಯತೆ ಬಗ್ಗೆ ಅರಿವಾಯಿತು. ಆದರೆ, ಅಂಬೇಡ್ಕರ್‌ ಹುಟ್ಟುವಾಗಲೇ ಅವಮಾನ ಮತ್ತು ಅಸ್ಪೃಶ್ಯತೆಯ ನೋವು ಅನುಭವಿಸಿದರು. ಹಾಗಾಗಿ, ಅವರು ಎಲ್ಲವನ್ನೂ ಪಡೆಯ ಬೇಕು ಎಂದು ಮುನ್ನುಗಿದ್ದರು’ ಎಂದರು.

‘ಸಂಸ್ಕೃತ, ಇಂಗ್ಲಿಷ್‌ ಸೇರಿದಂತೆ ಜಗತ್ತಿನ ಹಲವು ಭಾಷೆ ಕಲಿತು ಮಹಾನ್‌ ಜ್ಞಾನಿಯಾದರು. ಹಿಂದೂ ಸಮಾಜ ದಲ್ಲಿನ ಶ್ರೇಣಿಕೃತ ಜಾತಿ ಪದ್ಧತಿಯ ವಿರುದ್ಧ ಹೋರಾಡಿದರು’ ಎಂದ ಅವರು, ‘ದೇಶದಲ್ಲಿ ಎಲ್ಲಿಯವರೆಗೆ ಜಾತಿ ಪದ್ಧತಿ ಇರುತ್ತದೆಯೋ ಅಲ್ಲಿಯವರೆಗೂ ಅಂಬೇಡ್ಕರ್‌್ ಹಾಗೂ ಅವರ ಚಿಂತನೆ ಪ್ರಸ್ತುತವಾಗಿರುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಕೃಷ್ಣಮೂರ್ತಿ ಹನೂರು, ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ, ಸ್ನಾತಕೋತ್ತರ ಕೇಂದ್ರದ ಉಪನಿರ್ದೇಶಕ ಪ್ರೊ.ಶಿವಬಸವಯ್ಯ, ಉಪನ್ಯಾಸಕ ಭೈರಪ್ಪ ಹಾಜರಿದ್ದರು.

*
ಸಮುದಾಯ ಮತ್ತು ಸಮಾಜ ದಲ್ಲಿನ ಸವಾಲು, ಸಮಸ್ಯೆಗಳಿಗೆ ಅಂಬೇಡ್ಕರ್ ನೀಡಿರುವ ಸಂವಿಧಾನ ದಡಿ ಪರಿಹಾರವಿದೆ. ಈ ನಿಟ್ಟಿನಲ್ಲಿ ಜನರು ಆಲೋಚಿಸಬೇಕು.
-ಪ್ರೊ.ಕೆ. ಮರುಳಸಿದ್ದಪ್ಪ,
ಹಿರಿಯ ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT