ADVERTISEMENT

ಜಾರ್ಜ್‌ ವಿರುದ್ಧ ಅಪಪ್ರಚಾರ: ಖಾದರ್ ಆರೋಪ

ಪಿಎಫ್‌ಐ ನಿಷೇಧ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 6:28 IST
Last Updated 3 ಅಕ್ಟೋಬರ್ 2017, 6:28 IST
ಜಾರ್ಜ್‌ ವಿರುದ್ಧ ಅಪಪ್ರಚಾರ: ಖಾದರ್ ಆರೋಪ
ಜಾರ್ಜ್‌ ವಿರುದ್ಧ ಅಪಪ್ರಚಾರ: ಖಾದರ್ ಆರೋಪ   

ಚಾಮರಾಜನಗರ: ‘ಡಿವೈಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ಮುಂದುವರಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆಯೇ ವಿನಾ, ಸಿಐಡಿ ನೀಡಿದ ವರದಿ ತಪ್ಪು ಎಂದು ಹೇಳಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

ಗುಂಡ್ಲುಪೇಟೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್ ಪ್ರಕರಣದಲ್ಲಿ ಜಾರ್ಜ್‌ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೂ ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಪಿಎಫ್‌ಐ ಸಂಘಟನೆ ನಿಷೇಧಿಸಲು ಬಿಜೆಪಿ, ಸಂಘ ಪರಿವಾರ ಒತ್ತಾಯಿಸುತ್ತಿವೆ. ಪಿಎಫ್‌ಐ, ಬಜರಂಗದಳ ಮುಂತಾದವು ರಾಷ್ಟ್ರೀಯ ಸಂಘಟನೆಗಳಾಗಿವೆ. ನಿಷೇಧಿಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ನಾವು ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ADVERTISEMENT

ಬಿಜೆಪಿ ಪ್ರತಿ ವಿಷಯದಲ್ಲಿಯೂ ರಾಜಕೀಯ ಬೆರೆಸುತ್ತಿದೆ. ಮುಂದಿನ ದಸರಾ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ದಸರಾ ಒಂದು ಸಾಂಸ್ಕೃತಿಕ ಉತ್ಸವ. ಇಲ್ಲಿ ಪಕ್ಷಭೇದ ಮರೆತು, ಎಲ್ಲರೂ ಸೇರಿ ಕೆಲಸ ಮಾಡಬೇಕು. ಇಂತಹ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.

‘ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯ ಸರ್ಕಾರ ಮಾಡಿರುವ ಸಾಲ ಮನ್ನಾ ರೈತರಿಗೆ ಲಾಲಿಪಾಪ್ ಕೊಟ್ಟಂತೆ ಆಗಿದೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ರೈತರಿಗೆ ನೀವೂ ಒಂದು ಲಾಲಿಪಾಪ್‌ ಕೊಡಿಸಿ’ ಎಂದು ಸವಾಲು ಹಾಕಿದರು.

10 ದಿನದ ಒಳಗೆ ಕೆಲಸ ಪೂರ್ಣ: ಜಿಲ್ಲಾ ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್, ಚಾಮರಾಜನಗರ ಮಾತ್ರವಲ್ಲ, ರಾಜ್ಯದ ಎಲ್ಲ ಭಾಗಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಜಿಲ್ಲಾ ಕೇಂದ್ರದ ರಸ್ತೆ ಅಗಲೀಕರಣ ಕಾರ್ಯಕ್ಕೆ ಸಂಬಂಧಿಸಿದಂತೆ 10 ದಿನಗಳ ಒಳಗೆ ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಡಿಸೆಂಬರ್‌ ಅಂತ್ಯದ ಒಳಗೆ ಎಲ್ಲ ರಸ್ತೆ ಕಾಮಗಾರಿಗಳೂ ಪೂರ್ಣಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅದರಂತೆ ಕೆಲಸ ಚುರುಕುಗೊಳ್ಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಚಿವೆ ಎಂ.ಸಿ. ಮೋಹನಕುಮಾರಿ, ಕಾಡಾ ಅಧ್ಯಕ್ಷ ಎಚ್‌.ಎಸ್. ನಂಜಪ್ಪ, ಪುರಸಭೆ ಅಧ್ಯಕ್ಷ ಪಿ. ಗಿರೀಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ಎನ್‌. ನಟೇಶ್‌, ಜಿಲ್ಲಾಧಿಕಾರಿ ಬಿ. ರಾಮು ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ಮುನಿರಾಜು ಇದ್ದರು.

***
ಉಸ್ತುವಾರಿ ಬದಲು: ನುಣುಚಿಕೊಂಡ ಖಾದರ್

ಜಿಲ್ಲಾ ಉಸ್ತುವಾರಿಯ ಹೊಣೆಗಾರಿಕೆಯನ್ನು ಸಚಿವೆ ಎಂ.ಸಿ. ಮೋಹನಕುಮಾರಿ ಅವರಿಗೆ ವಹಿಸಲಾಗುತ್ತದೆ. ನಿಮಗೆ ಕೊಡಗು ಜಿಲ್ಲೆಯ ಉಸ್ತುವಾರಿ ನೀಡಲಾಗುತ್ತದೆ ಎನ್ನಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಖಾದರ್‌ ಜಾರಿಕೊಂಡರು.

‘ಉಸ್ತುವಾರಿ ಜವಾಬ್ದಾರಿ ನೀಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಮೋಹನಕುಮಾರಿ ಅವರು ಈ ಜವಾಬ್ದಾರಿ ಹೊರಲು ಎಲ್ಲ ಅರ್ಹತೆ ಹೊಂದಿದ್ದಾರೆ. ಅವರು ಉಸ್ತುವಾರಿ ಸಚಿವರಾದರೆ ಸಂತೋಷವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.