ADVERTISEMENT

ಜಿಲ್ಲಾದ್ಯಂತ ಅಂಬೇಡ್ಕರ್‌ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:44 IST
Last Updated 15 ಏಪ್ರಿಲ್ 2017, 5:44 IST
ಜಿಲ್ಲಾದ್ಯಂತ ಅಂಬೇಡ್ಕರ್‌ ಜನ್ಮದಿನಾಚರಣೆ
ಜಿಲ್ಲಾದ್ಯಂತ ಅಂಬೇಡ್ಕರ್‌ ಜನ್ಮದಿನಾಚರಣೆ   

ಚಾಮರಾಜನಗರ: ಜಿಲ್ಲಾದ್ಯಂತ ಸಂವಿ ಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯನ್ನು ಶುಕ್ರವಾರ ಅದ್ಧೂರಿಯಾಗಿ ಆಚರಿಸ ಲಾಯಿತು.ಜಿಲ್ಲಾ ಬಿಜೆಪಿ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತ ನಾಡಿ, ಅಂಬೇಡ್ಕರ್ ಹಾಗೂ ಬಸವಣ್ಣ ಅವರ ವಿಚಾರಧಾರೆ ಒಂದೇಯಾಗಿದೆ. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿಕೊಡುವ ಮೂಲಕ ದೇಶದ ಅಭಿ ವೃದ್ಧಿ ಹಾಗೂ ಸಮಾನತೆಗೆ ಶ್ರಮಿಸಿದರು ಎಂದು ತಿಳಿಸಿದರು.

ದಲಿತ ಮುಖಂಡ ವೆಂಕಟರಮಣ ಸ್ವಾಮಿ ಮಾತನಾಡಿ, ವಿಶ್ವದ ಮಹಾನ್ ನಾಯಕ ಅಂಬೇಡ್ಕರ್‌ ಅವರು ಸಮಾ ಜದ ಅಭಿವೃದ್ಧಿಗೆ ಶ್ರಮಿಸಿದರು. ಸದಾ ಅಧ್ಯಯನ ಶೀಲರಾಗಿ, ದೇಶಕ್ಕೆ ಅತ್ಯು ತ್ತಮ ಸಂವಿಧಾನ ನೀಡಿದರು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಆರ್. ಬಾಲರಾಜು ಮಾತನಾಡಿ, ಅಂಬೇಡ್ಕರ್ ಅವರು ಸಮ ಸಮಜದ ನಿರ್ಮಾಣಕ್ಕಾಗಿ ಶ್ರಮಿಸಿದರು. ಶಿಕ್ಷಣದಿಂದ ಮಾತ್ರ ಸಾಮಾಜಿಕ ಅಸಮಾನತೆ ಹೋಗಲಾಡಿ ಸಲು ಸಾಧ್ಯ ಎಂದರು.

ADVERTISEMENT

ಜಿ.ಪಂ ಸದಸ್ಯರಾದ ಆರ್. ಚಂದ್ರ ಕಲಾ, ಆರ್. ಬಾಲರಾಜು, ಸಿ.ಎನ್.ಬಾಲ ರಾಜು, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕೆರೆಹಳ್ಳಿ ಮಹದೇವ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಮಹದೇವು, ನೂರೊಂದುಶೆಟ್ಟಿ,  ಮುಖಂಡರಾದ ಪುಟ್ಟಸ್ವಾಮಿ, ಮಲ್ಲಿ ಕಾರ್ಜುನ್, ನಾಗಸುಂದ್ರಮ್ಮ, ವನಜಾಕ್ಷಿ, ಮಹೇಶ್, ಗಣೇಶ್ ದಿಕ್ಷೀತ್, ಚಾ.ಸಿ. ಗೋವಿಂದರಾಜು ಹಾಜರಿದ್ದರು.

ಜಿಲ್ಲಾ ಕಾಂಗ್ರೆಸ್: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಮನುವಾದಿಗಳ ಕುತಂತ್ರದಿಂದ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ಹಿನ್ನೆಡೆ ಯಾಗುತ್ತಿದೆ. ಈಗಾಗಲೇ, ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಮೀಸಲಾತಿ ಕಡಿತಗೊಳಿಸುವ ಸಂಚು ರೂಪಿಸುತ್ತಿದೆ. ಇದರ ಬಗ್ಗೆ ಅಂಬೇಡ್ಕರ್ ಅನುಯಾಯಿಗಳು ಎಚ್ಚರ ವಹಿಸಬೇಕು ಎಂದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ಅಂಬೇಡ್ಕರ್ ಅವರ ಆಶಯ ಈಡೇರಿಸುವ ನಿಟ್ಟಿನಲ್ಲಿ ಎಲ್ಲರು ಮುಂದಾಗಬೇಕು ಎಂದ ಅವರು, ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನ ಗೊಳಿಸುತ್ತಿದೆ. ಜಿಲ್ಲಾ ಕೇಂದ್ರದ ಸಮೀಪ ದಲ್ಲಿ ಬುದ್ಧ ವಿಹಾರ ಸ್ಥಾಪನೆಗೆ 25ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತ ನಾಡಿ, ಅಂಬೇಡ್ಕರ್ ಅವರು ಮಹಾನ್ ತತ್ವಜ್ಞಾನಿ. ಅವರು ಎಲ್ಲಾ ನೋವು ಗಳನ್ನು ಅನುಭವಿಸಿ ಸಮಾಜದ ಅಭಿ ವೃದ್ಧಿಗೆ ಶ್ರಮಿಸಿದರು. ಅವರ ಜಯಂತಿ ಆಚರಣೆ ಮಾಡುತ್ತಿರುವುದು ಅರ್ಥ ಪೂರ್ಣವಾಗಿದೆ ಎಂದು ತಿಳಿಸಿದರು.

ಶಾಸಕರಾದ ಎಂ.ಸಿ.ಮೋಹನ್‌ ಕುಮಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಜಿ.ಪಂ ಅಧ್ಯಕ್ಷ ರಾಮ ಚಂದ್ರ, ಉಪಾಧ್ಯಕ್ಷ ಎಸ್.ಬಸವ ರಾಜು, ಮುಖಂಡರಾದ ಕೆರೆಹಳ್ಳಿ ನವೀನ್, ಶಶಿಕಲಾ, ಕೆ.ಪಿ.ಸದಾಶಿವಮೂರ್ತಿ, ಬಿ.ಕೆ. ರವಿಕುಮಾರ್, ಕೆ.ನಾಗರಾಜು, ಎಚ್.ವಿ. ಚಂದ್ರು, ಮಹಮದ್ ಅಸ್ಗರ್ ಇತರರು ಇದ್ದರು.
ಬೌದ್ಧ ಮಹಾಸಭಾ: ನಗರದ ಸಾರನಾಥ ಬುದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾದಿಂದ ಡಾ.ಬಿ.ಆರ್. ಅಂಬೇ ಡ್ಕರ್‌ ಜನ್ಮ ದಿನ ಹಾಗೂ ಭಾರತೀಯ ಬೌದ್ಧ ಮಹಾಸಭಾದ ತಾಲ್ಲೂಕು ಶಾಖೆ ಉದ್ಘಾಟನಾ ಸಮಾರಂಭ ನಡೆಯಿತು.

ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜು, ಅಂಬೇಡ್ಕರ್ ಜನ್ಮ ದಿನವನ್ನು ವಿಶ್ವದಾದ್ಯಂತ ಆಚರಿಸಿ ಅವರ ಗುಣಗಾನ ಮಾಡಲಾಗುತ್ತಿದೆ ಎಂದರು.
ನಗರಸಭೆ ಸದಸ್ಯ ಎಸ್. ನಂಜುಂಡ ಸ್ವಾಮಿ, ಅಂಬೇಡ್ಕರ್‌ರ ಆದರ್ಶವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು. ಅವರ ಆಶಯ ಈಡೇರಿಸಲು ಮುಂದಾಗಬೇಕು ಎಂದರು.

ಬೌದ್ಧ ಬಿಕ್ಕು ಬಂತೆ ಬೋಧಿದತ್ತ, ಭಾರತೀಯ ಬೌದ್ಧ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಕಾರ್ಯ ದರ್ಶಿ ಮಧುಸೂದನ್, ಜಿಲ್ಲಾ ಕಾರ್ಯ ದರ್ಶಿ ನಂಜುಂಡಸ್ವಾಮಿ, ಮಹಿಳಾ ಘಟಕ ಉಪಾಧ್ಯಕ್ಷೆ ನಾಗಮ್ಮ ಇದ್ದರು.

ಅಂಬೇಡ್ಕರ್‌ ಬಡಾವಣೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ 126ನೇ ಜನ್ಮ ದಿನಚಾರಣೆಯನ್ನು ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ಅಂಬೇಡ್ಕರ್‌ ಅವರ 25ಅಡಿ ಎತ್ತರದ ಭಾವಚಿತ್ರ ಅನಾವರಣಗೊಳಿಸಿ ಆಚರಿಸ ಲಾಯಿತು. ಬಳಿಕ, ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಲಾವಿದರಾದ ಸಿ.ಕೆ.ವೇಣು ಪ್ರಕಾಶ್, ಸಿ.ಎನ್.ಸಂಪತ್‌ಕುಮಾರ್, ಸಿ.ಎಂ.ನರಸಿಂಹಮೂರ್ತಿ, ಜಯ ಕುಮಾರ್, ಮಹೇಶ್, ಕಿಶೋರ, ಸುನೀಲ್, ಗೌತಮ್ ಹಾಜರಿದ್ದರು.

ದಲಿತ ಸಂಘಟನೆಗಳ ಒಕ್ಕೂಟ: ದಲಿತ ಸಂಘಟನೆಗಳ ಒಕ್ಕೂಟದಿಂದ ಅಂಬೇ ಡ್ಕರ್‌ ಜಯಂತಿ ಆಚರಿಸಲಾಯಿತು.ಒಕ್ಕೂಟದ ಮುಖಂಡರು ಜಿಲ್ಲಾ ಡಳಿತ ಭವನದ ಮುಂಭಾಗ ಇರುವ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.ಮುಖಂಡರಾದ ಸಿ.ಎಂ.ಕೃಷ್ಣ ಮೂರ್ತಿ, ಸಿ.ಎಂ.ಶಿವಣ್ಣ, ರಂಗಸ್ವಾಮಿ, ಬಂಗಾರಸ್ವಾಮಿ, ರವಿಕುಮಾರ್, ನಾಗೇಶ್, ಮಧು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.