ADVERTISEMENT

ಜೀವನ ನಿರ್ವಹಣೆಗೆ ಹಗ್ಗಜಗ್ಗಾಟ

ಸಂತೇಮರಹಳ್ಳಿಯ ಬಡಗಲಮೋಳೆ ಗ್ರಾಮಸ್ಥರ ಪ್ಲಾಸ್ಟಿಕ್ ಹಗ್ಗದ ಕಾಯಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 11:32 IST
Last Updated 29 ಜುಲೈ 2016, 11:32 IST
ಜೀವನ ನಿರ್ವಹಣೆಗೆ ಹಗ್ಗಜಗ್ಗಾಟ
ಜೀವನ ನಿರ್ವಹಣೆಗೆ ಹಗ್ಗಜಗ್ಗಾಟ   

ಸಂತೇಮರಹಳ್ಳಿ: ಈ ಗ್ರಾಮದ ಬಹುತೇಕ ಎಲ್ಲ ಕುಟುಂಬಗಳು ಹಗ್ಗ ತಯಾರಿಕೆಯನ್ನೇ ಮುಖ್ಯ ಕಾಯಕವಾಗಿ ಮಾಡಿಕೊಂಡಿವೆ. ಹಗ್ಗ ತಯಾರಿಸಿ ಮಾರಾಟ ಮಾಡಿ ಬದುಕಿನ ಬಂಡಿ ಎಳೆಯುತ್ತಿದ್ದಾರೆ.

ಸಮೀಪದ ಬಡಗಲಮೋಳೆ ಗ್ರಾಮಸ್ಥರು ಹಲವು ವರ್ಷದಿಂದ ಈ ಕಾಯಕ ಮಾಡುತ್ತಿದ್ದು, ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಹಗ್ಗ ತಯಾರಿಸುವ ಕಸುಬು ಹೊರತುಪಡಿಸಿ ಗ್ರಾಮಸ್ಥರಿಗೆ ಯಾವುದೇ ಆರ್ಥಿಕ ಚಟುವಟಿಕೆಗಳಿಲ್ಲ. ಇದರಿಂದಲೇ ಕುಟುಂಬದ ನಿರ್ವಹಣೆ ನಡೆಸಬೇಕಿದೆ.

ಗ್ರಾಮಸ್ಥರು ಈ ಹಿಂದೆ ಜಮೀನುಗಳ ಬದುಗಳಲ್ಲಿ ದೊರೆಯುತ್ತಿದ್ದ ಬೂತಾಳೆ (ಕತ್ತಾಳೆ) ತಂದು ತೊಳೆದು ಒಣಗಿಸಿ ನಾರುಗಳಾಗಿ ಮಾಡಿ ಹಗ್ಗ ನೇಯ್ದು ಮಾರಾಟ ಮಾಡುತ್ತಿದ್ದರು. ಕಾಲಕ್ರಮೇಣ ಜಮೀನುಗಳಲ್ಲಿ ಬೂತಾಳೆ ನಶಿಸಿ ಹೋಯಿತು. ಇದರಿಂದ ಈ ಗ್ರಾಮದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ಅವರ ಕಣ್ಣು ಪ್ಲಾಸ್ಟಿಕ್‌ ಮೇಲೆ ಹರಿಯಿತು.

ಪಟ್ಟಣ ಮತ್ತು ನಗರ ಪ್ರದೇಶಗಳಿಗೆಹೋಗಿ ಬೃಹತ್‌ ಕಟ್ಟಡಗಳನ್ನು ಕಟ್ಟುವ ಸ್ಥಳಗಳಲ್ಲಿ ಖಾಲಿಯಾದ ಸಿಮೆಂಟ್ ಪ್ಲಾಸ್ಟಿಕ್ ಚೀಲಗಳನ್ನು ₹ 1ರಂತೆ ಖರೀದಿಸಿ ತರುತ್ತಾರೆ. ಬಳಿಕ ಕೆರೆ ಹಾಗೂ ನೀರು ಲಭ್ಯವಿರುವ ಕಡೆಗಳಲ್ಲಿ ತೊಳೆದು ಒಣಗಿಸುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಚೀಲದ ದಾರಗಳನ್ನು ಅಳಿಯುತ್ತಾರೆ. ನಂತರ ರಾಟೆಯಲ್ಲಿ ತಿರುಗಿಸಿ ಅನುಕೂಲ ಮತ್ತು ಗಾತ್ರಕ್ಕೆ ತಕ್ಕಂತೆ ಹಗ್ಗ ತಯಾರಿಸುತ್ತಾರೆ. ದನಗಳಿಗೆ ಕಟ್ಟಲು, ಗಾಡಿಗಳಿಗೆ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಸರಕು ಸಾಮಗ್ರಿ ಕಟ್ಟಲು ಈ ಪ್ಲಾಸ್ಟಿಕ್‌ ಹಗ್ಗ ಬಳಲಾಗುತ್ತದೆ.

ತಯಾರಾದ ಹಗ್ಗಗಳನ್ನು ಸಂತೇಮರಹಳ್ಳಿ, ತಿ. ನರಸೀಪುರ, ನಂಜನಗೂಡು ಸಂತೆ ಹಾಗೂ ಮೈಸೂರು, ಮಂಡ್ಯ, ಬೆಂಗಳೂರಿಗೆ ತೆರಳಿ ಮಾರಾಟ ಮಾಡುತ್ತಾರೆ. 5 ಮೀಟರ್‌ ಉದ್ದದ ಒಂದು ಜೊತೆ ಹಗ್ಗಕ್ಕೆ ₹ 20 ಹಾಗೂ ದಪ್ಪ ಹಗ್ಗಗಳಿಗೆ ₹ 30ರಿಂದ ₹ 40 ರವರೆಗೆ ಮಾರಾಟ ಮಾಡಿ ಬರುತ್ತಾರೆ.

‘ಪ್ರತಿದಿನ ಕುಟುಂಬದ ಸದಸ್ಯರು ನೂರು ಜೊತೆ ಹಗ್ಗ ತಯಾರು ಮಾಡುತ್ತಾರೆ. ಬೇರೆ ಸ್ಥಳಗಳಿಂದ ಪ್ಲಾಸ್ಟಿಕ್ ಚೀಲ ತಂದು ಹಗ್ಗ ತಯಾರು ಮಾಡಿ ಸಾಗಾಣಿಕೆ ವೆಚ್ಚ ಕಳೆದು ಒಂದು ಜೊತೆ ಹಗ್ಗಕ್ಕೆ ₹ 5 ಮಾತ್ರ ಲಾಭ ದೊರಕುತ್ತದೆ. ನಮಗೆ ಸರ್ಕಾರದಿಂದಲೇ ಸೌಲಭ್ಯ ಸಿಕ್ಕಿಲ್ಲ’ ಎನ್ನುವುದು ರಾಜು ಅವರ ಅಳಲು.
- ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.