ADVERTISEMENT

ಜುಲೈ 10ರಂದು ಕಸ ಗುಡಿಸುವ ಚಳವಳಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 9:50 IST
Last Updated 3 ಜುಲೈ 2017, 9:50 IST

ಚಾಮರಾಜನಗರ: ‘ನಗರದ ಖಾಸಗಿ ಬಸ್‌ ನಿಲ್ದಾಣದ ಸ್ವಚ್ಛತೆಗೆ ಆಗ್ರಹಿಸಿ ಜುಲೈ 10ರಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಕಸ ಗುಡಿಸುವ ಮತ್ತು ಕಸ ಹೊರುವ ಚಳವಳಿ ಮಾಡಲಾಗುವುದು’ ಎಂದು ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಭಾನುವಾರ ಹೇಳಿದರು.

ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ­ಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರ­ರೊಂದಿಗೆ ಅವರು ಮಾತನಾಡಿದರು. ‘ಜಿಲ್ಲಾ ಕೇಂದ್ರದಲ್ಲಿರುವ ಖಾಸಗಿ ಬಸ್‌ ನಿಲ್ದಾಣಕ್ಕೆ ಕಳೆದ ತಿಂಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ಮಾಲಿನ್ಯ ಹೆಚ್ಚಾಗಿದೆ. ಈ ಕುರಿತು ಕ್ರಮವಹಿಸುವಂತೆ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ, ಅವರು ಯಾವುದೇ ಕ್ರಮವಹಿಸಿಲ್ಲ’ ಎಂದು ಆರೋಪಿಸಿದರು.

ಬಸ್‌ ನಿಲ್ದಾಣದ ಸ್ವಚ್ಛತೆ ಬಗ್ಗೆ ಜಿಲ್ಲಾಡಳಿತ ಹಾಗೂ ನಗರಸಭೆಯ ಗಮನ ಸೆಳೆಯುವ ಉದ್ದೇಶದಿಂದ ಇದೇ 10ರಂದು ನಿಲ್ದಾಣದಲ್ಲಿ ಕಸ ಗುಡಿಸಿ ಹೊರಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ADVERTISEMENT

ಜಿಲ್ಲಾಡಳಿತ ನಿರ್ಲಕ್ಷ್ಯ: ಆಷಾಢದಲ್ಲಿ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ನಡೆಯುತಿತ್ತು. ಆದರೆ, ರಥಕ್ಕೆ ಬೆಂಕಿ ಬಿದ್ದ ಕಾರಣ ಈ ಬಾರಿಯ ರಥೋತ್ಸವ ರದ್ದಾಗಿದೆ. ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರೆ 6 ತಿಂಗಳಲ್ಲಿ ನೂತನ ರಥ ನಿರ್ಮಿಸಬಹುದಿತ್ತು. ಕಳೆದ ತಿಂಗಳು ಅರ್ಚಕರು, ಮುಜರಾಯಿ ಇಲಾಖೆ ಹಾಗೂ ಮುಖಂಡರೊಡನೆ ಚರ್ಚಿಸಿ ರಥೋತ್ಸವ ರದ್ದುಪಡಿಸಲಾಗಿದೆ. ಇಲ್ಲದಿದ್ದರೆ ಮುಂದಿನ ಭಾನುವಾರ ರಥೋತ್ಸವ ನಡೆಯಬೇಕಿತ್ತು ಎಂದರು.

ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯ ವಿಳಂಬವಾಗಬಾರದು. ಜತೆಗೆ, ಹೊಸ ರಥ ನಿರ್ಮಾಣಕ್ಕಾಗಿ ಹೊರ ರಾಜ್ಯದಿಂದ ಪರಿಣಿತರನ್ನು ಕರೆಯಿಸಿ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಗಡಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪಾಕ್ಯೇಜ್‌ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯನ್ನು ಗೆಸ್ಟ್‌ಹೌಸ್‌ ಮಾಡಿಕೊಂಡಿ­ದ್ದಾರೆ. ಇದು ಸರಿಯಲ್ಲ. ಎಲ್ಲ ಅಧಿಕಾರಿಗಳು ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮುಖಂಡರಾದ ಶಿವಲಿಂಗಮೂರ್ತಿ, ನಾಗರಾಜ್‌ ಮೂರ್ತಿ, ದಳಪತಿ ವೀರತಪ್ಪ, ನಾಗೇಶ್‌, ಬಸವಣ್ಣ, ಮಹೇಶ್‌, ಮಹದೇವ ನಾಯಕ, ಚನ್ನಂಜಯ, ದೊಡ್ಡ ಮಾದಯ್ಯ, ಲಿಂಗನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.