ADVERTISEMENT

ದೇಶಭಕ್ತಿಯ ಕಿಚ್ಚು ಹಚ್ಚಿದ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2014, 9:10 IST
Last Updated 23 ಆಗಸ್ಟ್ 2014, 9:10 IST
ಯಳಂದೂರು ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕಾವ್ಯಕುಂಚ ಕಾರ್ಯಕ್ರಮದಲ್ಲಿ ದೇಶಭಕ್ತಿ ಸಾರುವ ಚಿತ್ರ ರಚಿಸಿದ ಆದರ್ಶ ಶಾಲೆಯ ವಿದ್ಯಾರ್ಥಿಗಳು
ಯಳಂದೂರು ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕಾವ್ಯಕುಂಚ ಕಾರ್ಯಕ್ರಮದಲ್ಲಿ ದೇಶಭಕ್ತಿ ಸಾರುವ ಚಿತ್ರ ರಚಿಸಿದ ಆದರ್ಶ ಶಾಲೆಯ ವಿದ್ಯಾರ್ಥಿಗಳು   

ಯಳಂದೂರು: ವಂದೇ ಮಾತರಂ, ಭಾರತಾಂಬೆ ನಿನ್ನ ಜನುಮ ದಿನ, ಏ ಮೇರಾ ಇಂಡಿಯಾ, ಹುಟ್ಟುದ್ಯಾಕೆ ಸಾಯೋದ್ಯಾಕೆ, ಹೀಗೆ ಒಂದೊಂದು ರಾಷ್ಟ್ರಭಕ್ತಿ ಹೆಚ್ಚಿಸುವ ಗೀತೆಗಳಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಚಿಣ್ಣರು ಒಂದೆಡೆಯಾದರೆ, ರಾಷ್ಟ್ರ ಭಕ್ತಿ ಉಕ್ಕಿಸುವ ಗೀತೆ ಮುಗಿಯುವ ಒಳಗೆ ಕಾವ್ಯ ಕುಂಚದ ಮೂಲಕ ಚಿತ್ರ ರಚಿಸಿ ಸೇರಿದ್ದ ಪ್ರೇಕ್ಷಕರ ಚಪ್ಪಾಳೆ ಶಿಳ್ಳೆ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳು ಮತ್ತೊಂದೆಡೆ.

ಇದು ಪಟ್ಟಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸ್ವಾತಂತ್ರಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ. ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಆದರ್ಶ, ಕಸ್ತೂರಬಾ ಗಾಂಧಿ ಬಾಲಿಕಾ ಶಾಲೆ, ನಿರಂಜನ, ಎಸ್‌ಡಿವಿಎಸ್‌, ಲಯನ್ಸ್‌ ಶಾಲೆಯ ಪುಟಾಣಿ ಮಕ್ಕಳು ದೇಶಭಕ್ತಿ ಗೀತೆಗೆ ನೃತ್ಯ ಮಾಡುವ ಮೂಲಕ ಸಭಿಕರನ್ನು ರಂಜಿಸಿದರು.

ಮೋಡಿ ಮಾಡಿದ ಕಾವ್ಯಕುಂಚ: ಆದರ್ಶ ಶಾಲೆಯ ವಿದ್ಯಾರ್ಥಿಗಳಾದ ಪ್ರಜ್ವಲ್‌್, ಆಶಾ, ನಿಶ್ವಿತ ಎಂಬ ಮೂವರು ವಿದ್ಯಾರ್ಥಿಗಳು ದ.ರಾ ಬೇಂದ್ರೆ ವಿರಚಿತ  ಅಶ್ವತ್ಥ್ ಹಾಡಿರುವ ದೇಶ ಭಕ್ತಿ ಗೀತೆಗೆ ತ್ರಿವರ್ಣ ಧ್ವಜದ ರಂಗುಗಳನ್ನು ಬಳಿದು ಹಾಡು ಮುಗಿಯುವುದರೊಳಗೆ ಚಿತ್ರದಲ್ಲಿ  ಹಿಂದು, ಕ್ರೈಸ್ತ, ಮುಸಲ್ಮಾನರ ಏಕತೆ ಸಾರುವ ಚಿತ್ರ ರಚಿಸಿ, ಅದಕ್ಕೆ ನಮಿಸುತ್ತಿರುವ ವಿದ್ಯಾರ್ಥಿಗಳ ಚಿತ್ರ ಬರೆದು ನೆರೆದಿದ್ದವರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದ್ದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.