ADVERTISEMENT

ಪೀಡಿಸಿ ಆನಂದಿಸುವುದು ವಿಕೃತಿಗಳ ಮನೋಭಾವ

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್‌.ಜೆ ಕೃಷ್ಣ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 8:48 IST
Last Updated 22 ಮಾರ್ಚ್ 2018, 8:48 IST

ಕೊಳ್ಳೇಗಾಲ: ‘ರ್‍ಯಾಗಿಂಗ್ ಒಂದು ಮನೋಜಾಡ್ಯ. ಇನ್ನೊಬ್ಬರನ್ನು ಪೀಡಿಸಿ, ಅಪಹ್ಯಾಸಕ್ಕೀಡು ಮಾಡಿ ತಾವು ಆನಂದಿಸುವುದು ವಿಕೃತಿಗಳ ಮನೋಭಾವ’ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್‌.ಜೆ ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ವತಿಯಿಂದ ನಡೆದ ರ್‍ಯಾಗಿಂಗ್ ಪಿಡುಗು - ಕಾನೂನು ಅರಿವು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರ್‍ಯಾಗಿಂಗ್ ಪಿಡುಗು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿಯೇ ಕಾಣಸಿಗುತ್ತಿರುವುದು ದುರ್ದೈವ. ಯಾವುದೇ ವಿದ್ಯಾಲಯದಲ್ಲಿ ಭಯ, ಆತಂಕಗಳು ಮನೆ ಮಾಡದೆ ಮುಕ್ತ ಕಲಿಕೆಯ ವಾತಾವರಣವಿರಬೇಕು ಎನ್ನುವುದು ಕಾನೂನಿನಲ್ಲಿ ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಪ್ರಜ್ಞಾವಂತರು ಹಾಗೂ ಹೊಣೆ ಅರಿಯುವಂತೆ ಮಾಡುವುದು ಶಿಕ್ಷಣ ಸಂಸ್ಥೆಗಳ ಹಾಗೂ ಸರ್ಕಾರದ ಜಾವಾಬ್ದಾರಿ ಮಾತ್ರವಲ್ಲ, ಕುಟುಂಬ ಮತ್ತು ಸಮಾಜದ ಹೊಣೆಗಾರಿಕೆ ಕೂಡ ಆಗಿದೆ ಎಂದು ಹೇಳಿದರು.

ADVERTISEMENT

ವಕೀಲರಾದ ನಿರ್ಮಲಾ ಮಧುಸೂದನ್ ಮಾತನಾಡಿ, ಮಕ್ಕಳು ಹಾಗೂ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿದೆ ಸಮಾಜದ ಜತೆ ಒಡನಾಡುವುದನ್ನು ಕಲಿಸಬೇಕು. ಎಲ್ಲರ ಜೊತೆ ಬೆರೆತಾಗ ಉತ್ತಮ ನಡವಳಿಕೆಗಳನ್ನು ರೂಪಿಸಿಕೊಳ್ಳುತ್ತಾರೆ. ಹಿರಿಯ, ಕಿರಿಯ, ಎನ್ನುವ ಭಾವನೆಗಳನ್ನು ಅಳಿಸಿ ಮಾನವೀಯ ಮೌಲ್ಯಗಳನ್ನು ಬೆಳಿಸಿದ್ದೇ ಆದರೆ ರ್‍ಯಾಗಿಂಗ್‌ನಂಥ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ಉಮೇಶ, ಸಹಾಯಕ ಸರ್ಕಾರಿ ವಕೀಲ ಎಂ. ನಾಗೇಶ್, ವಕೀಲರ ಸಂಘದ ಅಧ್ಯಕ್ಷ ಡಿ.ಎಸ್ ಬಸವರಾಜು, ಕಾರ್ಯದರ್ಶಿ ಎನ್ ಬಸವರಾಜು, ಭಾರತ ವಿಕಾಸ್ ಪರಿಷತ್ ಅಧ್ಯಕ್ಷ ವೆಂಕಟಾಚಲ, ಕೆ.ಆರ್ ಉಮಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.