ADVERTISEMENT

ಪ್ರಶಸ್ತಿ ಪಡೆದ ಗ್ರಾಮದಲ್ಲೇ ನೀರಿಗೆ ಬರ..!

ನೀರಿಗಾಗಿ ಸಾಲುಗಟ್ಟಿ ನಿಲ್ಲುವ ಜನ, ನಿತ್ಯದ ಅವಶ್ಯಕತೆಗಾಗಿ ಅಲೆದಾಡುವ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 11 ಮೇ 2017, 7:43 IST
Last Updated 11 ಮೇ 2017, 7:43 IST
ಪ್ರಶಸ್ತಿ ಪಡೆದ ಗ್ರಾಮದಲ್ಲೇ ನೀರಿಗೆ ಬರ..!
ಪ್ರಶಸ್ತಿ ಪಡೆದ ಗ್ರಾಮದಲ್ಲೇ ನೀರಿಗೆ ಬರ..!   
ಗುಂಡ್ಲುಪೇಟೆ:   ರಾಜ್ಯ ಪ್ರಥಮ ಜಿ.ಪಿ.1 ಗ್ರಾಮ ಪಂಚಾಯಿತಿ ಹಾಗೂ ಎರಡು ಬಾರಿ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ಹಂಗಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನತೆ ನೀರಿಗಾಗಿ ಅಲೆದಾಡುವಂತಾಗಿದೆ.
 
ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ ಕಾಮಗಾರಿ ನಡೆಯುತ್ತಿದ್ದಾಗ ನೀರು ಪೂರೈಸುವ ಪೈಪ್‌ ಒಡೆದಿದ್ದರಿಂದ ನೀರು ಪೂರೈಕೆಯಾಗುತ್ತಿಲ್ಲ.
 
15ದಿನಗಳಿಂದ ಇದೇ ಪರಿಸ್ಥಿತಿ ಇದ್ದು ಗ್ರಾಮದ ಮಹಿಳೆಯರು, ಮಕ್ಕಳು ಎಲ್ಲಿ ನೀರು ಸಿಗುತ್ತದೆ ಅಲ್ಲಿಗೆ ಹೋಗಬೇಕಾಗಿದೆ. ಅಲ್ಲದೇ ವಿದ್ಯುತ್ ಇದ್ದಾಗ ದೂರದ ಜಮೀನುಗಳಲ್ಲಿರುವ ಕೊಳವೆಬಾವಿಯಿಂದ ಹೊತ್ತು ತರಬೇಕಾಗಿದೆ.
 
ಗ್ರಾಮಕ್ಕೆ ತಾತ್ಕಾಲಿಕವಾಗಿ ಪೂರೈಸುತ್ತಿರುವ ಟ್ಯಾಂಕರ್‌ ನೀರು ಇಲ್ಲಿಯ ಜನರಿಗೆ ಏತಕ್ಕೂ ಸಾಲುವುದಿಲ್ಲ. ಬೆಳಿಗ್ಗೆ ಟ್ಯಾಂಕರ್‌ ಬರುತ್ತದೆ ಎಂದಾದರೆ ರಾತ್ರಿಯೇ ಕೊಡ ಇಟ್ಟುಕೊಂಡು ಪಾಳಿಯಲ್ಲಿ ನಿಂತಿರುತ್ತಾರೆ. ಆದದೂ ಅರ್ಧದಷ್ಟು ಜನರಿಗೂ ಕೊಡ ನೀರು ಸಿಗುತ್ತಿಲ್ಲ ಎಂಬುದು ಹಲವರು ದೂರಿದ್ದಾರೆ. 
 
ಪೈಪ್‌ ಒಡೆದು ಚರಂಡಿ ಸೇರುತ್ತಿರುವ ನೀರನ್ನೇ ಕೆಲವರು ಬಳಕೆಗೆಯಾದರೂ ಉಪಯೋಗಿಸಬಹುದು ಎಂದು ಚೊಂಬಿನಿಂದ ತುಂಬುತ್ತಿರುವ ದೃಶ್ಯ ಗ್ರಾಮದಲ್ಲಿ ಕಾಣಬಹುದು.  
 
ಸಮಸ್ಯೆ ಬಗೆಹರಿಸಿಲ್ಲ: ತಾಲ್ಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಕಾಡಾ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಇದ್ದರೂ ಸಹ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಗುಂಡ್ಲುಪೇಟೆಯಿಂದ ಗ್ರಾಮಕ್ಕೆ ಬರುವಾಗ ಸಿಗುವ ವಾಲ್ಮೀಕಿ ಬಡಾವಣೆಯಲ್ಲಿ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಬಡಾವಣೆಯ ನಿವಾಸಿಗಳು ದೂರಿದರು.
 
ಮಂಗಳವಾರ ಬೆಳಿಗ್ಗೆ ಮಹಿಳೆಯರು ಸೇರಿದಂತೆ ಕೂಲಿ ಕಾರ್ಮಿಕರು, ವೃದ್ಧರು ನೀರಿಗಾಗಿ ಸಾಲುಗಟ್ಟಿ ನಿಂತಿದ್ದರು. ಆದರೆ ನೀರು ಬರಲಿಲ್ಲ ಇದರಿಂದ ಸಾಲು ದೊಡ್ಡದಾಯಿತೆ. ಹೋರತು ನೀರಿನ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಆಗ ನೀರು ಪೂರೈಕೆಯಾಯಿತು.
 
ಆದರೆ ಅಷ್ಟರಲ್ಲಿ  ಪೈಪ್‌ ಒಡೆದಿತ್ತು. ಕಾದು ನಿಂತಿದ್ದ ಮಹಿಳೆಯರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಗಮನಿಸಿದೆ  ನೀರು ತುಂಬಿಕೊಳ್ಳಲು ಮುಂದಾದರು. ಚರಂಡಿ ಪಕ್ಕದ ಪೈಪ್‌ ಒಡೆದ    ಪರಿಣಾಮ ನೀರು ರಸ್ತೆಯಲ್ಲಿ ಹರಿಯತೊಡಗಿತು. 
 
15 ದಿನದಿಂದ ನೀರಿಗಾಗಿ ಕಾದು ಸುಸ್ತಾದ ಜನರು ರಸ್ತೆಯಲ್ಲಿಯೇ ಚರಂಡಿ ನೀರಿನ ಜೊತೆ ಹರಿಯುತ್ತಿದ್ದ  ಕಲುಷಿತ ನೀರನ್ನು ಸಂಗ್ರಹಿಸತೊಡಗಿದರು. 
‘ರಸ್ತೆಯ ಕಾಮಗಾರಿ ಶುರುವಾದಾಗಿನಿಂದ ನಮಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ.
 
ಟ್ಯಾಂಕರ್ ಮೂಲಕ ಒದಗಿಸಿದರೂ ಎಲ್ಲರಿಗೂ ಸಿಗುತ್ತಿಲ್ಲ. ದಿನನಿತ್ಯದ ಬಳಕೆಗೂ ಸಹ ಪರದಾಡಬೇಕಾಗಿದೆ. ಬಾಣಂತಿಯರನ್ನು ಮನೆಯಲ್ಲಿ ಇಟ್ಟುಕೊಂಡು ಕಷ್ಟ ಪಡುವಂತಾಗಿದೆ’ ಎಂದು ಸಮಸ್ಯೆ ಹೇಳಿಕೊಂಡರು ಗ್ರಾಮದ ಗೌರಮ್ಮ.
****
ಸಮಸ್ಯೆ ಪರಿಹರಿಸಲು ಕ್ರಮ
ಗುಂಡ್ಲುಪೇಟೆ:
ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಪೈಪ್‌ಲೈನ್ ಒಡೆದಿದ್ದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಅಲ್ಲದೆ  ಬಹುತೇಕ ಅಂತರ್ಜಲ ಕುಸಿದಿದೆ. ಅದಕ್ಕಾಗಿ ಪಕ್ಕದ ಹಿರಿಕೆರೆಯಲ್ಲಿ ಕೊಳವೆಬಾವಿ ಕೊರೆಸಲು ತೀರ್ಮಾನಿಸಲಾಗಿದೆ.
 
ನೀರು ಸಿಕ್ಕರೆ ಬಹುತೇಕ ಸಮಸ್ಯೆ ಪರಿಹಾರವಾಗುವುದು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ಗ್ರಾಮಸ್ಥರಿಗೆ ನೀರು ಪೂರೈಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.