ADVERTISEMENT

ಬಾಹುಬಲಿ ಪ್ರತಿಮೆ ಪ್ರತಿಷ್ಠಾಪನೆಗೆ ಸಜ್ಜು

ಜ. 16ರಿಂದ ಕನಕಗಿರಿ ಅತಿಶಯ ಮಹೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 7:11 IST
Last Updated 13 ಜನವರಿ 2017, 7:11 IST
ಚಾಮರಾಜನಗರ: ತಾಲ್ಲೂಕಿನ ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಭಗವಾನ್‌ ಬಾಹುಬಲಿ ಪ್ರತಿಮೆಯ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ.
 
ಕನಕಗಿರಿಯು ಪ್ರಸಿದ್ಧ ಯಾತ್ರಾ ಸ್ಥಳ. ರಾಜ್ಯದ ಏಕೈಕ ಪ್ರಾಚೀನ ಸಿದ್ಧ ಕ್ಷೇತ್ರ. ಬೆಟ್ಟದ ದರ್ಶನ ಪಡೆಯಲು 300 ಮೆಟ್ಟಿಲು ಹತ್ತಬೇಕಿದೆ. ಪ್ರತಿವರ್ಷ ಸಾವಿರಾರು ಯಾತ್ರಿಕರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.
 
ಕನಕಗಿರಿಯಲ್ಲಿ ಜ. 16ರಿಂದ ಫೆ. 5ರವರೆಗೆ ಕನಕಗಿರಿ ಅತಿಶಯ ಮಹೋತ್ಸವ ಜರುಗಲಿದೆ. ವೈಭವಯುತವಾಗಿ ಕಾರ್ಯಕ್ರಮ ಆಯೋಜನೆಗೆ ಮಹೋತ್ಸವದ ಸಮಿತಿಯಿಂದ ಸಿದ್ಧತೆಯೂ ನಡೆದಿದೆ. ಜ. 16ರಂದು ವಾಸ್ತು ವಿಧಾನ ಶ್ರೀಬಲಿ ವಿಧಾನ ನಡೆಯಲಿದೆ. ಜ. 17ರಂದು ನವಗ್ರಹ ವಿಧಾನ, ಜ. 18ರಂದು ಭಕ್ತಾಮರ ವಿಧಾನ, ಜ. 19ರಂದು ಕಲ್ಯಾಣ ಮಂದಿರ ವಿಧಾನ, ಜ. 20ರಂದು ಚತುಃಷಷ್ಠಿ ವಿಧಾನ, ಜ. 21ರಂದು ಸರ್ವದೋಷ ಪ್ರಾಯಶ್ಚಿತ್ತ ವಿಧಾನ, ಜ. 22ರಂದು ಗಣಧರ ವಲಯ ವಿಧಾನ ನಡೆಯಲಿದೆ.
 
ಜ. 23ರಂದು ಕರ್ಮದಹನ ವಿಧಾನ, ಜ. 24ರಂದು ಕಲಿಕುಂಡಲ ವಿಧಾನ, ಜ. 25ರಂದು ಋಷಿಮಂಡಲ ವಿಧಾನ, ಜ. 26ರಂದು ಜಿನಸಹಸ್ರನಾಮ ವಿಧಾನ, ಜ. 27ರಂದು ವಜ್ರಪಂಜರ ವಿಧಾನ, ಜ. 28ರಂದು ಶಾಂತಿಚಕ್ರ ವಿಧಾನ, ಜ. 29ರಂದು ನಾಗಾರ್ಜುನ ವಿಧಾನ, ಜ. 30ರಂದು ಯಾಗಮಂಡಲ ವಿಧಾನ ಮತ್ತು ಜ. 31ರಂದು ಅರಿಷ್ಟನೇಮಿ ಜಗನ್ಮಂಗಲ ವಿಧಾನ ನಡೆಯಲಿದೆ.
 
ಆರೋಗ್ಯ ತಪಾಸಣೆ:
‘ಮಹೋತ್ಸವದ ಅಂಗವಾಗಿ ಜ.18ರಿಂದ 22ರವರೆಗೆ ಜನಕಲ್ಯಾಣ ಯೋಜನೆಯಡಿ 5,555 ಜನರಿಗೆ ಪ್ರತಿದಿನ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಹೃದಯ, ನೇತ್ರ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ತಪಾಸಣೆಯೂ ನಡೆಯಲಿದೆ. 1,111 ದಿವ್ಯಾಂಗರಿಗೆ ಕೃತಕ ಕಾಲು ಮತ್ತು ಉಪಕರಣ ವಿತರಿಸಲಾಗುವುದು’ ಎಂದು ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
 
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಲೇಖನ ಸಾಮಗ್ರಿ ವಿತರಿಸಲಾಗುವುದು ಎಂದರು.
 
ಜ. 26ರಂದು ಸಂತ ನಿವಾಸದ ಉದ್ಘಾಟನೆ ನಡೆಯಲಿದೆ. ಫೆ. 1ರಂದು ಧಾನ್ಯ ಮಂದಿರದ ಉದ್ಘಾಟನೆಯಿದೆ. ಫೆ. 2ರಂದು ಕ್ಷೇತ್ರದಲ್ಲಿ 18 ಅಡಿ ಎತ್ತರದ ಬಾಹುಬಲಿ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತದೆ. ಜತೆಗೆ, ಪ್ರಥಮ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಹೇಳಿದರು. 
 
ಫೆ. 3ರಂದು ಸರ್ವಧರ್ಮ ಸಮಾವೇಶ ನಡೆಯಲಿದೆ. ಫೆ. 4ರಂದು ಧಾರ್ಮಿಕ ಸಮ್ಮೇಳನ ಜರುಗಲಿದೆ. ಫೆ. 5ರಂದು ಬೃಹತ್‌ ಗಜರಥ ಮಹೋತ್ಸವ ನಡೆಯಲಿದೆ ಎಂದರು.
 
ಸುದ್ದಿಗೋಷ್ಠಿಯಲ್ಲಿ ಮಹೋತ್ಸವದ ಸಮಿತಿಯ ಕಾರ್ಯಾಧ್ಯಕ್ಷ ಎಂ.ಎ. ಸುಧೀರ್‌ಕುಮಾರ್, ಉಪಾಧ್ಯಕ್ಷರಾದ ಆರ್‌.ಎಸ್. ವರ್ಧಮಾನಯ್ಯ, ಎಂ.ಆರ್. ಸುನಿಲ್‌ಕುಮಾರ್‌, ಕಾರ್ಯದರ್ಶಿ ಹರೀಶ್‌ ಹೆಗ್ಡೆ, ದಯಾನಂದ ಸ್ವಾಮೀಜಿ ಹಾಜರಿದ್ದರು.
 
**
ಜೀವನದಲ್ಲಿ ತ್ಯಾಗ ಎಂಬುದು ಕಠಿಣ. ದಿಗಂಬರ ಜೈನಮುನಿ ಗಳು ಮಾತ್ರ ಈ ಕಠಿಣ ಸಾಧನೆ ಮಾಡು ತ್ತಾರೆ. ಜೈನ ಧರ್ಮದಲ್ಲಿ ಮಾತ್ರ ಅತ್ಯಂತ ಕಠಿಣ ತಪಸ್ಸು ಕಾಣಬಹುದು. ಮುನಿಗಳ ತಪಸ್ಸಿನಿಂದ ದೇಶದಲ್ಲಿ ಶಾಂತಿ ನೆಲೆಸಿದೆ
-ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ,
ಶ್ರೀಕ್ಷೇತ್ರ ಕನಕಗಿರಿ
 
***
ಪ್ರಸನ್ನ ಸಾಗರ ಮಹಾರಾಜರ ಪುರಪ್ರವೇಶ 
‘ಕಾಲ್ನಡಿಗೆಯಲ್ಲಿ ಜೈನಮುನಿಗಳು ಮಾಡುವ ಸಾಧನೆ ಅನನ್ಯವಾದುದು’ ಎಂದು ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಕನಕಗಿರಿಯಲ್ಲಿ ಗುರುವಾರ ನಡೆದ ಅಂತರ್ಮನಾ ಮುನಿಶ್ರೀ ಪ್ರಸನ್ನ ಸಾಗರ ಮಹಾರಾಜರ ಪುರಪ್ರವೇಶ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಕ್ಷೇತ್ರಕ್ಕೆ ಯಾವುದೇ ಗಣ್ಯವ್ಯಕ್ತಿಗಳನ್ನು ಆಹ್ವಾನಿಸ ಬಹುದು. ಆದರೆ, ಮುನಿಗಳನ್ನು ಆಹ್ವಾನಿಸುವುದು ಕಷ್ಟ. ಪ್ರಸನ್ನ ಸಾಗರ ಮಹಾರಾಜರು ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಾಹುಬಲಿಯ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.