ADVERTISEMENT

ಬಿಳಿಗಿರಿರಂಗನಬೆಟ್ಟದಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 8:44 IST
Last Updated 15 ಸೆಪ್ಟೆಂಬರ್ 2017, 8:44 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿವಿಐಪಿ ಅತಿಥಿ ಗೃಹದ ಸುತ್ತುಗೋಡೆ ಮಳೆಯಿಂದ ಕುಸಿದಿರುವುದು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿವಿಐಪಿ ಅತಿಥಿ ಗೃಹದ ಸುತ್ತುಗೋಡೆ ಮಳೆಯಿಂದ ಕುಸಿದಿರುವುದು   

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಗಿರಿಧಾಮ ಬಿಳಿಗಿರಿರಂಗನಬೆಟ್ಟದಲ್ಲಿ ಗುರುವಾರ ಜೋರು ಮಳೆ ಸುರಿಯಿತು. ಮಳೆಯ ರಭಸಕ್ಕೆ ಬೆಟ್ಟದಿಂದ ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 54 ರಸ್ತೆಯ ಬದಿಯ ಮಣ್ಣು ಕುಸಿಯಿತು. ಇದರಿಂದಾಗಿ ಬೆಟ್ಟಕ್ಕೆ ತೆರಳಿದ್ದ ವಾಹನ ಸವಾರರು ಕೆಲ ಸಮಯ ಪರದಾಡುವ ಸ್ಥಿತಿ ಉಂಟಾಯಿತು.
ಕಳೆದ ಒಂದು ವಾರದಿಂದಲೂ ಬೆಟ್ಟದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಇಲ್ಲಿನ ನಿವಾಸಿಗಳಲ್ಲಿ ಹರ್ಷ ಮೂಡಿಸಿದೆ.

ಬೆಟ್ಟದ ಅಂಚಿನಲ್ಲಿರುವ ಕೃಷ್ಣಯ್ಯನ ಕಟ್ಟೆ, ಬೆಲ್ಲವತ್ತ ಡ್ಯಾಂ, ಗೌಡಹಳ್ಳಿ ಡ್ಯಾಂ ಸೇರಿದಂತೆ ಬೆಟ್ಟದ ಬಹುತೇಕ ಕೆರೆಕಟ್ಟೆಗಳು ತುಂಬಿದ್ದು ಖಗ ಮೃಗಗಳ ದಾಹ ನೀಗಲಿದೆ. ಗಿರಿಕಂದರ ಹಸಿರಿನಿಂದ ಕಂಗೊಳಿಸುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮಳೆಗೆ ಕುಸಿದ ಸುತ್ತುಗೋಡೆ: ಕಳಪೆ ಕಾಮಗಾರಿ ಮತ್ತು ಪಿಲ್ಲರ್ ಇಲ್ಲದ ನಿರ್ಮಾಣದಿಂದ ವಿವಿಐಪಿ ಪ್ರವಾಸಿ ಮಂದಿರದ ಸುತ್ತುಗೋಡೆ ರಭಸವಾಗಿ ಸುರಿದ ಮಳೆಗೆ ಕುಸಿದಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲೇ ಅನೇಕರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ, ಗುತ್ತಿಗೆದಾರರು ಬಿಲ್ ಮಾಡಿಸಿಕೊಂಡಿ ದ್ದಾರೆ ಎಂದು ಸ್ಥಳೀಯರಾದ ಮಾದೇ ಗೌಡ, ಜಡೇಗೌಡ ಆರೋಪಿಸಿದ್ದಾರೆ.

ADVERTISEMENT

ಗೋಡೆ ಕುಸಿದು ಯುವಕನಿಗೆ ಗಾಯ
ಚಾಮರಾಜನಗರ: ಮನೆಯ ಗೋಡೆ ಕುಸಿದು ಯುವಕನೊಬ್ಬ ಗಾಯ ಗೊಂಡಿರುವ ಘಟನೆ ನಗರದ ಚನ್ನಿಪುರ ಮೋಳೆಯಲ್ಲಿ ಬುಧವಾರ ನಡೆದಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ನಾಗಮ್ಮ ಎಂಬುವವರ ಮನೆ ಗೋಡೆ ಶಿಥಿಲಗೊಂಡಿತ್ತು. ಬುಧವಾರ ಸಂಜೆ ಇದ್ದಕ್ಕಿದ್ದಂತೆ ಗೋಡೆ ಕುಸಿದು ಬಿದ್ದಿದೆ. ಈ ವೇಳೆಯಲ್ಲಿ ಮನೆಯಲ್ಲಿದ್ದ ನಾಗಮ್ಮ ಅವರ ಮಗ ಮಣಿಕಂಠ ಗಾಯಗೊಂಡಿದ್ದಾರೆ.

ಅಕ್ಕಪಕ್ಕದ ಮನೆಯವರು ತಕ್ಷಣ ಗೋಡೆಯ ಅವಶೇಷಗಳನ್ನು ತೆರವುಗೊಳಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಶಾಸಕ ಸಿ. ಪುಟ್ಟರಂಗಶೆಟ್ಟಿ ಘಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟುಂಬದ ಸದಸ್ಯರಿಗೆ ಸ್ಥಳದಲ್ಲೇ ವೈಯಕ್ತಿಕ ಪರಿಹಾರ ನೀಡಿದರು. ಬಳಿಕ, ಮಳೆಯಿಂದ ಹಾನಿಯಾದ ಮನೆಗಳ ಪಟ್ಟಿ ತಯಾರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಿದರು.

ಈ ವೇಳೆ ಸ್ಥಳೀಯರು ಜಾಲಹಳ್ಳಿ ಹುಂಡಿಯಲ್ಲಿರುವ ಕೊಳವೆಬಾವಿಯಿಂದ ಪೂರೈಕೆಯಾಗು ತ್ತಿರುವ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಿದೆ. ಹೀಗಾಗಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಶಾಸಕರ ಗಮನಕ್ಕೆ ತಂದರು. ನಗರಸಭೆಯ ಮಾಜಿ ಸದಸ್ಯ ನಾಗರಾಜು, ಉಪತಹಶೀಲ್ದಾರ್ ಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.