ADVERTISEMENT

ಬಿಳಿಗಿರಿರಂಗನಬೆಟ್ಟ ಅಭಿವೃದ್ಧಿಗೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 8:29 IST
Last Updated 14 ಜುಲೈ 2017, 8:29 IST

ಯಳಂದೂರು: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.  ದೇಗುಲದ ಅಭಿವೃದ್ಧಿಗೆ ಕಾಳಜಿ ನೀಡುತ್ತಿಲ್ಲ ಎಂಬ ಅಸಮಾಧಾನ ಕೇಳಿಬಂದಿದೆ.

ಇಲ್ಲಿನ ರಂಗನಾಥನ ದೇಗುಲ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಭಕ್ತರಿಗೆ ಉಳಿಯಲು ಅಗತ್ಯ ವಸತಿ ಸೌಲಭ್ಯಗಳಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿಬಂದಿವೆ.
ದೇಗುಲದ ಭಕ್ತರಾದ ವೆಂಕಟೇಶ, ಗೋವಿಂದ, ನಾರಾಯಣಸ್ವಾಮಿ, ‘ಬೆಟ್ಟದಲ್ಲಿ ಬಸ್ ನಿಲ್ದಾಣ ನಿರ್ಮಾಣ ನನೆಗುದಿಯಲ್ಲಿದೆ. ವಾರಾಂತದಲ್ಲಿ  ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಆದರೆ, ಪ್ರಯಾಣಿಕರ ಸಂಚಾರ ಒತ್ತಡಕ್ಕೆ ಅನುಗುಣವಾಗಿ ಬಸ್ ನಿಲ್ದಾಣವೇ ಇಲ್ಲವಾಗಿದೆ’ ಎಂದು ವಿಷಾದಿಸಿದರು.

ಪ್ರವಾಸಿಗರು ಇಲ್ಲಿನ ಮಂಟಪ ಅಥವಾ ಮರದ ನೆರಳನ್ನೇ ಆಶ್ರಯಿಸುವ ಸ್ಥಿತಿಯಿದೆ.  ನಿಲ್ದಾಣ ಅಭಿವೃದ್ಧಿ ಉದ್ದೇಶಕ್ಕೆ 1 ಎಕರೆ ಭೂಮಿ ಗುರುತಿಸಿದ್ದರೂ ಕಾಮಗಾರಿ ಆರಂಭಗೊಂಡಿಲ್ಲ.

ADVERTISEMENT

ಉದ್ಘಾಟನೆಯಾಗದ ಯಾತ್ರಿ ಭವನ: ಇನ್ನು ಪ್ರವಾಸೋದ್ಯಮ ಇಲಾಖೆ ₹ 1.78 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಯಾತ್ರಿ ಭವನ ಉದ್ಘಾಟನೆಗೊಂಡಿಲ್ಲ. ಏಕ ಮಾತ್ರ ಶೌಚಾಲಯವಿದೆ. ಜನರಿಗೆ ಸಮಸ್ಯೆಯಾಗಿದೆ ಎನ್ನುತ್ತಾರೆ ವಿಜಯ ಹಾಗೂ ಮೂರ್ತಿ.

ಹೊಸ ರಥ ಇಲ್ಲ: ದೇಗುಲದ ಮಾಜಿ ಧರ್ಮದರ್ಶಿ ಎನ್‌.ದೊರೆಸ್ವಾಮಿ, ‘ದೊಡ್ಡ ರಥ ಶಿಥಿಲವಾಗಿದೆ. ನವ ತೇರಿಗೆ ಬೇಡಿಕೆ ಸಲ್ಲಿಸಲಾಗಿದೆ. ದೇಗುಲದ ನಿಧಿಯಿಂದ ವೆಚ್ಚ ಭರಿಸಬೇಕೆಂಬುದು ರಥ ನಿರ್ಮಾಣಕ್ಕೆ ಅಡ್ಡಿಯಾಗಿದೆ’ ಎಂದರು.

ದೇಗುಲಕ್ಕೆ ₹ 2.40 ಕೋಟಿ: ಈ ಕುರಿತು ಗಮನಸೆಳೆದಾಗ  ದೇಗುಲದ ಕಾರ್ಯನಿರ್ವಹಕಾಧಿಕಾರಿ ವೆಂಕಟೇಶ್ ಪ್ರಸಾದ್ ವಿವಿಧ ಅಭವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ ಎಂದರು.

‘ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ₹ 2.40 ಕೋಟಿ ಹಣವನ್ನು ದೇಗುಲದ ಜರ್ಣೋದ್ಧಾರಕ್ಕೆ ಬಿಡುಗಡೆ ಮಾಡಿದ್ದು, ‘ಪರಂಪರಾ’ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಗುತ್ತಿಗೆ ಪಡೆದಿದೆ. ಕಾಮಗಾರಿ ಸಾಗುತ್ತಿದೆ’ ಎಂದರು.

ಮೂಲ ರೂಪದಲ್ಲೇ ದೇಗುಲ  ಪುನರ್ ಪ್ರತಿಷ್ಠಾಪಿಸಲು ಪ್ರತಿ ಕಂಬ, ಚಾವಣಿಯ ಕಲ್ಲುಗಳನ್ನು ಗುರುತಿಸಲಾಗಿದೆ. ಹಳೆಯ ಸುಣ್ಣದ ಗೋಡೆ ತೆರವು, ದ್ವಾರಮಂಟಪದ ನವೀಕರಣ ಕಾಮಗಾರಿ ಮುಗಿದಿದೆ ಎಂದರು. ಒಟ್ಟಾರೆ 20 ತಿಂಗಳ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.