ADVERTISEMENT

ಬುದ್ಧ ಪೂರ್ಣಿಮೆಯ ಬೆಳಕು ಪಸರಿಸಲಿ

ಬುದ್ಧನ ಜಯಂತ್ಯುತ್ಸವದಲ್ಲಿ ಬಂತೆ ಬೋಧಿದತ್ತ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮೇ 2017, 7:38 IST
Last Updated 11 ಮೇ 2017, 7:38 IST
ಚಾಮರಾಜನಗರ: ‘ಬುದ್ಧ ಪೂರ್ಣಿಮೆಯ ಬೆಳಕು ಎಲ್ಲರ ಬದುಕಿನಲ್ಲಿ ಪಸರಿಸಬೇಕು. ಎಲ್ಲರು ಧಮ್ಮ ಉಪದೇಶ ಕೇಳಿ ಜ್ಞಾನವಂತರಾಗಬೇಕು’ ಎಂದು ಇಂಟರ್‌ನ್ಯಾಷಿನಲ್‌ ಮಾಂಕ್ಸ್‌ ಚಾರಿಟಬಲ್‌್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಂತೆ ಬೋಧಿದತ್ತ ಹೇಳಿದರು.
 
ನಗರದ ಸಾಮ್ರಾಟ್‌್ ಅಶೋಕ ರಸ್ತೆಯಲ್ಲಿರುವ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಸಾರನಾಥ ಬೌದ್ಧ ವಿಹಾರ ಕೇಂದ್ರದಲ್ಲಿ ಬುಧವಾರ ನಡೆದ 2,561ನೇ ವೈಶಾಖ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಬುದ್ಧ ಮಾನವ ಕುಲದ ಬೆಳಕು. ಸಾಮಾನ್ಯ ಮನುಷ್ಯನಂತೆ ಜನಿಸಿದರು. ಮನುಷ್ಯರಿಗಿಂತ 32 ವಿಶೇಷ ಲಕ್ಷಣ ಹೊಂದಿದ್ದರು. ಅವರು ಹುಟ್ಟಿದ ತಕ್ಷಣವೇ 7 ಹೆಜ್ಜೆ ನಡೆದು ಇದು ನನ್ನ ಕೊನೆಯ ಜನ್ಮ ನಾನು ಬುದ್ಧನಾಗುತ್ತೇನೆ ಎಂದು ಮಾತನಾಡಿದರು. 4ನೇ ವಯಸ್ಸಿನಲ್ಲಿ ಕಾಡಿನಲ್ಲಿ ಒಬ್ಬರೇ ಧ್ಯಾನ ಮಾಡುತ್ತಿದ್ದರು’ ಎಂದರು.
 
‘ಬುದ್ಧ ಬೋಧಿಸಿದ ತತ್ವಗಳಲ್ಲಿ ಮುಖ್ಯವಾದುವು ದುಃಖ ಸತ್ಯ, ದುಃಖ ಮೂಲ, ದುಃಖ ನಿರೋಧ ಹಾಗೂ ದುಃಖ ನಿರೋಧ ಮಾರ್ಗ ಎಂಬ 4 ಆರ್ಯ ಸತ್ಯಗಳು. ಇವುಗಳನ್ನೇ ಆರ್ಯ ಅಷ್ಟಾಂಗ ಮಾರ್ಗ ಎಂದು ಕರೆಯುತ್ತಾರೆ’ ಎಂದು ತಿಳಿಸಿದರು.
 
‘ಬುದ್ಧ ೮೦ನೇ ವಯಸ್ಸಿನಲ್ಲಿ ಬಿಹಾರದ ವೈಶಾಲಿಯಲ್ಲಿ ಬೋಧನೆ ಮಾಡುತ್ತಿದ್ದ ವೇಳೆಯಲ್ಲಿ ತನ್ನ ಮರಣ ಸಮೀಪಿಸುತ್ತಿದೆ. ಇನ್ನೂ 3ತಿಂಗಳಲ್ಲಿ ಕುಶಿನಗರದಲ್ಲಿ ನಾನು ಸಾಯುವೆನೆಂದೂ ಹೇಳಿದರು. ವೈಶಾಖ ಪೂರ್ಣಿಮೆಯ ದಿನದಂದು ಕುಶಿನಗರದಲ್ಲಿ ಕೊನೆಯ ಉಪನ್ಯಾಸ ಮಾಡಿ ಮಹಾ ಪರಿನಿರ್ವಾಣ ಹೊಂದಿದರು’ ಎಂದರು.
 
‘ಜಗತ್ತಿಗೆ ಶ್ರೇಷ್ಠವಾದವರು ಬುದ್ಧ. ಅವರ ಕಾಲಾನಂತರ ಧಮ್ಮ ಬೌದ್ಧ ಧರ್ಮದ ಗುರುವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್‌ ಅವರು ಬುದ್ಧನ ಉಪದೇಶ ಹಾಗೂ ಧಮ್ಮವನ್ನು ಅಧ್ಯಯನ ಮಾಡಿದರು. ಬುದ್ಧನ ಉಪದೇಶವನ್ನೇ ಸಂವಿಧಾನವನ್ನಾಗಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ’ ಎಂದರು. 
 
‘ಸುಮಾರು 2,561ವರ್ಷಗಳ ಹಿಂದೆ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣ ಮೂರು ಮಹತ್ವದ ಘಟನೆ­ಗಳಿಗೂ ಸಾಕ್ಷಿಯಾದ ವೈಶಾಖ ಪೂರ್ಣಿ­ಮೆ­ಯನ್ನು ಲಕ್ಷಾಂತರ ಜನರು ಬುದ್ಧ­ಪೂರ್ಣಿಮೆ ಎಂದು ಆಚರಿಸುತ್ತಾರೆ. ಹಲವು ರಾಷ್ಟ್ರಗಳಲ್ಲಿ 7ದಿನಗಳ ಕಾಲ ವೈಶಾಖ ಪೂರ್ಣಿಮೆಯನ್ನು ಆಚರಿಸುತ್ತಾರೆ’ ಎಂದರು.
 
ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌. ಬಸವರಾಜು ಮಾತನಾಡಿ, ‘ಬುದ್ಧ ವಿಶ್ವದ ಬೆಳಕು. ಅವರು ಸೂರ್ಯ, ಚಂದ್ರ ಇರುವವರೆಗೂ ಶಾಶ್ವತ. ಬುದ್ಧನ ಅಷ್ಟಾಂಗ ಮಾರ್ಗವನ್ನು ಎಲ್ಲರು ಪಾಲಿಸಬೇಕು’ ಎಂದು ಸಲಹೆ ನೀಡಿದರು.
 
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬುದ್ಧ ವಂದನೆ, ಧ್ಯಾನ ಮತ್ತು ಧಮ್ಮುಪದೇಶ ನಡೆಯಿತು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಎಸ್‌. ನಂಜುಂಡಸ್ವಾಮಿ, ಭಾರತೀಯ ಬೌದ್ಧ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದರಾಜು, ಮುಖಂಡ ಕೃಷ್ಣಯ್ಯ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.