ADVERTISEMENT

ಭಗವಾಧ್ವಜಕ್ಕೆ ಕಿಡಿಗೇಡಿಗಳಿಂದ ಬೆಂಕಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 8:36 IST
Last Updated 15 ಸೆಪ್ಟೆಂಬರ್ 2017, 8:36 IST

ಚಾಮರಾಜನಗರ: ಇಲ್ಲಿನ ಗಾಳಿಪುರ ಬಡಾವಣೆಯ ನಾಯಕರ ಬೀದಿಯಲ್ಲಿರುವ ವಿನಾಯಕ ದೇವಸ್ಥಾನದಲ್ಲಿರುವ ಭಗವಾಧ್ವಜಕ್ಕೆ ಬುಧವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ದೇವಸ್ಥಾನದ ಮೇಲ್ಭಾಗದಲ್ಲಿದ್ದ ಧ್ವಜವನ್ನು ಕಿತ್ತು, ಸಮೀಪದಲ್ಲಿದ್ದ ಬೈಕ್‌ ಸೀಟಿನ ಮೇಲೆ ಇರಿಸಿ ಬೆಂಕಿ ಹಚ್ಚಲಾಗಿದೆ. ಇದರಿಂದ ಧ್ವಜದ ಬಹುತೇಕ ಭಾಗ ಮತ್ತು ಬೈಕ್‌ ಸೀಟು ಸುಟ್ಟುಹೋಗಿದೆ.

ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್‌ ಮೀನಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್‌ಪಿ ಗಂಗಾಧರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಬೈಕ್ ಮತ್ತು ಧ್ವಜದ ತುಣುಕುಗಳನ್ನು ವಶಕ್ಕೆ ಪಡೆದುಕೊಂಡು ಪಟ್ಟಣ ಪೊಲೀಸ್‌ ಠಾಣೆಗೆ ಕೊಂಡೊಯ್ಯಲಾಗಿದೆ.

ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಸ್ಥಳದಲ್ಲಿ ಮತ್ತು ಬಡಾವಣೆಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಎಸ್‌ಪಿ ಧರ್ಮೇಂದರ್‌ ಕುಮಾರ್‌ ಮೀನಾ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಆರೋಪಿಗಳ ಬಂಧನಕ್ಕೆ ಒತ್ತಾಯ ಭಗವಾಧ್ವಜಕ್ಕೆ ಬೆಂಕಿ ಹಚ್ಚಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗುರುವಾರ ಹಿಂದೂ ಪರ ಸಂಘಟನೆಗಳ ಒಕ್ಕೂಟ ಹಾಗೂ ಆಜಾದ್ ಹಿಂದೂ ಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಂತೇಮರಹಳ್ಳಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ, ಜಿಲ್ಲಾಡಳಿತ ಭವನಕ್ಕೆ ತೆರಳಿ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವಹಿಸಿದ್ದ ಆಜಾದ್ ಹಿಂದೂ ಸೇನೆ ಜಿಲ್ಲಾಧ್ಯಕ್ಷ ಎಂ.ಎಸ್. ಪೃಥ್ವಿರಾಜ್ ಮಾತನಾಡಿ, ಕೆಲವು ಕಿಡಿಗೇಡಿಗಳು ಭಗವಾಧ್ವಜಕ್ಕೆ ಬೆಂಕಿ ಹಚ್ಚಿ ಅಪಮಾನ ಮಾಡಿದ್ದಾರೆ. ಈ ಘಟನೆಯ ಆರೋಪಿಗಳನ್ನು ಒಂದು ವಾರದಲ್ಲಿ ಪತ್ತೆಹಚ್ಚಿ ಬಂಧಿಸಬೇಕು. ಇಲ್ಲದಿದ್ದರೆ ಚಾಮರಾಜನಗರ ಬಂದ್‌ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಾದ್ಯಂತ ಕೋಮುಗಲಭೆ ಗಳಿಗೆ ಕಾರಣವಾಗಿರುವ ಪಿಎಫ್‌ಐ, ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್. ಬಾಲರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ.ಎನ್‌. ದಯಾನಿಧಿ, ನಗರಸಭಾ ಸದಸ್ಯ ರಾಜೇಶ್, ಸೇನೆಯ ಗೌರವಾಧ್ಯಕ್ಷ ಸುಂದರ್‌ರಾಜ್, ಮುಖಂಡರಾದ ಚಂದ್ರಶೇಖರ್, ಬಾಬು, ಶಾಂತಮೂರ್ತಿ, ಎಸ್. ಸೋಮನಾಯಕ, ಎಸ್. ಮಹ ದೇವಯ್ಯ, ನಿಜಗುಣರಾಜು, ಬಾಲ ಸುಬ್ರಹ್ಮಣ್ಯಂ, ಆರ್. ಪುರುಷೋತ್ತಮ್, ವಿಎಚ್‌ಪಿಯ ರಾ. ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.