ADVERTISEMENT

ಭತ್ತ ಬಿತ್ತನೆಬೀಜ ವಿತರಣೆಗೆ ಆಗ್ರಹ

ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 10:14 IST
Last Updated 31 ಜುಲೈ 2014, 10:14 IST

ಕೊಳ್ಳೇಗಾಲ: ‘ರೈತರಿಗೆ ಜ್ಯೋತಿ ತಳಿಯ ಭತ್ತದ ಬಿತ್ತನೆಬೀಜ ನೀಡಲು ತಕ್ಷಣ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು’ ಎಂದು ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ಒತ್ತಾಯಿಸಿದರು. ಜ್ಯೋತಿ ತಳಿಯ ಭತ್ತದ ಬಿತ್ತನೆಬೀಜ ವಿತರಣೆ ಸೇರಿದಂತೆ ಇತರೆ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಂದ ಸಾಲವಸೂಲಿಗೆ ತಂದಿರುವ ಸರ್‌ಫೇಸ್‌ ಕಾಯ್ದೆ ರದ್ದುಪಡಿಸಬೇಕು, ಭೂ ರಹಿತರಿಗೆ ಕೃಷಿ ಕಾರ್ಮಿಕರಿಗೆ ಕನಿಷ್ಠ ₨ 1 ಲಕ್ಷದವರೆಗೆ ಸಾಲ ನೀಡಬೇಕು, ಕಬಿನಿ ಜಲಾಶಯದಿಂದ 42ನೇ ವಿತರಣಾ ನಾಲೆಯಿಂದ 62ನೇ ನಾಲೆಯವರೆಗೆ ಸಮರ್ಪಕ ನೀರು ಹರಿಸಬೇಕು, ಕುಂತೂರು ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯವರು ಒತ್ತುವರಿ ಮಾಡಿಕೊಂಡಿರುವ ಸಾರ್ವಜನಿಕ ಆಸ್ತಿಯನ್ನು ತಕ್ಷಣ ತೆರವುಗೊಳಿಸಬೇಕು, ಪಟ್ಟಣ ವ್ಯಾಪ್ತಿಯ ಉಪ್ಪಾರ ಬಡಾವಣೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ರೈತರಿಗೆ ಗುಣಮಟ್ಟದ ವಿದ್ಯುತ್‌ ನೀಡಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು.

ಮೆರವಣಿಗೆ: ಪಟ್ಟಣದ ಲೋಕೋಪಯೋಗಿ ಇಲಾಖೆ ಪರಿವೀಕ್ಷಣಾ ಮಂದಿರದಿಂದ ವಿವಿಧ ಬೇಡಿಕೆಗಳ ನಾಮಫಲಕ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡ ರೈತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪಟ್ಟಣದ ಹೊಸ ಬಸ್‌ನಿಲ್ದಾಣ, ಎಂ.ಜಿ.ಎಸ್‌.ವಿ ಕಾಲೇಜು ರಸ್ತೆ, ಡಾ.ರಾಜ್‌ಕುಮಾರ್‌ ರಸ್ತೆ, ದೊಡ್ಡ ಮಸೀದಿ ವೃತ್ತ, ಡಾ.ಅಂಬೇಡ್ಕರ್‌ ರಸ್ತೆ, ಸಾರ್ವಜನಿಕ ಆಸ್ಪತ್ರೆ ರಸ್ತೆಯ ಮೂಲಕ ಮೆರವಣಿಗೆ ಸಾಗಿ ತಾಲ್ಲೂಕು ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು.

ಧರಣಿ: ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗೆ ತಾಲ್ಲೂಕು ಕಚೇರಿ ಬಾಗಿಲಲ್ಲಿ ರೈತರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಶಿರಸ್ತೇದಾರ್‌ ಶ್ರೀನಿವಾಸ್‌ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಜಿಲ್ಲಾಡಳಿತದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಲೋಕೇಶ್‌, ಕುಮಾರಸ್ವಾಮಿ, ಜವರನಾಯಕ, ಕುಮಾರ, ಶಿವಕುಮಾರಸ್ವಾಮಿ, ಶಾಂತಮೂರ್ತಿ, ಪ್ರಭು, ರಾಜಶೇಖರ್‌, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.