ADVERTISEMENT

ಭಾರತದ ಪರಂಪರೆ ಉಳಿಸಿ, ಬೆಳೆಸಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 6:01 IST
Last Updated 13 ನವೆಂಬರ್ 2017, 6:01 IST

ಸಂತೇಮರಹಳ್ಳಿ: ಸತ್ಯ, ಅಹಿಂಸೆಗೆ ಹೆಸರಾಗಿರುವ ಜೈನ ಧರ್ಮವನ್ನು ಉಳಿಸಿ ಭಾರತದ ಪರಂಪರೆಯನ್ನು ಬೆಳೆಸಬೇಕಾಗಿದೆ ಎಂದು ಸಚಿವೆ ಎಂ.ಸಿ.ಮೋಹನ ಕುಮಾರಿ ಸಲಹೆ ನೀಡಿದರು. ಸಮೀಪದ ಕುದೇರು ಗ್ರಾಮದ ಭಗವಾನ್ ಆದಿನಾಥ ತೀರ್ಥಂಕರರ ದಿಗಂಬರರ ಜೈನ ಬಸದಿಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಭಾನುವಾರ ನಡೆದ 1008 ಭಗವಾನ್ ಆದಿನಾಥ ತೀರ್ಥಂಕರರ ದಿಗಂಬರ ಜೈನ ಬಸದಿಯ ಧಾಮಸಂಪ್ರೋಕ್ಷಣೆ, ಕಲಶಾರೋಹಣ, ಚಕ್ರೇಶ್ವರಿದೇವಿ ಪ್ರತಿಷ್ಠಾಪನಾ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

‘ಪ್ರಾಚೀನ ಭಾರತದಲ್ಲಿ ಜೈನ ಧರ್ಮದ ತತ್ವಗಳು ಬಹುಬೇಗ ಜನ ಸಾಮಾನ್ಯರನ್ನು ಆಕರ್ಷಿಸಿತು. ಈ ಹಿನ್ನೆಲೆಯಲ್ಲಿ ಗಂಗರು, ಹೊಯ್ಸಳರು ಹಾಗೂ ವಿಜಯ ನಗರದ ಅರಸರ ಆಡಳಿತದಲ್ಲೂ ಜೈನ ಧರ್ಮ ತನ್ನ ಪ್ರಭಾವವನ್ನು ಉಳಿಸಿಕೊಂಡಿತು. ಜಿಲ್ಲೆಯಲ್ಲಿಯೂ ಅನೇಕ ಜೈನ ಬಸದಿಗಳಿವೆ. ಅವುಗಳನ್ನು ಜೀರ್ಣೋದ್ಧಾರಗೊಳಿಸಲು ಮುಂದಾಗಿರುವ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಸೇವೆ ಶ್ಲಾಘನೀಯವಾಗಿದೆ ಎಂದರು.

ಐತಿಹಾಸಿಕವಾಗಿರುವ ಜೈನ ಬಸದಿಗಳನ್ನು ಉಳಿಸಲು ಜೀರ್ಣೋದ್ಧಾರದ ಅವಶ್ಯಕತೆ ಇದೆ. ದೇವಸ್ಥಾನಗಳನ್ನು ಇಂದು ಸುಲಭವಾಗಿ ಕಟ್ಟಬಹುದು. ಆದರೆ, ಹಳೆಯ ದೇವಾಲಯಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ ಇಂತಹ ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ. ದೇವಸ್ಥಾನಗಳನ್ನು ನಿರ್ಮಿಸಿದರೇ ಸಾಲದು. ನಿರಂತರವಾಗಿ ಪೂಜಾ ಕಾರ್ಯಗಳು ನಡೆದಾಗ ಮಾತ್ರ ದೇವಸ್ಥಾನಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ADVERTISEMENT

ಧರ್ಮೋತ್ಥಾನ ಟ್ರಸ್ಟ್ ನಿರ್ದೇಶಕ ಹರಿರಾಮ ಶೆಟ್ಟಿ ಮಾತನಾಡಿದರು. ಕನಕಗಿರಿ ಕ್ಷೇತ್ರದ ಭುವನ ಕೀರ್ತಿ ಭಟ್ಟಾರಕ ಸ್ವಾಮಿ, ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಸ್ವಾಮಿ, ಅರಿಹಂತಗಿರಿ ಕ್ಷೇತ್ರದ ಧವಳಕೀರ್ತಿ ಭಟ್ಟಾರಕ ಸ್ವಾಮಿ, ಶಿವಮೂರ್ತಿ ಸ್ವಾಮಿ, ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಕಾರ್ಯಧ್ಯಕ್ಷ ಸುರೇಂದ್ರ ಕುಮಾರ್, ವರ್ಧಮಾನಯ್ಯ, ಅರುಣ್ ಪಂಡಿತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.