ADVERTISEMENT

ಮತ ಎಣಿಕೆಗೆ ಸಕಲ ಸಿದ್ಧತೆ– ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 7:06 IST
Last Updated 13 ಏಪ್ರಿಲ್ 2017, 7:06 IST

ಗುಂಡ್ಲುಪೇಟೆ:  ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಗೆ ಸಕಲಸಿದ್ಧತೆ ಆಗಿದ್ದು, ಗುರುವಾರ ಬೆಳಿಗ್ಗೆ 8ಕ್ಕೆ ಎಣಿಕೆ ಆರಂಭವಾಗಲಿದೆ. ಒಟ್ಟು 16 ಟೇಬಲ್‌ಗಳಲ್ಲಿ ಏಕಕಾಲಕ್ಕೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.

ಮತ ಎಣಿಕೆಯ ಮುನ್ನಾದಿನ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಮತಯಂತ್ರ ಗಳನ್ನು ಅಭ್ಯರ್ಥಿಗಳ ಸಮ್ಮುಖದಲ್ಲಿ ಭದ್ರಪಡಿಸಲಾಗಿದೆ’ ಎಂದು ತಿಳಿಸಿದರು.
ಪಟ್ಟಣದ ಸೇಂಟ್‌ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಣಿಕೆ ನಡೆಯಲಿದೆ. ಮತಯಂತ್ರಗಳನ್ನು 4 ಕೊಠಡಿಗಳಲ್ಲಿ ಇರಿಸಲಾಗಿತ್ತು.  ಪ್ರತಿ ರೂಮಿಗೆ 4 ಟೇಬಲ್‌ನಂತೆ 16 ಟೇಬಲ್‌ಗಳಲ್ಲಿ ಎಣಿಕೆ ನಡೆಸಲಾಗುವುದು ಎಂದರು.

ಪ್ರತಿ ಕೊಠಡಿಗೆ ಎಣಿಕೆ ಕಾರ್ಯ ಮೇಲ್ವಿಚಾರಣೆಗೆ ಒಬ್ಬರು ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ ಮತ್ತು ಇಬ್ಬರು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ.ಮತ ಎಣಿಕೆಗೆ ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕ ಅಧಿಕಾರಿ, ಒಬ್ಬರು ಮೈಕ್ರೋ ಅಬ್ಸರ್ವರ್‌ ನೇಮಿಸಲಾಗಿದೆ ಎಂದು ವಿವರಿಸಿದರು.

ADVERTISEMENT

ಅಂಚೆ ಮೂಲಕ ಬಂದಿರುವ ಮತಗಳ ಎಣಿಕೆಯನ್ನು ಮೊದಲುಬೆಳಗ್ಗೆ 8ಗಂಟೆಗೆ ಚುನಾವಣಾಧಿಕಾರಿ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಸುವರು ಎಂದರು
ಸುಸೂತ್ರ ಎಣಿಕೆ ಕಾರ್ಯಕ್ಕಾಗಿ  ಎಣಿಕೆ ಅಧಿಕಾರಿಗಳು ಮತ್ತು ಅಭ್ಯರ್ಥಿ, ಚುನಾವಣೆ ಏಜೆಂಟ್, ಎಣಿಕೆ ಏಜೆಂಟ್‌ಗಳ ನಡುವೆ ಮೆಸ್ ಆಳವಡಿಸಲಾಗಿದೆ. ಏಜೆಂಟರು ಕುಳಿತು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಮೊಬೈಲ್‌ ನಿಷೇಧ:  ಮೊಬೈಲ್‌ಗಳನ್ನು ಎಣಿಕೆ ಕೇಂದ್ರಕ್ಕೆ ತರುವುದನ್ನು ನಿಷೇಧಿಸಲಾಗಿದೆ. ಪ್ರತಿ ಟೇಬಲ್‌ಗೆ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್ ಅಥವಾ ಎಣಿಕೆ ಏಜೆಂಟ್  ಇವರಲ್ಲಿ ಒಬ್ಬರು ಹಾಜರಿರಲು ಅವಕಾಶವಿದೆ.ಪ್ರತಿ ಸುತ್ತಿನ ಎಣಿಕೆ ಮುಕ್ತಾಯದ ನಂತರ ಅಭ್ಯರ್ಥಿಗಳು ಪಡೆದ ಮತಗಳ ವಿವರವನ್ನು ಚುನಾವಣಾಧಿಕಾರಿಗಳು ಪ್ರಕಟಿಸುವರು ಎಂದರು.

ನಿಷೇಧಾಜ್ಞೆ ಜಾರಿ: ಮತ ಎಣಿಕೆ ಹಿನ್ನೆಲೆಯಲ್ಲಿ ಏ.12ರ ಸಂಜೆ 6ರಿಂದ 14ರ ಸಂಜೆ 6ರವರೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು 144ನೆ ಸೆಕ್ಷನ್‌ ಜಾರಿ ಮಾಡಲಾಗಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಏ. 12ರ ಮಧ್ಯರಾತ್ರಿ  12ರಿಂದ 13ರ ಮದ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜನರು ಗುಂಪಾಗಿ ನಿಲ್ಲಬಾರದು, ಕಾನೂನು ಸುವ್ಯಸ್ಥೆಗೆ ಭಂಗ ತರಬಾರದು ಎಂದು ಮನವಿ ಮಾಡಿದರು.ಫಲಿತಾಂಶದ ನಂತರ  ಪಟಾಕಿ ಸಿಡಿಸುವುದು, ಮೆರವಣಿಗೆ ಮಾಡಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.