ADVERTISEMENT

ಮರಳು ಪೂರೈಕೆಗೆ ಕ್ರಮವಹಿಸಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 11:24 IST
Last Updated 29 ಜುಲೈ 2016, 11:24 IST

ಚಾಮರಾಜನಗರ: ‘ಸರ್ಕಾರದ ವಸತಿ ಯೋಜನೆಯಡಿ ಮಂಜೂರಾತಿ ಆದೇಶ ಪಡೆದಿರುವ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಮರಳು ಪೂರೈಕೆಗೆ ಅವಕಾಶ ಕಲ್ಪಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಂಭು ದಯಾಳ್ ಮೀನಾ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಬರ ನಿರ್ವಹಣೆ ಹಾಗೂ ಇತರೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಫಲಾನುಭವಿಗಳು ಮನೆ ನಿರ್ಮಿಸಿ ಕೊಳ್ಳಲು ಮರಳಿನ ಅಭಾವ ಉಂಟಾಗಿ ರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಇದರಿಂದ ವಸತಿ ಯೋಜನೆಗೆ ಹಿನ್ನಡೆ ಯಾಗಬಾರದು ಎಂದರು.

ಮನೆ ನಿರ್ಮಿಸಿಕೊಳ್ಳಲು ಮರಳು ಪೂರೈಕೆಗೆ ಅವಕಾಶ ಮಾಡಿಕೊಡು ವುದು ಅಧಿಕಾರಿಗಳ ಹೊಣೆ. ಫಲಾನು ಭವಿಗಳು ಯಾವ ಉದ್ದೇಶಕ್ಕೆ ಮರಳು ಬಳಕೆ ಮಾಡಿಕೊಳ್ಳಲಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು. ಇದರಿಂದ ಅನಾವಶ್ಯಕವಾಗಿ ತೊಂದರೆಗೆ ಒಳಗಾಗುವುದು ತಪ್ಪಲಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರಮುಖ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಬೇಕು. ಪಂಚಾಯಿತಿ ಅಧಿ ಕಾರಿಗಳು ಮತ್ತು ಕಾರ್ಯದರ್ಶಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ನಿಗಾವಹಿಸಬೇಕು ಎಂದರು.

ಉದ್ಯೋಗ ಖಾತ್ರಿ, ವಸತಿ ಯೋಜನೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಾಲ ಮಿತಿಯೊಳಗೆ ತಲುಪಿಸಲು ಕ್ಷೇತ್ರವಾರು ಭೇಟಿ ಅಗತ್ಯ. ಗ್ರಾಮಮಟ್ಟದಲ್ಲಿ ಜಾರಿ ಯಾಗುವ ಕಾರ್ಯಕ್ರಮಗಳ ನಿರ್ವ ಹಣೆಯ ಜವಾಬ್ದಾರಿಯು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಮೇಲಿದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳ ಭೇಟಿ, ಪ್ರವಾಸ ಕುರಿತ ಪಟ್ಟಿಯನ್ನು ಮೊದಲೇ ಪಡೆಯಬೇಕು. ಆ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂಬು ದನ್ನು ಪರಿಶೀಲಿಸಬೇಕು. ಬಯೋ ಮೆಟ್ರಿಕ್ ಹಾಜರಾತಿ ನಿರ್ವಹಣೆಯನ್ನೂ ಪರಿಶೀಲಿಸಬೇಕು ಎಂದು ಹೇಳಿದರು.

ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಸುಧಾರಣೆ ಕಂಡುಕೊಳ್ಳಬೇಕು.
ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.  ಇಲಾಖೆ ವ್ಯಾಪ್ತಿಯ ಅಧಿಕಾರಿಗಳ ಸಭೆ ಕರೆದು ಆಡಳಿತ ಚುರುಕುಗೊಳಿಸಲು ಮಾರ್ಗದರ್ಶನ ನೀಡಬೇಕು ಎಂದರು.
ಕೋಟಿ ವೃಕ್ಷ ಆಂದೋಲನ: ಕೋಟಿ ವೃಕ್ಷ ಆಂದೋಲನದಡಿ ನೆಟ್ಟಿರುವ ಸಸಿಗಳನ್ನು ಪೋಷಣೆ ಮಾಡಬೇಕು. ಶಾಲಾ ಆವರಣ ದಲ್ಲಿಯೂ ಸಸಿ ನೆಡುವ ಕಾರ್ಯಕ್ರಮ ಮುಂದುವರಿಸಬೇಕು. ಬೇಡಿಕೆಗೆ ಅನುಗುಣವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಸಿ ಪೂರೈಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್, ಉಪ ವಿಭಾಗಾಧಿಕಾರಿ ಕವಿತಾ ರಾಜಾರಾಂ, ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಸ್‌.ಎಸ್‌. ಲಿಂಗ ರಾಜ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಎನ್‌. ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಮಾದೇಶು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.