ADVERTISEMENT

ಮಲೆಮಹದೇಶ್ವರಬೆಟ್ಟ: ತಾತ್ಕಾಲಿಕ ಅಂಗಡಿಗಳ ತೆರವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 8:49 IST
Last Updated 27 ಫೆಬ್ರುವರಿ 2015, 8:49 IST

ಕೊಳ್ಳೇಗಾಲ: ತಾಲ್ಲೂಕಿನ ಮಲೆಮಹದೆಶ್ವರ ಬೆಟ್ಟದಲ್ಲಿ ಮುಖ್ಯ ರಸ್ತೆಗಳಲ್ಲಿ ಹಾಕಿದ್ದ ತಾತ್ಕಾಲಿಕ ಅಂಗಡಿಗಳನ್ನು ಶ್ರೀ ಮಲೆಮಹದೆಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಿ. ಭಾರತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬುಧವಾರ ತೆರವುಗೊಳಿಸಲಾಯಿತು

ಮಹದೇಶ್ವರ ಬೆಟ್ಟದಲ್ಲಿ ನಡೆದ ಶಿವರಾತ್ರಿ ಮಹಾ ಜಾತ್ರೆಯ ಅಂಗವಾಗಿ ಇಲ್ಲಿನ ಅಂತರಗಂಗೆ ಹಾಗೂ ದಾಸೋಹ ಭವನ ರಸ್ತೆ ಸೇರಿದಂತೆ ಇತರೆಡೆಗಳಲ್ಲಿ ಅನಧಿಕೃತವಾಗಿ ನೂರಾರು ಅಂಗಡಿಗಳನ್ನು ನಿರ್ಮಿಸಲಾಗಿತ್ತು.

ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಶನಿವಾರ ಜೆಸಿಬಿ ಯಂತ್ರದೊಡನೆ ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆಯೇ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳ ತೆರವಿಗೆ ಸಹಕಾರ ನೀಡಿದರು. ಈ ರಸ್ತೆಗಳನ್ನು ತಕ್ಷಣದಲ್ಲೇ ಡಾಂಬರೀಕರಣ ಮಾಡಲಿದ್ದು, ನಂತರ ತಿರುಪತಿಯಲ್ಲಿ ನಿರ್ಮಿಸಲಾಗಿರುವ ಮಾದರಿಯಲ್ಲೇ ಅಂಗಡಿಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಭರವಸೆಯನ್ನು ಕಾರ್ಯದರ್ಶಿ ನೀಡಿದರು.

ತೆರವುಗೊಂಡ ಸ್ಥಳದಲ್ಲಿ ಸ್ಥಳೀಯ ವ್ಯಾಪಾರಸ್ಥರೇ ಸ್ವಯಂ ಪ್ರೇರಿತರಾಗಿ ಪರಿಸರ ಉಳಿಸುವ ಹಾಗೂ ಸ್ವಚ್ಛತೆ ಕಾಪಾಡುವ ಪ್ರಮಾಣ ವಚನ ಸ್ವೀಕರಿಸಿ, ಗಿಡಗಳನ್ನು ನೆಡುವ ಮೂಲಕ ದೇವಾಲಯದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸ್ಪಂದಿಸಿದರು.
ಪ್ತಾಧಿಕಾರದ ಸಹಾಯಕ ಕಾರ್ಯದರ್ಶಿ ರಾಮಯ್ಯ, ಅಧೀಕ್ಷಕ ಬಸವರಾಜು, ಮಹಾದೇವಸ್ವಾಮಿ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕುಮಾರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.