ADVERTISEMENT

ಮಾರಿಯಮ್ಮನ್‌ ಹಬ್ಬಕ್ಕೆ ಸಿದ್ಧತೆ

ಕೊಳ್ಳೇಗಾಲ: ಮಡೆ ಉತ್ಸವ ಇಂದು, ಓಕುಳಿ ನಾಳೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 12:10 IST
Last Updated 15 ಫೆಬ್ರುವರಿ 2017, 12:10 IST
ಅಲಂಕೃತಗೊಂಡಿರುವ ಕೊಳ್ಳೇಗಾಲದ ಅಮ್ಮನ್‌ ಕಾಲೊನಿಯ ಬಣ್ಣಾರಿ ಮಾರಿಯಮ್ಮನ್‌ ದೇವಾಲಯ
ಅಲಂಕೃತಗೊಂಡಿರುವ ಕೊಳ್ಳೇಗಾಲದ ಅಮ್ಮನ್‌ ಕಾಲೊನಿಯ ಬಣ್ಣಾರಿ ಮಾರಿಯಮ್ಮನ್‌ ದೇವಾಲಯ   

ಕೊಳ್ಳೇಗಾಲ:  ಪಟ್ಟಣದ ಪೌರಕಾರ್ಮಿಕರ ಪ್ರತಿಷ್ಠಿತ ಬಣ್ಣಾರಿ ಮಾರಿಯಮ್ಮನ್‌ ಹಬ್ಬಕ್ಕೆ ಅಮ್ಮನ್‌ ಕಾಲೊನಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಪೌರಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಅಮ್ಮನ್‌ ಕಾಲೊನಿಯ ಪೌರ ಕಾರ್ಮಿಕರ ಆರಾಧ್ಯ ದೈವ ಬಣ್ಣಾರಿ ಅಮ್ಮನ್‌ ದೇವಾಲಯದಲ್ಲಿ ಬಣ್ಣಾರಿ ಮಾರಿಯಮ್ಮನ್‌ ಹಬ್ಬ  ಒಂದು ವಾರ ಅದ್ಧೂರಿಯಿಂದ ನಡೆಯಲಿದೆ.

ಹಬ್ಬಕ್ಕೆ ಈಗಾಗಲೇ ಅಮ್ಮನ್‌ ಕಾಲೊನಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಕಾಲೊನಿಯ ಎಲ್ಲ ಬೀದಿಗಳನ್ನು ತಳಿರುತೋರಣ, ವರ್ಣಮಯ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದೆ. ಅಮ್ಮನ್‌ ಕಾಲೊನಿ ನಿವಾಸಿಗಳ ನೆಂಟರಿಷ್ಟರು ಸಾಗರೋಪಾದಿಯಲ್ಲಿ ಹಬ್ಬದಲ್ಲಿ ಪಾಲ್ಗೊಳ್ಳಲು ಪಕ್ಕದ ತಮಿಳುನಾಡು, ಆಂಧ್ರಪ್ರದೇಶಗಳಿಂದ ಆಗಮಿಸುತ್ತಿದ್ದಾರೆ.

ಫೆ.17ರ ವರೆಗೆ ನಡೆಯಲಿರುವ ಹಬ್ಬಕ್ಕೆ ಮಂಗಳವಾರ ಅಂತಿಮ ಸಿದ್ಧತೆಯಲ್ಲಿ ನಿವಾಸಿಗಳು ತೊಡಗಿದ್ದಾರೆ. ಮಂಗಳವಾರ ಸಂಜೆ ಕಾವೇರಿ ನದಿಯಿಂದ ಪವಿತ್ರೋದಕವನ್ನು ಅದ್ಧೂರಿ ಮೆರವಣಿಗೆ ಮೂಲಕ ತರುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಿತು.

ಫೆ. 15ರಂದು ಮಡೆ ಉತ್ಸವ, ಫೆ. 16ರಂದು ಓಕುಳಿ ಹಾಗೂ ಫೆ.17ರಂದು ಮರುಪೂಜೆಯೊಡನೆ ಹಬ್ಬಕ್ಕೆ ತೆರೆಬೀಳಲಿದೆ. ದೇವಾಲಯದ ವಿಶೇಷ ಪೂಜೆಗಳನ್ನು ಪ್ರಧಾನ ಅರ್ಚಕ ರಮೇಶ್‌ ಜಯರಾಜ್‌, ರವಿ ಮತ್ತು ತಂಡ ನಡೆಸಿಕೊಡಲಿದ್ದಾರೆ.ಯಜಮಾನರಾದ ಕಂದಸ್ವಾಮಿ, ರಾಜೇಂದ್ರ, ಮುಖಂಡರಾದ ತಂಗರಾಜು, ರತ್ನಸ್ವಾಮಿ ಇತರರ ಮೇಲುಸ್ತುವಾರಿಯಲ್ಲಿ ಹಬ್ಬ ನಡೆಯಲಿದೆ.

ಸ್ಪರ್ಧೆ:  ಮಕ್ಕಳು ಮಹಿಳೆಯರಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸುವ ಪ್ರಯತ್ನವಾಗಿ ತಮ್ಮ ಹಬ್ಬದ ಸಂಸ್ಕೃತಿ ಜತೆ ಅಂಬೇಡ್ಕರ್‌ ಸಂಘದಿಂದ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.