ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಮೇ 2017, 7:46 IST
Last Updated 9 ಮೇ 2017, 7:46 IST
ಚಾಮರಾಜನಗರ: ‘ಉಪ್ಪಾರ ಜನಾಂಗದ ಅಭಿವೃದ್ಧಿಗಾಗಿ ಸಲ್ಲಿಸಿರುವ ಬೇಡಿಕೆಗಳಿಗೆ ಸ್ಪಂದಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ’ ಎಂದು ಭಗೀರಥ ಉಪ್ಪಾರ ಮಹಾಸಭಾ ಅಧ್ಯಕ್ಷ ಜಿ.ಎಂ. ಗಾಡ್ಕರ್‌ ಆರೋಪಿಸಿದರು.
 
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
 
‘ಉಪ್ಪಾರ ಜನಾಂಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಹತ್ತು ಬೇಡಿಕೆಗಳನ್ನು ಇರಿಸಿದ್ದೆವು. ಆದರೆ, ಇದುವರೆಗೆ ಯಾವ ಬೇಡಿಕೆಗೂ ಅವರು ಸ್ಪಂದಿಸಿಲ್ಲ. ಜನಾಂಗದ ಕುರಿತು ಅನುಕಂಪದಿಂದ ಮಾತನಾಡುವ ಅವರು ನಮ್ಮನ್ನು ತಿರಸ್ಕಾರ ಭಾವದಿಂದ ನೋಡುತ್ತಿದ್ದಾರೆ. ಅವರಲ್ಲಿ ಪ್ರಾಮಾಣಿಕ ಕಾಳಜಿ ಇಲ್ಲ ಎಂದು ಆರೋಪಿಸಿದರು.
 
‘ಉಪ್ಪಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವುದು ನಮ್ಮ ಬಹುಕಾಲದ ಬೇಡಿಕೆ. ಈ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ರಾಜ್ಯವನ್ನು ಗುಡಿಸಲು ಮುಕ್ತವನ್ನಾಗಿಸುತ್ತೇವೆ ಎಂಬ ಭಾಷಣ ಮಾಡುತ್ತಾರೆ. ಗುಡಿಸಲಿನಲ್ಲಿ ಇರುವ ಉಪ್ಪಾರ ಜನಾಂಗದವರಿಗೆ ಮನೆ ಮತ್ತು ಮೂಲಸೌಕರ್ಯ ಕಲ್ಪಿಸಿಕೊಡಿ ಎಂಬ ಕೂಗು ಅವರಿಗೆ ಕೇಳಿಸುತ್ತಿಲ್ಲ’ ಎಂದರು.
 
‘ಸಂಪುಟದಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವ ಹೊಣೆಗಾರಿಕೆ ಪ್ರದರ್ಶಿಸಿಲ್ಲ. ವಿಧಾನ ಪರಿಷತ್‌ಗೆ ನೇಮಕ ಮಾಡಿ ಎಂಬ ಮನವಿಯನ್ನು ಸಹ ಕಡೆಗಣಿಸುತ್ತಿದ್ದಾರೆ. ಮುಂದಿನ ಬಾರಿ ಅಧಿಕಾರಕ್ಕೆ ಬಂದಾಗ ನೀಡುತ್ತೇವೆ ಎನ್ನುತ್ತಿದ್ದಾರೆ. ಹೀಗೆ ಮಾಡಿದರೆ ಮತ್ತೆ ಅಧಿಕಾರಕ್ಕೆ ಬರುತ್ತಾರೆಯೇ?’ ಎಂದರು.
 
ಉಪ್ಪಾರರ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರೂ, ಅದು ಜಾರಿಗೆ ಬಂದಿಲ್ಲ. ಬೇರೆ ಸಮುದಾಯಗಳ ನಿಗಮಕ್ಕೆ ಕೋಟ್ಯಂತರ ರೂಪಾಯಿ ಪ್ರಕಟಿಸಲಾಗಿದೆ. ಆದರೆ ಉಪ್ಪಾರ ಜನಾಂಗದ ನಿಗಮಕ್ಕೆ ಹಣ ಘೋಷಣೆಯನ್ನೂ ಮಾಡಿಲ್ಲ. ಇದು ನಂಜನಗೂಡು, ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆಗಳಲ್ಲಿ ಉಪ್ಪಾರರ ಮತಗಳನ್ನು ಪಡೆದುಕೊಳ್ಳಲು ನಡೆಸಿದ ತಂತ್ರವಷ್ಟೇ’ ಎಂದು ಟೀಕಿಸಿದರು.
 
‘ಕರ್ನಾಟಕ ಲೋಕಸೇವಾ ಆಯೋಗಕ್ಕೆ ಉಪ್ಪಾರ ಜನಾಂಗದವರನ್ನು ನೇಮಿಸಿ ಎಂಬ ಬೇಡಿಕೆಗೆ ಮುಖ್ಯಮಂತ್ರಿಗಳು ‘ಮುಂದೆ ಮಾಡೋಣ’ ಎಂದು ಉಡಾಫೆಯಿಂದ ಪ್ರತಿಕ್ರಿಯಿಸುತ್ತಾರೆ. ಇದು ಅವರಿಗೆ ಶೋಭೆ ಅಲ್ಲ. ಚುನಾವಣೆಯಲ್ಲಿ ಸಂಪೂರ್ಣ ಜನಾಂಗ ಅವರಿಗೆ ಮತ ಹಾಕಿದೆ. ಆದರೆ, ಅವರಿಗೆ ಉಪಕಾರ ಸ್ಮರಣೆ ಇಲ್ಲ’ ಎಂದು ದೂರಿದರು.
 
‘ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಜಿಲ್ಲಾ ಹಂತದಿಂದ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು. ಇದಕ್ಕೆ ಎಲ್ಲ ಉಪ್ಪಾರ ಸಂಘಟನೆಗಳನ್ನು ಒಗ್ಗೂಡಿಸಲಾಗುವುದು’ ಎಂದು ತಿಳಿಸಿದರು.
 
ಬಿಜೆಪಿ ಆಹ್ವಾನ: ಬಿಜೆಪಿ ಸೇರುವಂತೆ ಸಂಸದ ಯಡಿಯೂರಪ್ಪ ಅವರು ಗುಂಡ್ಲುಪೇಟೆ ಉಪಚುನಾವಣೆ ವೇಳೆ ಆಹ್ವಾನ ನೀಡಿದ್ದಾರೆ. ಆದರೆ ಅದರ ಕುರಿತು ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗಾಡ್ಕರ್ ತಿಳಿಸಿದರು. ಸಮಾಜವಾದಿ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದರು. 
ಮುಖಂಡರಾದ ಮಹೇಶ್‌, ಚ.ಹ. ರಾಮು, ಪುಟ್ಟರಾಜು ಮತ್ತು ಮಾದೇಸ್ವಾಮಿ ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.