ADVERTISEMENT

ಮೂಲಸೌಲಭ್ಯವಿಲ್ಲದೆ ಗ್ರಾಮಸ್ಥರ ಪರದಾಟ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಡಿಸೆಂಬರ್ 2017, 7:11 IST
Last Updated 4 ಡಿಸೆಂಬರ್ 2017, 7:11 IST
ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತ್ತುಪ್ಪೂರು ಗ್ರಾಮದ ಪರಿಶಿಷ್ಟ ಜಾತಿಯ ಹೊಸ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತ್ತುಪ್ಪೂರು ಗ್ರಾಮದ ಪರಿಶಿಷ್ಟ ಜಾತಿಯ ಹೊಸ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದಿರುವುದು   

ಗುಂಡ್ಲುಪೇಟೆ: ಗ್ರಾಮೀಣ ಪ್ರದೇಶಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡುವುದಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದರೂ ಗ್ರಾಮೀಣರಿಗೆ ಮಾತ್ರ ಇದು ಮರೀಚಿಕೆಯಾಗಿದೆ. ಇದಕ್ಕೆ ತಾಲ್ಲೂಕಿನ ಸಮೀಪದ ಚಿಕ್ಕತುಪ್ಪೂರು ಗ್ರಾಮದ ಪರಿಶಿಷ್ಟ ಜಾತಿಯ ಹೊಸ ಬಡಾವಣೆ ಉದಾಹರಣೆ.

ಬನ್ನಿತಾಳಪುರ ಗ್ರಾಮ ಪಂಚಾಯಿತಿಗೆ ಸೇರಿರುವ ಈ ಬಡಾವಣೆಯು ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿದ್ದರೂ, ಇಲ್ಲಿ  ಮೂಲ ಸೌಲಭ್ಯವಿಲ್ಲದೆ ಪ್ರತಿದಿನ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಡಾವಣೆಯಲ್ಲಿ 1,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆದರೆ, ಇವರಿಗೆ ಓಡಾಡಲು ಸೂಕ್ತ ರಸ್ತೆ ಇಲ್ಲ. ಮನೆಯ ನೀರನ್ನು ಹೊರಬಿಡಲು ಚರಂಡಿ ವ್ಯವಸ್ಥೆಯಿಲ್ಲ. ವಿದ್ಯುತ್‌ ಸೌಲಭ್ಯ ಪಡೆಯಲು ಕಂಬಗಳಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಹೀಗೆ ‘ಇಲ್ಲ’ಗಳ ಕೊರತೆಯ ನಡುವೆ, ಬಡಾವಣೆಯ ಸುತ್ತ ಖಾಲಿ ನಿವೇಶನಗಳಲ್ಲಿ ಕಾಡು ಗಿಡಗಳು ಬೆಳೆದು ನಿಂತಿವೆ.

ADVERTISEMENT

‘ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳಾಗಲೀ, ಪಿಡಿಒ ಆಗಲಿ ಇತ್ತ ತಲೆ ಹಾಕಿಲ್ಲ. ಅವರಿಗೆ ಮನವಿ ಸಲ್ಲಿಸಿ ಹೈರಾಣಾಗಿದ್ದೇವೆ’ ಎನ್ನುವುದು ಸ್ಥಳೀಯರ ದೂರು.

ಕುಡಿಯುವ ನೀರಿಲ್ಲ: ಬಡಾವಣೆಯು ನಿರ್ಮಾಣವಾದಾಗಲೇ ನೀರಿನ ಕೊರತೆಯ ಸಮಸ್ಯೆಯೂ ಉದ್ಭವಿಸಿತ್ತು. ಪಂಚಾಯಿತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಪ್ರತಿದಿನ ಗ್ರಾಮದೊಳಗಿರುವ ತೊಂಬೆ ಅಥವಾ ಜಮೀನುಗಳಿಗೆ ಹೋಗಿ ನೀರು ತರುವುದು ಅನಿವಾರ್ಯ. ಪಿಡಬ್ಲ್ಯೂಡಿ ಇಲಾಖೆಯಿಂದ ಇತ್ತೀಚೆಗೆ ಕೊಳವೆಬಾವಿ ಕೊರೆಸಲಾಗಿದೆ. ಆದರೆ ಅದಕ್ಕೆ ಸರಿಯಾದ ನಲ್ಲಿ ಸಂಪರ್ಕವಿಲ್ಲ.

ರಸ್ತೆ ಮತ್ತು ಚರಂಡಿ ಇಲ್ಲ: ‘ಬಡಾವಣೆಗೆ ಇಂದಿಗೂ ಸಮರ್ಪಕ ರಸ್ತೆ ಮತ್ತು ಚರಂಡಿ ವ್ಯವಸ್ಥೆಯಿಲ್ಲ. ರಸ್ತೆಯಲ್ಲಿ ಗಿಡಗಂಟೆಗಳು ಬೆಳೆದಿವೆ. ಚರಂಡಿ ಇಲ್ಲದೆ ಮನೆಯ ಸುತ್ತ ಕೊಳಚೆ ನೀರು ನಿಲ್ಲುತ್ತಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಎದುರಾಗಿದೆ’ ಎಂದು ನಿವಾಸಿ ಪಾಪಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಕತ್ತಲ ಬದುಕು: ‘ವಿದ್ಯುತ್‌ ಕಂಬಗಳಿಲ್ಲದೆ ಇರುವುದರಿಂದ ಅನೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಕಂಬಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ, ‘ನೀವೇ ಕಂಬ ಅಳವಡಿಸಿ. ವಿದ್ಯುತ್‌ ಸಂಪರ್ಕ ನೀಡುತ್ತೇವೆ’ ಎಂದು ಉಡಾಫೆ ಉತ್ತರ ನೀಡುತ್ತಾರೆ. ಗ್ರಾಮ ಪಂಚಾಯಿತಿಯವರು ತಮ್ಮ ಬಳಿ ಅನುದಾನವಿಲ್ಲ ಎನ್ನುತ್ತಾರೆ. ಇದರಿಂದ ನಾವು ಕತ್ತಲಿನಲ್ಲಿಯೇ ಜೀವನ ನಡೆಸುತ್ತಿದ್ದೇವೆ’ ಎಂದು ನಿವಾಸಿಯೊಬ್ಬರು ಸಂಕಷ್ಟ ಹೇಳಿಕೊಂಡರು.

‘ಒಂದು ವಿದ್ಯುತ್‌ ಕಂಬ ಅಳವಡಿಸಲು ₹ 6,000 ವೆಚ್ಚವಾಗುತ್ತದೆ. ಬಡಾವಣೆಗೆ 4 ಕಂಬಗಳು ಬೇಕು. ಇದಕ್ಕೆ ಹಣ ಎಲ್ಲಿಂದ ತರುವುದು. ನಾವು ದುಡಿಯುವ ಹಣ ನಮ್ಮ ಜೀವನ ನಿರ್ವಹಣೆಗೇ ಸಾಲುತ್ತಿಲ್ಲ’ ಎಂದರು.

‘ಚುನಾವಣೆ ಸಂದರ್ಭದಲ್ಲಿ ಮತಯಾಚನೆಗೆ ಬಂದಿದ್ದ ನಾಯಕರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಈಗ ಮತ್ತೊಂದು ಚುನಾವಣೆ ಬರುತ್ತಿದೆ ಸಮಸ್ಯೆ ಮಾತ್ರ ಹಾಗೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಪತ್ತೆ!
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್‌ ಕಚೇರಿಗೆ ಸರಿಯಾದ ಸಮಯಕ್ಕೆ ಹಾಜರಾಗುವುದಿಲ್ಲ. ಪೋನ್ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂದು ನಿವಾಸಿಗಳು ದೂರಿದರು.

‘ಪಿಡಿಒ ಪಟ್ಟಣದಲ್ಲಿ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಕುಳಿತು ಕಾಲ ಕಳೆಯುತ್ತಾರೆ. ಕಷ್ಟಪಟ್ಟು ಅವರನ್ನು ಸಂಪರ್ಕಿಸಿದ್ದರೆ ತಾನು ಇರುವ ಸ್ಥಳಕ್ಕೇ ಬನ್ನಿ ಎನ್ನುತ್ತಾರೆ. ಇದರಿಂದ ಪಂಚಾಯಿತಿ ಕೆಲಸಗಳಿಗೆ ನಾವು ಗ್ರಾಮದಿಂದ ಪಟ್ಟಣಕ್ಕೆ ಹೋಗಬೇಕು’ ಎಂದು ರೈತರೊಬ್ಬರು ದೂರಿದರು.

‘ಅವರು ಹಲವು ನಂಬರ್ ಉಪಯೋಗಿಸುತ್ತಾರೆ. ಸರ್ಕಾರದಿಂದ ಕೊಟ್ಟಿರುವ ನಂಬರ್‌ಗೆ ಕರೆ ಮಾಡಿದರೆ ಯಾವಾಗಲೂ ಸ್ವೀಚ್ಆಫ್‌ ಎಂದು ಬರುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಆರೋಪಿಸಿದರು. ಬಡಾವಣೆಯ ಸಮಸ್ಯೆಯ ವಿಚಾರವಾಗಿ ತಿಳಿಯಲು ಹಲವು ಬಾರಿ ಕರೆ ಮಾಡಿದರೂ, ಪಿಡಿಒ ಕರೆ ಸ್ವೀಕರಿಸಲಿಲ್ಲ.

* * 

ಬಡಾವಣೆಯ ಸಮಸ್ಯೆಯನ್ನು ಪಿಡಿಒ ಗಮನಕ್ಕೆ ತಂದು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಅವರಿಗೆ ಸೂಚಿಸಲಾಗುವುದು
ಎಚ್.ಎಸ್. ಬಿಂದ್ಯಾ ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.