ADVERTISEMENT

ಮೌಲ್ಯಯುತ ಬೋಧನೆ ಶಿಕ್ಷಕರ ಗುರಿಯಾಗಲಿ

‘ಜೀವನದ ಮೌಲ್ಯಗಳು’ ಉಪನ್ಯಾಸದಲ್ಲಿ ಸಾಹಿತಿ ಮದ್ದೂರು ದೊರೆಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:45 IST
Last Updated 17 ಏಪ್ರಿಲ್ 2017, 7:45 IST
ಯಳಂದೂರು:  ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರು ಮೊದಲ ಮೌಲ್ಯಗಳ ಪ್ರತಿಪಾದಕರು ಹಾಗೂ ಪರಿಪಾಲಕರಾಗಬೇಕು ಎಂದು ಸಾಹಿತಿ ಮದ್ದೂರು ದೊರೆಸ್ವಾಮಿ ಸಲಹೆ ನೀಡಿದರು.
 
ಅವರು ಸಮೀಪದ ಮುರಟಿ ಪಾಳ್ಯದ ಗಿರಿಜನ ಆಶ್ರಮ ಶಾಲೆಯಲ್ಲಿ ಭಾನುವಾರ ಚಾಮರಾಜನಗರ ಸಿದ್ಧಾರ್ಥ ಶಿಕ್ಷಕರ ತರಬೇತಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ‘ಜೀವನದ ಮೌಲ್ಯಗಳು’  ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
 
ಪ್ರಪಂಚ ಪ್ರಸ್ತುತ ವಿದ್ಯಮಾನಗಳು ಹಳೇ ಕಾಲದಿಂದ ಜತನವಾಗಿಟ್ಟುಕೊಂಡಿದ್ದ ಆದರ್ಶ, ಮೌಲ್ಯಗಳು, ಸತ್ಯ, ನ್ಯಾಯ, ಪ್ರಾಮಾಣಿಕತೆ ಕ್ಷೀಣಿಸುತ್ತಿವೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಮಾನವೀಯ ಸಂಬಂಧಗಳ ಬಿರುಕು ಮತ್ತಷ್ಟು ದೊಡ್ಡದಾಗುತ್ತದೆ. ವಿಶ್ವಶಾಂತಿ ಮತ್ತು ಸೌಹಾರ್ದತೆ ಕದಡುತ್ತಿರುವ ಈ ದಿನಗಳಲ್ಲಿ ದೇಶಕ್ಕೆ ಮಾದರಿ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದರು.
 
ಕಲಿಸುವ ಗುರು ಮೊದಲು ಇದರ ಪಾಲಕನಾಗಬೇಕು. ಸಂಬಂಧಗಳಲ್ಲಿ ವ್ಯವಹಾರದ ಬದಲು ಬಾಂಧವ್ಯಗಳನ್ನು ವೃದ್ಧಿಸುವ ಕೆಲಸವಾಗಬೇಕು. ಶಿಕ್ಷಣದ ಗುರಿ ಕೇವಲ ಉದ್ಯೋಗಗಳಿಸಿಕೊಳ್ಳುವ ಅಥವಾ ಹಣ ಮಾಡುವ ಪ್ರವೃತ್ತಿಗೆ ಮಾತ್ರ ಸೀಮಿತವಾಗದೆ. ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಮುನ್ನುಡಿ ಬರೆಯುವಂತಿರಬೇಕು.
 
ಗ್ರಾಮೀಣ ಪ್ರದೇಶಗಳಲ್ಲಿ ಇಂದು ವಿದ್ಯುನ್ಮಾನ ಪರಿಕರ ಅತಿಯಾದ ಬಳಕೆಯಿಂದ ಆದರ್ಶ ಕುಟುಂಬಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಸಂಘ ಜೀವಿಯಾದ ಮನುಷ್ಯನ ಜೀವನ ಏಕಾಂಗಿತನಕ್ಕೆ ದೂಡಲ್ಪಡುತ್ತಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.
 
ತಾಲ್ಲೂಕು, ಹೋಬಳಿ, ಗ್ರಾಮಗಳಲ್ಲೂ ವೃದ್ಧಾಶ್ರಮಗಳು ತಲೆ ಎತ್ತುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ ಎಂದರು.
ದೇಶ ಶಾಂತಿ ಸುಭೀಕ್ಷೆಯಿಂದ ಇರಬೇಕಾದರೆ ಮೊದಲು ಕುಟುಂಬಗಳಲ್ಲಿ ಇದನ್ನು ಬಿತ್ತುವ ಕೆಲಸ ಮಾಡಬೇಕು. ಜಗತ್ತಿನಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಶಿಕ್ಷಕ ಮನಸ್ಸು ಮಾಡಿದರೆ ಮಾದರಿ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಇಡುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಎಂದರು. 
 
ಶಿಬಿರಾಧಿಕಾರಿ ಎಚ್. ಮಂಟೇಶ್ ಮಾತನಾಡಿ, ಇಂದು ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸವಾಗುತ್ತಿದೆ. ಇದಕ್ಕಾಗಿಯೇ ಪರಿಣತಿಯನ್ನು ಪಡೆದ ತಂಡ ಕೆಲಸ ಮಾಡುತ್ತಿದೆ.
 
ರಾಜಕೀಯವನ್ನು ಇಂತಹ ಕೀಳು ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ. ಇದರ ಮೊದಲ ಬಲಿಪಶುಗಳು ಯುವಕರಾಗಿದ್ದಾರೆ ಎಂದು ವಿಷಾದಿಸಿದರು. ಹೊಂಗನೂರು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎನ್. ಪ್ರಸಾದ್, ಸಹ ಶಿಬಿರಾಧಿಕಾರಿ ಕೆ.ಎಂ. ಮಹೇಶ್ ರಾಜೇಶ್ವರಿ, ಇತರರು ಇದ್ದರು.
***
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದೆ. ಧರ್ಮದ ತಿರುಳು ತಿರುಚಿ ಹೇಳುವ ಕೀಳುಮಟ್ಟದ ಅಭಿರುಚಿ ಕಡಿಮೆಯಾಗಬೇಕು
ಎಚ್. ಮಂಟೇಶ್, ಶಿಬಿರಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.