ADVERTISEMENT

ರಸ್ತೆ ವಿಸ್ತರಣೆ; 187 ಮರಗಳ ಬಲಿ

ಅಮಿತ್ ಎಂ.ಎಸ್.
Published 10 ನವೆಂಬರ್ 2017, 6:12 IST
Last Updated 10 ನವೆಂಬರ್ 2017, 6:12 IST
ಕೊಳ್ಳೇಗಾಲದಲ್ಲಿ ವಿಸ್ತರಣೆಗೆ ಒಳಗಾಗಲಿರುವ ರಸ್ತೆ
ಕೊಳ್ಳೇಗಾಲದಲ್ಲಿ ವಿಸ್ತರಣೆಗೆ ಒಳಗಾಗಲಿರುವ ರಸ್ತೆ   

ಚಾಮರಾಜನಗರ: ಕೊಳ್ಳೇಗಾಲದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಸುಮಾರು 187 ಮರಗಳನ್ನು ಬಲಿಕೊಡಲು ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ನಗರೋತ್ಥಾನ ಯೋಜನೆಯಡಿ ನಗರದ ಪಿಡಬ್ಲ್ಯೂಡಿ ಪ್ರವಾಸಿ ಮಂದಿರ ವೃತ್ತದಿಂದ ಲಕ್ಕರಸನಪಾಳ್ಯದವರೆಗೆ ಸುಮಾರು 2 ಕಿ.ಮೀ. ರಸ್ತೆಯನ್ನು ₹2.32 ಕೋಟಿ ವೆಚ್ಚದಲ್ಲಿ 60 ಅಡಿಗೆ ವಿಸ್ತರಿಸಿ ಅಭಿವೃದ್ಧಿಪಡಿಸಲು ನಗರಸಭೆ ಮುಂದಾಗಿದೆ.

2 ಕಿ.ಮೀ. ವ್ಯಾಪ್ತಿಯಲ್ಲಿ ವಿವಿಧ ಜಾತಿಯ ಸುಮಾರು 270 ಮರಗಳಿದ್ದು, ಅದರಲ್ಲಿ 187 ಮರಗಳ ಹನನಕ್ಕೆ ಉದ್ದೇಶಿಸಲಾಗಿದೆ. ಮರಗಳನ್ನು ಕಡಿಯುವ ನಿರ್ಧಾರಕ್ಕೆ ಪರಿಸರ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಗರದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಒಳ್ಳೆಯ ರಸ್ತೆ ಮತ್ತು ಚರಂಡಿ ನಮಗೆ ಬೇಕು. ಆದರೆ, ಅದರ ನೆಪದಲ್ಲಿ ಮರಗಳನ್ನು ಕಡಿಯುವುದು ಸರಿಯಲ್ಲ’ ಎಂದು ಕರ್ನಾಟಕ ವೈಲ್ಡ್‌ ಲೈಫ್‌ ಟ್ರಸ್ಟ್‌ನ ಪಿ. ಜಾನ್‌ ಪೀಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲೇ ನಾವು ಬರದ ಹೊಡೆತದಿಂದ ತತ್ತರಿಸಿದ್ದೇವೆ. ಮರಗಳಿದ್ದರೆ ತಾನೆ ಮಳೆಯಾಗುವುದು? ಈಗ ಇವುಗಳನ್ನೂ ಕಡಿದರೆ ಭವಿಷ್ಯದ ಸ್ಥಿತಿ ಏನು ಎಂಬುದು ಆತಂಕ ಮೂಡಿಸುತ್ತದೆ. ಈ ಮರಗಳು 100–150 ವರ್ಷ ಬೆಳೆಯುತ್ತವೆ. ಅಲ್ಲಿಯವರೆಗೆ ನಾವು ಇರುವುದಿಲ್ಲ. ನಮ್ಮ ಮೊಮ್ಮಕ್ಕಳ ಕಾಲಕ್ಕೆ ಮರ ಬೆಳೆಯುವ ಹೊತ್ತಿಗೆ ಮತ್ತೆ ಅಭಿವೃದ್ಧಿಗಾಗಿ ಕಡಿಯುತ್ತಾರೆ’ ಎಂದು ಹೇಳಿದರು.

‘ಈಗಿರುವ 40 ಅಡಿ ರಸ್ತೆಯನ್ನು ವಿಸ್ತರಿಸದೆ ಏಕಮುಖ ಸಂಚಾರ ಮಾಡಿ, ಪರ್ಯಾಯ ಮಾರ್ಗ ಕಲ್ಪಿಸಲು ಅವಕಾಶವಿದೆ. ಹಾಗೆ ವಿಸ್ತರಣೆ ಮಾಡಲೇಬೇಕು ಎಂದಿದ್ದರೆ, ಮರಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಿ’ ಎಂದು ಆಗ್ರಹಿಸಿದರು.

‘ನಾವು ಒಂದೆಡೆ ಬೀಜದುಂಡೆಗಳನ್ನು ಮಾಡಿ ಪ್ರತಿ ವರ್ಷ ಗಿಡಗಳನ್ನು ಬೆಳೆಸುತ್ತಿದ್ದೇವೆ. ಇತ್ತ ಇವರು ಬೆಳೆದ ಮರಗಳನ್ನು ಕಡಿಯುತ್ತಾ ಬರುತ್ತಿದ್ದಾರೆ. ಇದರಿಂದ ನಾವು ಗಿಡ ಬೆಳೆಸಿ ಪ್ರಯೋಜನವೇನು’ ಎಂಬ ಪ್ರಶ್ನೆ ಅವರದು.

‘ಇದು ನಗರೋತ್ಥಾನ ಯೋಜನೆಯ 2ನೇ ಹಂತದಡಿ ಪ್ರಾರಂಭಿಸಿರುವ ಕೆಲಸ. ಜಿಲ್ಲಾಡಳಿತದ ಸೂಚನೆಯಂತೆ ಕೆಲಸ ನಡೆಯಲಿದೆ. ರಸ್ತೆಯ ಬಲಬದಿಯ 11 ಮೀಟರ್‌ ಸರ್ಕಾರಿ ಭೂಮಿ ಮತ್ತು ಎಡಬದಿಯಲ್ಲಿ 7 ಮೀಟರ್‌ ಖಾಸಗಿ ಭೂಮಿ ರಸ್ತೆಗೆ ಸೇರಬೇಕಿದೆ. ಇದಕ್ಕೆ ಮರಗಳ ತೆರವು ಅನಿವಾರ್ಯ’ ಎಂದು ಪೌರಾಯುಕ್ತ ಲಿಂಗರಾಜು ತಿಳಿಸಿದರು.

‘ಮುಖ್ಯಮಂತ್ರಿಗಳು ಜಿಲ್ಲೆಗೆ ನೀಡಿದ ಅನುದಾನದಡಿ ಖಾಸಗಿ ಜಮೀನು ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ. ಎಲ್ಲ ಅಂತಿಮ ಗೊಂಡರೆ 2–3 ತಿಂಗಳಲ್ಲಿ ಕೆಲಸ ಆರಂಭವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.