ADVERTISEMENT

ರೈತರ ಜೀವನೋತ್ಸಾಹ ಹೆಚ್ಚಿಸಿದ ಮಳೆ

ಐದನೇ ವರ್ಷವೂ ಜಿಲ್ಲೆಯಲ್ಲಿ ಬರ ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತರು

ಕೆ.ಎಚ್.ಓಬಳೇಶ್
Published 20 ಮಾರ್ಚ್ 2017, 9:34 IST
Last Updated 20 ಮಾರ್ಚ್ 2017, 9:34 IST
ಜಿಲ್ಲೆಯ ಹೆಗ್ಗೋಠಾರ ಗ್ರಾಮದ ಹೊರವಲಯದಲ್ಲಿ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿರುವುದು.
ಜಿಲ್ಲೆಯ ಹೆಗ್ಗೋಠಾರ ಗ್ರಾಮದ ಹೊರವಲಯದಲ್ಲಿ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿರುವುದು.   

ಚಾಮರಾಜನಗರ: ಸತತ ಐದು ವರ್ಷದಿಂದ ಜಿಲ್ಲೆಯ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಜಿಲ್ಲೆಗೆ ಬರಪೀಡಿತವೆಂಬ ಹಣೆಪಟ್ಟಿ ಅಂಟಿಕೊಂಡಿದೆ.
ಈ ವರ್ಷವಾದರೂ ಉತ್ತಮ ಮಳೆ ಸುರಿಯುತ್ತದೆಯೇ? ಎಂದು ರೈತರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಈ ನಡುವೆಯೇ ಎರಡು ದಿನದ ಹಿಂದೆ ಸುರಿದ ಮಳೆಯು ಬರದಿಂದ ತತ್ತರಿಸಿದ್ದ ರೈತರಲ್ಲಿ ಜೀವನೋತ್ಸಾಹ ಹೆಚ್ಚಿಸಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ, ಕಸಬಾ, ತೆರಕಣಾಂಬಿ ಹೋಬಳಿಯಲ್ಲಿ ಹದ ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನ ಉಡಿಗಾಲ, ಬೇಡರಪುರ, ಹೆಗ್ಗೋಠಾರ, ಮೇಗಲಹುಂಡಿ, ಮುಕ್ಕಡಹಳ್ಳಿ ಸುತ್ತಮುತ್ತ ಉತ್ತಮ ಮಳೆ ಸುರಿದಿದೆ. ಜಿಲ್ಲಾ ಕೇಂದ್ರದ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಹದ ಮಳೆಯಾಗಿದೆ. ಯಳಂದೂರು ತಾಲ್ಲೂಕಿನ 2 ಹೋಬಳಿಯಲ್ಲಿ ಮಳೆ ಸುರಿದಿದೆ. ಇದರಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಇಣುಕಿದೆ.

ಜಿಲ್ಲೆಯಲ್ಲಿ ಪ್ರತಿವರ್ಷ ಯುಗಾದಿ ಹಬ್ಬ ಆರಂಭದ ವಾರ ಮತ್ತು ಹಬ್ಬದ ನಂತರ ವಾರಗಳಲ್ಲಿ ಮಳೆ ಸುರಿಯುತ್ತಿತ್ತು. ಚಾಮರಾಜನಗರ ತಾಲ್ಲೂಕಿನ ರೈತರು ಈ ಮಳೆಗೆ ಹೈಬ್ರೀಡ್‌ ಜೋಳ, ಜೋಳ, ಸೂರ್ಯಕಾಂತಿ, ಹೆಸರು, ಉದ್ದು ಬಿತ್ತನೆ ಮಾಡುತ್ತಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಅನ್ನದಾತರ ಈ ಬೆಳೆಗಳನ್ನೇ ಬಿತ್ತನೆ ಮಾಡುವುದು ವಾಡಿಕೆ. ಜತೆಗೆ, ಈ ತಾಲ್ಲೂಕಿನ ತೆರಕಣಾಂಬಿ, ಕಸಬಾ, ಬೇಗೂರು ಮತ್ತು ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯಲ್ಲಿ ಬಿಟಿ ಹತ್ತಿ ಬಿತ್ತನೆ ಮಾಡಲಾಗುತ್ತದೆ. ಈ ಬಿತ್ತನೆ ಪೂರ್ಣಗೊಂಡ ಬಳಿಕ ರೈತರು ಶೇಂಗಾ ಬಿತ್ತನೆಗೆ ಮುಂದಾಗುತ್ತಾರೆ.

ಈಗಾಗಲೇ, ಮಳೆ ಸುರಿದಿರುವ ಪ್ರದೇಶದಲ್ಲಿ ರೈತರು ಬಿತ್ತನೆಗೆ ಜಮೀನಿನ ಸಿದ್ಧತೆಗೊಳಿಸುವಲ್ಲಿ ನಿರತರಾಗಿದ್ದಾರೆ. ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಹಂಗಾಮಿನಡಿ ಮಳೆ ಸುರಿಯುವುದು ವಾಡಿಕೆ. ಆದರೆ, ಮುಂಗಾರು ಹಂಗಾಮಿನಲ್ಲಿ ಈ ತಾಲ್ಲೂಕುಗಳಲ್ಲಿ ಮಳೆ ಸುರಿಯುವುದಿಲ್ಲ. ಈ ಹವಾಮಾನ ವೈಪರೀತ್ಯದಿಂದ ರೈತರು ಪ್ರತಿವರ್ಷ ತೊಂದರೆಗೆ ಸಿಲುಕುತ್ತಿದ್ದಾರೆ.

ಬಿತ್ತನೆಬೀಜದ ಕೊರತೆ ಇಲ್ಲ: ‘ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ ಹಲವೆಡೆ ಮಳೆ ಸುರಿದಿದೆ. ಪೂರ್ವ ಮುಂಗಾರು ಹಂಗಾಮಿನಡಿ 24 ಸಾವಿರ ಟನ್‌ನಷ್ಟು ಹೈಬ್ರೀಡ್‌ ಜೋಳ, ಸೂರ್ಯಕಾಂತಿ, ಜೋಳ, ಹತ್ತಿ, ಹೆಸರು, ಉದ್ದು, ಶೇಂಗಾ ಬಿತ್ತನೆ ಬೀಜದ ಆವಶ್ಯಕತೆಯಿದೆ.

ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆಬೀಜ ಮತ್ತು ರಸಗೊಬ್ಬರ ದಾಸ್ತಾನು ಇದೆ. ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಜಿ.ಎಚ್. ಯೋಗೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಟ್ರ್ಯಾಕ್ಟರ್‌ಗೆ ಹೆಚ್ಚಿದ ಬೇಡಿಕೆ
ಚಾಮರಾಜನಗರ: 
ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಜಾನುವಾರು ಬಳಸಿಕೊಂಡು ಉಳುಮೆ ಮಾಡುವ ಪದ್ಧತಿ ಕಡಿಮೆಯಾಗಿದೆ. ಎತ್ತುಗಳನ್ನು ಬಳಸಿ ಹೊಲದಲ್ಲಿ ಉಳುಮೆ ಮಾಡುವ ಸಾಂಪ್ರದಾಯಿಕ ವಿಧಾನ ಕಂಡುಬರುತ್ತಿಲ್ಲ. ಜಮೀನಿನ ಮಾಲೀಕರು ಉಳುಮೆಗೆ ಟ್ರ್ಯಾಕ್ಟರ್‌ಗಳ ಮೊರೆ ಹೋಗುವುದೇ ಹೆಚ್ಚು.

ಹದ ಮಳೆ ಸುರಿದಿರುವುದರಿಂದ ಉಳುಮೆ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆಯೂ ಹೆಚ್ಚಿದೆ. ಒಂದು ಗಂಟೆಗೆ ₹ 550ರಿಂದ ₹ 600 ದರ ನಿಗದಿಪಡಿಸಿ ಉಳುಮೆ ಮಾಡಲಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಲಿದೆ.

‘ಒಂದು ಗಂಟೆಗೆ 2 ಎಕರೆಯಷ್ಟು ಜಮೀನಿನ ಉಳುಮೆ ಮಾಡಬಹುದು. ಎರಡು ದಿನದ ಹಿಂದೆ ಸುರಿದ ಮಳೆಗೆ ಜಮೀನಿನಲ್ಲಿ ತೇವಾಂಶ ಹೆಚ್ಚಿತ್ತು. ಹೊಲದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಉಳುಮೆಗೆ ಸಾಧ್ಯವಾಗಿರಲಿಲ್ಲ. ಭಾನುವಾರದಿಂದ ಹೆಗ್ಗೋಠಾರ ಭಾಗದಲ್ಲಿ ಉಳುಮೆ ನಡೆಯುತ್ತಿದೆ’ ಎಂದು ಟ್ರ್ಯಾಕ್ಟರ್‌ ಚಾಲಕ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

*
ಸರ್ಕಾರ ಇನ್ನೂ ಬಿತ್ತನೆಬೀಜದ ದರ ನಿಗದಿಪಡಿಸಿಲ್ಲ. ವಾರದೊಳಗೆ ಆದೇಶ ಬರಲಿದೆ. ಆ ನಂತರ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆಬೀಜ ವಿತರಣೆಗೆ ಕ್ರಮವಹಿಸಲಾಗುವುದು.
-ಜಿ.ಎಚ್. ಯೋಗೇಶ್‌,
ಉಪ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.