ADVERTISEMENT

ವಿವಿಧೆಡೆ ಸಾಧಾರಣ ಮಳೆ, ತಂಪಾದ ಇಳೆ

ಬಿಸಿಲಿನ ಝಳದಿಂದ ತತ್ತರಿಸಿದ್ದ ರೈತರು, ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದ ಮಳೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 7:07 IST
Last Updated 7 ಮಾರ್ಚ್ 2017, 7:07 IST
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ತಾಲೂಕಿನ ವಿವಿಧೆಡೆ ಸೋಮವಾರ ಕೆಲಹೊತ್ತು ಮಳೆ ಸುರಿ ಯಿತು. ಬಿಸಿಲಿನ ಝಳದಿಂದ ತತ್ತರಿಸಿದ್ದ  ರೈತರು ಮತ್ತು ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿ ತಂದಿತು.
 
ಬಂಡೀಪುರ ಅಭಯಾರಣ್ಯ ಪ್ರದೇಶ, ಗೋಪಾಲಸ್ವಾಮಿ ಬೆಟ್ಟ, ಮದ್ದೂರು, ಮೂಲೆಹೊಳೆ, ಓಂಕಾರ್ ಹಾಗೂ ಕುಂದಕೆರೆ ವಲಯಗಳಿಗೆ ಸ್ವಲ್ಪ ಪ್ರಮಾಣದ ಮಳೆಯಾಗಿದೆ. 
ಒಂದು ತಿಂಗಳಿನಿಂದ ಕಾಳ್ಗಿಚ್ಚು ಕಾಣಿಸಿಕೊಂಡು ನಲುಗಿದ್ದ ಅರಣ್ಯ ಭೂಮಿ, ಈ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ಹಸಿರಾಗುವ ವಿಶ್ವಾಸವಿದೆ. ಮುಂದೆ ಇನ್ನಷ್ಟು ಮಳೆ ಸುರಿಯುವ ವಿಶ್ವಾಸ ರೈತರದು. ನೀರು ಹಾಗೂ ಮೇವಿನ ಕೊರತೆಯಿಂದ ಬಸವಳಿದಿದ್ದ ವನ್ಯಜೀವಿಗಳಿಗೆ ಕೊರತೆ ನೀಡುವ ಆಶಯ ಅಧಿಕಾರಿಗಳಲ್ಲಿದೆ. 
 
ತಾಲೂಕಿನ ಯಲಚೆಟ್ಟಿ, ಮಂಗಲ ಪ್ರದೇಶಗಳಲ್ಲಿಯೂ ಅರ್ಧ ಗಂಟೆ ಕಾಲ ಮಳೆಯಾಗಿದೆ.  ಬಂಡೀಪುರ ಹತ್ತಿರದ  ಮೇಲು ಕಾಮನಹಳ್ಳಿ, ಹಂಗಳ, ಗುಂಡ್ಲು ಪೇಟೆ, ಗೋಪಾಲಪುರ, ಬೇಗೂರು ಭಾಗದಲ್ಲಿಯೂ ಸಾಧಾರಣ ಮಳೆಯಾಗಿದೆ. 
 
ಕೃಷಿಗೆ ಮುಂದಾಗದಂತೆ ರೈತರಿಗೆ ಸಲಹೆ
ಕೊಳ್ಳೇಗಾಲ: ತಾಲ್ಲೂಕಿನ ವಿವಿಧೆಡೆ ಸೋಮವಾರ ಸಾಧಾರಣ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ ಇಳೆಗೆ ತಂಪೆರೆಯಿತು.  ತಾಲ್ಲೂಕು ವ್ಯಾಪ್ತಿಯ ರಾಮಾಪುರ, ಪಿ.ಜಿ.ಪಾಳ್ಯ, ಲೊಕ್ಕನಹಳ್ಳಿ, ಕೊಳ್ಳೇಗಾಲ ಪಟ್ಟಣ, ಸಿದ್ದಯ್ಯನಪುರ ಸೇರಿ ಇತರೆ ಗ್ರಾಮಗಳ ವ್ಯಾಪ್ತಿಗಳಲ್ಲಿ ಮಳೆ ಸುರಿದಿದೆ. ಈ ಅಕಾಲಿಕ ಮಳೆ ಕೃಷಿಗೆ ನೆರವಾಗದು. ಆದರೆ, ಮೇವು ಸ್ಥಿತಿ ಸುಧಾರಿಸಲು ಸ್ವಲ್ಪ ಅನುಕೂಲ ಎಂದು ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್‌. ಮಹಾದೇವ ಹೇಳಿದರು. 
 
ಸಲಹೆ: ಈಗ ರೈತರು ಕೃಷಿಗೆ ಮುಂದಾಗಬಾರದು. ಜಮೀನುಗಳಲ್ಲಿ ಮೇವು ಬೆಳೆಗೆ ಒತ್ತು ನೀಡಿ ಜಾನುವಾರು ರಕ್ಷಿಸಬೇಕು. ಮಳೆ ನೀರು ವ್ಯರ್ಥವಾಗುವುದನ್ನು ತಪ್ಪಿಸಬೇಕು. ನೀರು ಭೂಮಿಯಲ್ಲಿ ಇಂಗುವಂತೆ ಒತ್ತುನೀಡಬೇಕು ಎಂದು ಸಲಹೆ ಮಾಡಿದರು. ಮುಂಗಾರು ಕೃಷಿ ಹಂಗಾಮಿಗೆ ಜಮೀನು ಉಳುಮೆ ಮಾಡಿ ಕೃಷಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
 
ಚದುರಿದಂತೆ ಬಿದ್ದ ಮಳೆ ಜನರಿಗೆ ಹರ್ಷ ಮೂಡಿಸಿದೆ.  ದೂಳು ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಕ್ಕಿದೆ. ಇನ್ನು ಕೆಲ ದಿನ ಮಳೆಯಾದಲ್ಲಿ  ಕುಡಿಯುವ ನೀರು ಹಾಗೂ ಮೇವು ಸಮಸ್ಯೆ ಸ್ವಲ್ಪ ಪರಿಹಾರ ಸಿಗಬಹುದು ಎಂಬುದು ರೈತರ ಆಶಯವಾಗಿದೆ.
 
ಶಾಲಾ ಮಕ್ಕಳ ಹರ್ಷ
ಯಳಂದೂರು: ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಸಾಧಾರಣ ಮಳೆ ಸುರಿಯಿತು. ಉಷ್ಣಾಂಶ ಏರಿಕೆಯಿಂದ ಬಸವಳಿದಿದ್ದ ಜನರು ಮಳೆಗೆ ಸಂಭ್ರಮಿಸಿದರು. ತಂಪಾದ ವಾತಾವರಣ ಕಂಡ ಶಾಲಾ ಮಕ್ಕಳು ಹರ್ಷ ಚಿತ್ತರಾದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.