ADVERTISEMENT

ಶಾಲೆಯಲ್ಲಿ ನೆರಳಿಗಾಗಿ ಹುಡುಕಾಟ

ಮಕ್ಕಳ ಅನುಮಾನ ಬಗೆಹರಿಸಿದ ‘ಶೂನ್ಯ ನೆರಳು’ ವಿದ್ಯಮಾನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 10:17 IST
Last Updated 27 ಆಗಸ್ಟ್ 2016, 10:17 IST

ಯಳಂದೂರು: ಮಕ್ಕಳ ನೆತ್ತಿಯ ಮೇಲೆ ನೇಸರ ಬಂದಾಗ ನೆರಳು ಶೂನ್ಯವಾದ ವಿದ್ಯಮಾನಕ್ಕೆ ಆ. 19ರ ಶುಕ್ರವಾರ ಯಳಂದೂರು ಪಟ್ಟಣ ಸಾಕ್ಷಿಯಾಯಿತು.

ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಮಕ್ಕಳು ಮತ್ತು ಬೋಧಕರು ತಮ್ಮ ಶಾಲಾ ಆವರಣದಲ್ಲಿ ಸರಳ ಪರಿಕರ ಇಟ್ಟು ‘ಶೂನ್ಯ ನೆರಳಿನ ಮಧ್ಯಾಹ್ನ’ದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು. ವಿದ್ಯಾರ್ಥಿನಿಯರ ಕುತೂಹಲದ ಪ್ರಶ್ನೆಗಳಿಗೆ ನಿಸರ್ಗವೇ ನೆರಳಿನ ಚಿತ್ತಾರದ ಮೂಲಕ ಉತ್ತರಿಸಿತು!

‘ಉತ್ತರಕ್ಕೆ ಚಲಿಸುವ ಸೂರ್ಯ ಜೂನ್‌ 22ರಂದು ಗರಿಷ್ಠಮಟ್ಟಕ್ಕೆ ಮುಟ್ಟಿದರೆ ಬಳಿಕ ದಕ್ಷಿಣ ದಿಕ್ಕಿಗೆ ಹಿಂತಿರುಗುತ್ತಾನೆ. ಇದೇ ದಕ್ಷಿಣಾಯನ. ದಕ್ಷಿಣಕ್ಕೆ ಸಾಗುವಾಗ ಆ. 19ರಂದು  ಬೆಂಗಳೂರು ನಗರದ ನೆತ್ತಿ ಮೇಲೆ ಹಿಂತಿರುಗುತ್ತಾನೆ. ಅಂದೂ ಸಹ ಮಧ್ಯಾಹ್ನದ ನೆರಳು ಇಲ್ಲವಾಗುತ್ತದೆ’. ಭೂಮಿ ತನ್ನ ಅಕ್ಷದ ಸುತ್ತಲೂ ಹಾಗೂ ಸೂರ್ಯನ ಸುತ್ತಲೂ ಸುತ್ತುವಾಗ ವರ್ಷದಲ್ಲಿ 2ಬಾರಿ ಇಂತಹ ಘಟನೆ ಜರುಗುತ್ತದೆ.  ‘ಮುಂಜಾನೆಯಿಂದ ಮಧ್ಯಾಹ್ನದ ತನಕ ನೆರಳು ಗಿಡ್ಡವಾಗುತ್ತಾ ಹೋಗುತ್ತದೆ. ಮಧ್ಯಾಹ್ನದಿಂದ ಮುಸ್ಸಂಜೆ ತನಕ ನೆರಳಿನ ಉದ್ದ ಕನಿಷ್ಠವಾಗಿರುವ ಕ್ಷಣ. ನೆರಳು ಕನಿಷ್ಠ ಆಗುವುದೇ ಹೊರತು ಶೂನ್ಯ ಆಗಲಾರದು.

‘ಬೆಂಗಳೂರು ಸಮಭಾಜಕ ವೃತ್ತದ ಉತ್ತರಕ್ಕೆ ಇದೆ. ನಮ್ಮ ಜಿಲ್ಲೆಯೂ ಇದರ ಸಮೀಪದಲ್ಲಿಯೇ ಇದೆ. ಹೀಗಾಗಿ ಅಂದೂ ಸಹ ನೆರಳು ಕಾಣಿಸಿಕೊಂಡಿರಲಿಲ್ಲ’ ಎನ್ನುತ್ತಾರೆ ವಿಜ್ಞಾನ ಶಿಕ್ಷಕರಾದ ನಾಗೇಶ್ ಮತ್ತು ಲಕ್ಷ್ಮಿ.

ಸರಳ ಪರಿಕರಗಳಾದ ಉದ್ದದ ವಸ್ತು, ಬಾಟಲ್‌ ಮೇಲೆ ಬಾಲ್ ಹಾಗೂ ತ್ರಿಕೋನಾಕೃತಿಯ ವಸ್ತುಗಳನ್ನು ಇಡಲಾಗಿತ್ತು. ಸೂರ್ಯ ಚಲಿಸಿದಂತೆಲ್ಲ ಬದಲಾಗುವ ನೆರಳನ್ನು ಮಕ್ಕಳೇ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಇದರಿಂದ ಪ್ರತಿ ಕ್ಷಣವೂ ನೆರಳು ಸರಿದಾಡುವ ಬಗ್ಗೆ ಮಾಹಿತಿಯನ್ನು ಬಾಲಕಿಯರು ಸಂಗ್ರಹಿಸಿದರು. ಇಂಥಹ ವಿದ್ಯಾಮಾನ ಬ್ರೆಜಿಲ್‌ನಲ್ಲಿ ಮಾರ್ಚ್‌ನಲ್ಲಿ ಕಾಣಿಸಿಕೊಂಡರೆ, ವಿವಿಧ ರಾಷ್ಟ್ರಗಳಲ್ಲೂ ವಿವಿಧ ದಿನ ಮಾನಗಳಲ್ಲಿ        ಪರೀಕ್ಷಿಸಬಹುದು. ಭೂಮಿ ತನ್ನ ಅಕ್ಷಕ್ಕೆ 23ವರೆ ಡಿಗ್ರಿ ಓರೆಯಾಗಿರುವುದು ಇದಕ್ಕೆ ಕಾರಣವಾಗಿದೆ. ವರ್ಷದ ಪ್ರಾರಂಭದಲ್ಲಿ ಜರುಗುವ ಇಂಥಹ ವೈಜ್ಞಾನಿಕ ವಿಧಾನವನ್ನು ಪ್ರಾಜೆಕ್ಟ್ ರೂಪದಲ್ಲಿ ದಾಖಲಿಸಲು ವಿದ್ಯಾರ್ಥಿಗಳಿಗೆ ಸಾಧ್ಯ ಇದೆ.

‘ಸಮಭಾಜಕ ರೇಖೆಯ ನೆತ್ತಿಯ ಮೇಲೆ ಸೂರ್ಯ ಬಂದಾಗ ದಕ್ಷಿಣಾಯನ, ಉತ್ತರಾಯಣ ಕಾಲದಲ್ಲಿ ಇದು ಸಂಭವಿಸುತ್ತದೆ. ಪ್ರತಿವರ್ಷವೂ ಕಂಡುಬರುವ ಇಂತಹ ಖಗೋಳ ವಿಸ್ಮಯಗಳು ಮಕ್ಕಳ ಸೃಜನಶೀಲ ಕಲಿಕೆಗೆ ಜೀವ ತುಂಬುತ್ತವೆ’ ಎನ್ನುತ್ತಾರೆ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ.
– ನಾ. ಮಂಜುನಾಥಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT