ADVERTISEMENT

ಸಂಭ್ರಮದ ಮಾರಮ್ಮನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 10:58 IST
Last Updated 24 ಏಪ್ರಿಲ್ 2014, 10:58 IST

ಹನೂರು: ಪಟ್ಟಣದಲ್ಲಿ ಮೈಸೂರು ಮಾರಮ್ಮನ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ‘ಬಾಯಿಬೀಗ’ ಕಾರ್ಯಕ್ರಮ ನಡೆಯಿತು.

ಹರಕೆ ಹೊತ್ತಿದ್ದ ಭಕ್ತರು ಮಂಗಳವಾರ ರಾತ್ರಿಯಿಂದಲೇ ಉಪವಾಸವಿದ್ದು, ಬುಧವಾರ ಬೆಳಿಗ್ಗೆ ತಣ್ಣೀರು ಸ್ನಾನ ಮಾಡಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಆ ನಂತರ ದೇವಸ್ಥಾನದ ಆರ್ಚಕರೊಬ್ಬರಿಂದ ಆರು ಭಕ್ತರು ಗಾಣಿಗರ ಬೀದಿಯಲ್ಲಿರುವ ಅರಳಿಕಟ್ಟೆಯ ಗಣಪತಿ ದೇವಸ್ಥಾನದಲ್ಲಿ ಬಾಯಿಗೆ ಬೀಗ ಹಾಕಿಸಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹರಕೆ ತೀರಿಸಿದರು.

ಇದನ್ನು ವೀಕ್ಷಿಸಲು ಮೈಸೂರು, ಬೆಂಗಳೂರು ಮತ್ತು ತಮಿಳುನಾಡಿನಿಂದ ಭಕ್ತರು ಆಗಮಿಸಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಅಜ್ಜೀಪುರದಲ್ಲಿಯೂ ಬಾಯಿಬೀಗ ಕಾರ್ಯಕ್ರಮ ನಡೆಯಿತು. ಗ್ರಾಮದೇವತೆ ಕೋಟೆ ಮಾರಮ್ಮನಿಗೆ ಹರಕೆ ಹೊತ್ತ ಭಕ್ತರು, ಬುಧವಾರ ಬಾಯಿಬೀಗ ಹಾಕಿಸಿಕೊಳ್ಳವುದರ ಮೂಲಕ ತಮ್ಮ ಹರಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.