ADVERTISEMENT

ಸಾಮರಸ್ಯ ಮೂಡಿಸಿದ ರಾಜ ಟಿಪ್ಪು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 5:37 IST
Last Updated 11 ನವೆಂಬರ್ 2017, 5:37 IST

ಕೊಳ್ಳೇಗಾಲ: ‘ಟಿಪ್ಪು ಸಮಾಜದಲ್ಲಿ ಸೌಹಾರ್ದ ಮತ್ತು ಸಾಮರಸ್ಯವನ್ನು ಮೂಡಿಸಿದ ರಾಜ’ ಎಂದು ಶಾಸಕ ಆರ್. ನರೇಂದ್ರ ಬಣ್ಣಿಸಿದರು. ಪಟ್ಟಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟಿಪ್ಪುವಿನ ಆಳ್ವಿಕೆಯಲ್ಲಿ ದೇವಸ್ಥಾನ ಹಾಗೂ ಮಸೀದಿಗಳನ್ನು ಅಕ್ಕಪಕ್ಕದಲ್ಲಿಯೇ ನಿರ್ಮಿಸಲಾಗಿತ್ತು. ಅವರಲ್ಲಿ ಧರ್ಮ ಸಮಾನತೆ ಹಾಗೂ ಸಾಮಾಜಿಕ ಕಳಕಳಿ ಇತ್ತು ಎಂದು ತಿಳಿಸಿದರು.

ನಮ್ಮ ದೇಶವನ್ನು ನೂರಾರು ರಾಜರು ಆಳಿದ್ದಾರೆ. ಅವರಲ್ಲಿ ಮೈಸೂರು ಸಾಮ್ರಾಜ್ಯದಲ್ಲಿ ಆಡಳಿತ ನೀಡಿದ ಟಿಪ್ಪು ಹೆಸರು ಅಜರಾಮರ. ಅವರ ಆಳ್ವಿಕೆಯ ಸಂದರ್ಭದಲ್ಲೇ ಕೆಆರ್‍ಎಸ್ ನಿರ್ಮಾಣಕ್ಕೆ ನೀಲ ನಕ್ಷೆಯನ್ನು ತಯಾರು ಮಾಡಿದ್ದರು. ನಾಡಿನ ರಕ್ಷಣೆ ಹಾಗೂ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಏಕೈಕ ವ್ಯಕ್ತಿ ಟಿಪ್ಪು ಎಂದರು.

ADVERTISEMENT

ಬಿಗಿಭದ್ರತೆ: ತಾಲ್ಲೂಕು ಪಂಚಾಯಿತಿ ಆವರಣದ ಉದ್ದಕ್ಕೂ ಬ್ಯಾರಿಕೇಡ್‌ ನಿರ್ಮಿಸಲಾಗಿತ್ತು. ಸಭಾಂಗಣದಲ್ಲಿ ಲೋಹ ಪತ್ತೆ ಸಾಧನ ಅಳವಡಿಸಲಾಗಿತ್ತು. ಡಿವೈಎಸ್‍ಪಿ ಪುಟ್ಟಮಾದಯ್ಯ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್‌ ಡಿ.ಜಿ. ರಾಜಣ್ಣ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್. ಬಾಲರಾಜು, ಕಿನಕಹಳ್ಳಿ ರಾಚಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾ ರಾಜಣ್ಣ, ನಗರಸಭೆ ಅಧ್ಯಕ್ಷ ಶಾಂತರಾಜು, ಸದಸ್ಯ ಸೈಯದ್ ಖಲೀಂಉಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್, ಸಹಶಿಕ್ಷಕ ಡಿ.ದೊರೆಸ್ವಾಮಿ, ಉಪವಿಭಾಗಾಧಿಕಾರಿ ಬಿ. ಫೌಜಿಯಾ ತರನಮ್, ತಹಶೀಲ್ದಾರ್ ಕಾಮಾಕ್ಷಮ್ಮ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.