ADVERTISEMENT

ಸಿದ್ದರಾಮಯ್ಯ ಬೇಡ, ಅಂಬೇಡ್ಕರ್‌ ಹೆಸರು ಹೇಳಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 7:33 IST
Last Updated 9 ಸೆಪ್ಟೆಂಬರ್ 2017, 7:33 IST

ಚಾಮರಾಜನಗರ: ‘ದಲಿತರಿಗೆ ಹಾಗೂ ರೈತರಿಗೆ ಸೌಲಭ್ಯ ಕೊಟ್ಟಿದ್ದು ಸಿದ್ದರಾಮಯ್ಯ ಎನ್ನಬೇಡಿ. ಅಂಬೇಡ್ಕರ್‌ ಅವರು ಕೊಟ್ಟಿದ್ದು ಎಂದು ಹೇಳಿ. ಇದು ಪಕ್ಷದ ಕಾರ್ಯಕ್ರಮವಲ್ಲ...’ –ನಗರದಲ್ಲಿ ಶುಕ್ರವಾರ ಕೃಷಿ ಇಲಾಖೆಯು ‘ಆತ್ಮ’ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೃಷಿಕರಿಗೆ ಇಲಾಖೆಯ ಸೌಲಭ್ಯದ ಅರಿವು ಮೂಡಿಸಲು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರ ಸಮ್ಮುಖದಲ್ಲಿಯೇ ರೈತರು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್‌ ಮಾತನಾಡುವಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ರಾಜ್ಯ ಕಾಗ್ರೆಸ್‌ ಸರ್ಕಾರ ನೀಡಿರುವಷ್ಟು ಅನುದಾನವನ್ನು ಯಾವ ರಾಜ್ಯವೂ ನೀಡಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ರೈತರು ಇದ್ದಾರೆ. ಅವರಿಗೆ ಹಲವು ಸೌಲಭ್ಯ ಕಲ್ಪಿಸಿದ್ದಾರೆ. ಬಗರ್‌ಹುಕುಂ ಸಾಗುವಳಿ ಚೀಟಿಗಳನ್ನು ನೀಡಲಾಗಿದೆ ಎಂದರು.

ಈ ವೇಳೆ ಆಕ್ರೋಶಗೊಂಡ ರೈತರು ಎದ್ದುನಿಂತು, ‘ಜಿಲ್ಲೆಯಲ್ಲಿ ಎಷ್ಟು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ? ಬಹುತೇಕ ಸಣ್ಣ ರೈತರಿಗೆ ಸಾಗುವಳಿ ಚೀಟಿ ವಿತರಿಸಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. ‘ರೈತರಿಗೆ ಸೌಲಭ್ಯವನ್ನು ನೀಡಿರುವುದು ಅಂಬೇಡ್ಕರ್‌. ಅವರ ಹೆಸರನ್ನು ಹೇಳಬೇಕು. ಇದು ಪಕ್ಷದ ಕಾರ್ಯಕ್ರಮವಲ್ಲ. ಪಕ್ಷದ ಹೆಸರು ಹೇಳಬೇಡಿ. ನಿಮ್ಮ ಭಾಷಣವನ್ನು ನಿಲ್ಲಿಸಿ’ ಎಂದು ಪಟ್ಟುಹಿಡಿದರು.

ADVERTISEMENT

ಇದರಿಂದ ಸಭೆಯಲ್ಲಿ ಕೆಲ ಸಮಯ ಗದ್ದಲದ ವಾತಾವರಣ ನಿರ್ಮಾಣವಾಯಿತು. ಮಾತು ಮುಂದುವರಿಸಲು ನವೀನ್ ಅವರಿಗೆ ರೈತರು ಅವಕಾಶ ನೀಡಲಿಲ್ಲ. ಬಳಿಕ, ನವೀನ್‌ ‘ತಪ್ಪಾಯಿತು’ ಎಂದು ಕ್ಷಮೆ ಕೋರಿದರು. ಕೂಡಲೇ ವಂದನಾರ್ಪಣೆ ಮಾಡಿದ ಇಲಾಖೆಯ ಅಧಿಕಾರಿಗಳು ರೈತರ ಮನವೊಲಿಸಿ ಕಾರ್ಯಾಗಾರ ಪ್ರಾರಂಭಿಸಿದರು.

ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ₹ 27,700 ಕೋಟಿ ಅನುದಾನ ಮೀಸಲಿಟ್ಟಿದ್ದು, ಪ್ರತಿ ಇಲಾಖೆಗೂ ಹಂಚಿಕೆ ಮಾಡಿದೆ. ಈ ಬಗ್ಗೆ ರೈತರು ಅರಿವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಲಾಖೆಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಮಾಡಬೇಕು. ಪ್ರತಿ ರೈತನಿಗೂ ಇಲಾಖೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಬೇಕು. ಇದಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡುತ್ತೇವೆ ಎಂದರು.

ಜಿಲ್ಲಾಧಿಕಾರಿ ಬಿ. ರಾಮು ಮಾತನಾಡಿ, ಕೃಷಿ ವೃತ್ತಿ ಹೆಚ್ಚು ತೃಪ್ತಿ ನೀಡುತ್ತದೆ. ಹಿಂದೆ ರೈತರು ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯದಿದ್ದರೂ ಉತ್ತಮ ಇಳುವರಿ ಪಡೆದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆದರೆ, ಪ್ರಸ್ತುತ ಮಳೆ ಅಭಾವದಿಂದ ಬೆಳೆ ನಷ್ಟವಾಗುತ್ತಿದೆ. ಜತೆಗೆ, ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ದೊರೆಯುತ್ತಿಲ್ಲ. ಇದರಿಂದ ರೈತರು ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ ಎಂದರು.

ರೈತರು ಸಂಕಲ್ಪ ಮಾಡಬೇಕು. ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು. ಅವರಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ನೀಡಬೇಕು. ಸರ್ಕಾರ ಫಲಾನುಭವಿಗಳಿಗೆ ನೀಡುವ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಅದನ್ನು ಮಾರಾಟ ಮಾಡುವ ಹಕ್ಕು ಫಲಾನುಭವಿಗಳಿಗೆ ಇಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಸದಸ್ಯರಾದ ಆರ್. ಬಾಲರಾಜು, ಶಶಿಕಲಾ, ನಾಗರಾಜು, ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ. ಹರೀಶ್‌ಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಂ. ತಿರುಮಲೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.