ADVERTISEMENT

ಸೇವೆ ಕಾಯಂಗೆ ಆಗ್ರಹ; ಧರಣಿಗೆ ನಿರ್ಧಾರ

ಬಿಎಸ್‌ಎನ್‌ಎಲ್‌ ಗುತ್ತಿಗೆ ನೌಕರರ 5ನೇ ಸಮ್ಮೇಳನ; 31ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:11 IST
Last Updated 9 ಜನವರಿ 2017, 9:11 IST

ಚಾಮರಾಜನಗರ: ‘ಬಿಎಸ್‌್ಎನ್‌್ಎಲ್‌ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸ ಬೇಕು ಎಂದು ಆಗ್ರಹಿಸಿ ಜ. 31ರಂದು ವಿಧಾನಸೌಧದ ಮುಂಭಾಗ ಧರಣಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್‌ ಹೇಳಿದರು.

ನಗರದ ರಕ್ಷಿತ ಮಹಲ್‌ನಲ್ಲಿ ಭಾನುವಾರ ಬಿಎಸ್‌್ಎನ್‌ಎಲ್‌ ಗುತ್ತಿಗೆ ನೌಕರರ ಸಂಘದಿಂದ ನಡೆದ 5ನೇ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಳ್ಳುವ ಪ್ರತಿಭಟನೆಯಲ್ಲಿ ಎಲ್ಲ ನೌಕರರು ಪಾಲ್ಗೊಳ್ಳಬೇಕು. ಜತೆಗೆ, ಜ. 15ರೊಳಗೆ ಈ ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮುಖ್ಯಸ್ಥರಿಗೆ ಮನವಿ ನೀಡಬೇಕು ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾಯಂ ಸ್ವರೂಪದ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಕಾಯಂ ನೌಕರರಿಗೆ ನೀಡುವ ಸಂಬಳ, ಸೌಲಭ್ಯ ನೀಡಬೇಕೆಂದು ಆದೇಶಿಸಿದೆ ಎಂದರು.

ಕೇಂದ್ರ ಸರ್ಕಾರ ಯಥಾವತ್ತಾಗಿ ಸುಪ್ರೀಂಕೋರ್ಟ್‌ನ ಆದೇಶ ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿ ಫೆ. 22ರಂದು ಸಂಸತ್ ಭವನದ ಮುಂಭಾಗ ಎಲ್ಲ ರಾಜ್ಯದ ಬಿಎಸ್‌ಎನ್‌ಎಲ್‌ ಗುತ್ತಿಗೆ ನೌಕರರಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು.

ಕೇಂದ್ರದ ಮೋದಿ ಸರ್ಕಾರ ಖಾಸಗಿ ಕಂಪೆನಿಗಳಿಗೆ ನೀಡುವ ಮಹತ್ವವನ್ನು ಬಿಎಸ್‌ಎನ್‌ಎಲ್‌ ಸಂಸ್ಥೆಗೆ ನೀಡುತ್ತಿಲ್ಲ. ಸಂಸ್ಥೆಯ ಖಾಸಗೀಕರಣಕ್ಕೆ ಪಿತೂರಿ ನಡೆಸುತ್ತಿದೆ. ಬಿಎಸ್‌ಎನ್ಎಲ್‌ ಗೋಪುರಗಳನ್ನು ಖಾಸಗಿ ಕಂಪೆನಿಗಳಿಗೆ ಮಾರುವ ಹುನ್ನಾರ ನಡೆಸುತ್ತಿದೆ ಎಂದು ದೂರಿದರು. ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರದ ವಿರುದ್ಧ ಈಗಾಗಲೇ 2 ಬಾರಿ ಮುಷ್ಕರ ನಡೆಸಲಾಗಿದೆ. ನ್ಯಾಯಯುತವಾದ ಹಕ್ಕು ಪಡೆಯಲು ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ನೌಕರರು ಒಗ್ಗೂಡಬೇಕು ಎಂದು ತಿಳಿಸಿದರು.

ಬಿಎಸ್‌್ಎನ್‌ಎಲ್‌ ಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಕೆ. ಗುಂಡಣ್ಣ ಮಾತನಾಡಿ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುತ್ತಿಗೆ ನೌಕರರ ಸಂಘಟನೆ ಗಟ್ಟಿಯಾಗಿ ನೆಲೆಯೂರಿದೆ. ಇದರಿಂದ ಆ ಜಿಲ್ಲೆಗಳಲ್ಲಿ ನೌಕರರ ಮೇಲಿನ ದೌರ್ಜನ್ಯ ಹಾಗೂ ವೇತನ ತಾರತಮ್ಯ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಬಿಎಸ್‌ಎನ್‌ಎಲ್‌ ಸಂಸ್ಥೆಗೆ ಅಗತ್ಯ ಸಾಮಗ್ರಿ ಸರಬರಾಜು ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹೀಗಾಗಿ, ಗ್ರಾಹಕರಿಗೆ ಸಮರ್ಪಕವಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಸಂಸ್ಥೆ ಹಿಂದೆ ಬೀಳಲು ಕಾರಣವಾಗಿದೆ ಎಂದರು.

ಸಂಸ್ಥೆಯಲ್ಲಿ 2.25 ಲಕ್ಷ ಕಾಯಂ ನೌಕರರು ಹಾಗೂ 1 ಲಕ್ಷ  ಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 65 ಸಾವಿರ ಮೊಬೈಲ್ ಗೋಪುರಗಳಿವೆ. ಈ ಗೋಪುರಗಳಿಂದ ಶೇ  30ರಷ್ಟು ಆದಾಯ ಬರುತ್ತಿದೆ ಎಂದು ತಿಳಿಸಿದರು.

ಖಾಸಗಿ ಕಂಪೆನಿಗಳಿಗೆ ಮೊಬೈಲ್‌ ಗೋಪುರ ಮಾರಾಟ ಮಾಡಿದರೆ ನಮ್ಮ ಗೋಪುರಗಳಿಗೆ ನಾವೇ ಬಾಡಿಗೆ ಮತ್ತು ತೆರಿಗೆ ನೀಡಬೇಕಾಗುತ್ತದೆ. ಇದರಿಂದ ಸಂಸ್ಥೆಯು ಹೆಚ್ಚು ನಷ್ಟ ಅನುಭವಿಸ ಲಿದ್ದು, ಮುಚ್ಚುವ ಸ್ಥಿತಿ ತಲುಪಲಿದೆ. ಇದನ್ನು ತಡೆಯಲು ಅಂಚೆ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ. ನೌಕರರು ಪ್ರಧಾನ ಮಂತ್ರಿ ಅವರಿಗೆ ಈ ಬಗ್ಗೆ ಅಂಚೆ ಪತ್ರದಲ್ಲಿ ಮನವಿ ಸಲ್ಲಿಸಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘದ ಮುಖಂಡ ಜೆ. ಸುರೇಶ್‌, ಸಿಐಟಿಯು ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷ ಎನ್.ಕೆ. ಬಾಲಾಜಿರಾವ್‌, ಸಂಘಟನಾ ಕಾರ್ಯದರ್ಶಿ ಶಬರೀಶ್‌ ಕುಮಾರ್‌, ಜಿಲ್ಲಾ ಕಾರ್ಯದರ್ಶಿ  ಎಂ. ಮಹಾದೇವಪ್ಪ, ಪ್ರಧಾನ ಕಾರ್ಯದರ್ಶಿ ಎನ್‌. ರಾಮಲಿಂಗು, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಸುಜಾತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.