ADVERTISEMENT

ಸ್ವಚ್ಛತೆ ಕಾಪಾಡುವಲ್ಲಿ ಪ್ರಾಧಿಕಾರ ವಿಫಲ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:34 IST
Last Updated 14 ನವೆಂಬರ್ 2017, 5:34 IST

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ವಿಫಲವಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ಇಲ್ಲಿನ ಶೌಚಾಲಯಗಳು ಅವ್ಯವಸ್ಥೆಯ ಆಗರವಾಗಿವೆ. ಶೌಚಾಲಯದಿಂದ ಮಲಿನ ನೀರು ಹರಿದುಬರುತ್ತಿದ್ದು, ಅದನ್ನೇ ತುಳಿದುಕೊಂಡು ದೇವಾಲಯಕ್ಕೆ ತೆರಳಬೇಕಾಗಿದೆ. ಆದ್ದರಿಂದ, ಭಕ್ತರು ಬಸ್‌ ನಿಲ್ದಾಣದ ಪಕ್ಕದಲ್ಲಿರುವ ತೋಟ, ರಸ್ತೆಯ ಬದಿಯಲ್ಲಿ ಮಲ,ಮೂತ್ರ ವಿಸರ್ಜನೆ ಮಾಡುವಂತಾಗಿದೆ ಎಂದು ನಂಜನಗೂಡು ತಾಲ್ಲೂಕಿನ ಹುಲ್ಲಳ್ಳಿ ಗ್ರಾಮದ ಮಹೇಶ್ ಆರೋಪಿಸಿದ್ದಾರೆ.

‘ಪವಿತ್ರ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ದಿನದಿಂದ ದಿನಕ್ಕೆ ತನ್ನ ಪಾವಿತ್ರತೆಯನ್ನು ಕಳೆದುಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಮುಜರಾಯಿ ಇಲಾಖೆಗೊಳಪಟ್ಟಿದ್ದ ದೇವಾಲಯದ ಆಡಳಿತವನ್ನು ಕಳೆದ ಎರಡು ವರ್ಷಗಳಿಂದ ಪ್ರಾಧಿಕಾರ ನೋಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಹೆಚ್ಚು ಆದಾಯ ತರುತ್ತಿರುವ ದೇವಾಲಯಗಳಲ್ಲಿ ಒಂದಾಗಿರುವ ಇದನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಪ್ರಾಧಿಕಾರ ವಿಫಲವಾಗಿದೆ. ಭಕ್ತರಿಗೆ ಸರಿಯಾದ ಕೊಠಡಿಗಳ ವ್ಯವಸ್ಥೆಯನ್ನು ಮಾಡುತ್ತಿಲ್ಲ.

ADVERTISEMENT

ಕೆಲವೊಮ್ಮೆ ಕೊಠಡಿಗಳು ಖಾಲಿ ಇದ್ದರೂ ಖಾಲಿ ಇಲ್ಲ ಎಂದು ಹೇಳುವ ಮೂಲಕ ಖಾಸಗಿ ವಸತಿ ಗೃಹಗಳಿಗೆ ಹೋಗುವಂತೆ ಮಾಡುತ್ತಾರೆ’ ಎಂದು ಮಲೆ ಮಹದೇಶ್ವರ ಬೆಟ್ಟದ ಗ್ರಾಮಸ್ಥರು ದೂರಿದ್ದಾರೆ.

‘ಡಿ’ ಮಾದರಿ ಕೊಠಡಿಯನ್ನು ನೀಡುತ್ತಾರಾದರೂ ಭಕ್ತರೇ ಚಾಪೆ, ರಗ್ಗು, ದಿಂಬುಗಳನ್ನು ಬಾಡಿಪಡೆದುಕೊಳ್ಳಬೇಕು. ಅಲ್ಲದೇ, ಬೆಳಿಗ್ಗಿ 8ರಿಂದ 9 ಗಂಟೆ ವರೆಗೂ ಮಾತ್ರ ನೀರು ಬಿಡುವುದರಿಂದ ಸಕಾಲಕ್ಕೆ ದೇವರ ದರ್ಶನವನ್ನೂ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.