ADVERTISEMENT

‘ಹಳದಿ ಚಿನ್ನ’ಕ್ಕೆ ತೆರಿಗೆ: ವರ್ತಕರಲ್ಲಿ ಗೊಂದಲ

ಹಸಿ ಅರಿಸಿಣಕ್ಕಿಲ್ಲ ಜಿಎಸ್‌ಟಿ; ಉತ್ಪನ್ನಗಳ ದರ ಏರಿಕೆ ನಿರೀಕ್ಷೆ

ಅಮಿತ್ ಎಂ.ಎಸ್.
Published 30 ಜೂನ್ 2017, 4:12 IST
Last Updated 30 ಜೂನ್ 2017, 4:12 IST
‘ಹಳದಿ ಚಿನ್ನ’ಕ್ಕೆ ತೆರಿಗೆ: ವರ್ತಕರಲ್ಲಿ ಗೊಂದಲ
‘ಹಳದಿ ಚಿನ್ನ’ಕ್ಕೆ ತೆರಿಗೆ: ವರ್ತಕರಲ್ಲಿ ಗೊಂದಲ   

ಚಾಮರಾಜನಗರ: ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಅರಿಸಿಣ ಉತ್ಪನ್ನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಉಂಟಾಗಲಿದೆ. ಆದರೆ, ಅದರ ತೀವ್ರತೆ ಎಷ್ಟರಮಟ್ಟಿಗೆ ಇರಬಹುದು ಎನ್ನುವುದರ ಸ್ಪಷ್ಟ ಚಿತ್ರಣ ಜಿಲ್ಲೆಯ ವರ್ತಕರಿಗೆ ಇನ್ನೂ ಸಿಕ್ಕಿಲ್ಲ.

ಮಾರುಕಟ್ಟೆ ವಹಿವಾಟಿನ ಯಾವ ಹಂತದಲ್ಲಿ ತೆರಿಗೆ ಅನ್ವಯವಾಗುತ್ತದೆ. ಅದನ್ನು ಹೇಗೆ ಎದುರಿಸಬಹುದು ಎಂಬುದರ ಕುರಿತು ವರ್ತಕರಲ್ಲಿ ಗೊಂದಲಗಳಿವೆ.

ರಾಜ್ಯದಲ್ಲಿ ಅತಿ ಹೆಚ್ಚು ಅರಿಸಿಣ ಬೆಳೆಯುವ ಜಿಲ್ಲೆ ಯಾಗಿರುವ ಚಾಮರಾಜ ನಗರದಲ್ಲಿ ಉತ್ಪಾದನೆ ಮತ್ತು ಬೆಲೆ ಇಳಿಕೆಯಿಂದ ರೈತರು ಕಂಗೆಟ್ಟಿದ್ದಾರೆ. ಜಿಎಸ್‌ಟಿ ಯಿಂದ ಅರಿಸಿಣ ಆಧಾರಿತ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾಸವಾದರೂ, ಅದರ ಲಾಭ ತಮಗೆ ದೊರಕುತ್ತದೆ ಎಂಬ ನಿರೀಕ್ಷೆ ಇಲ್ಲಿನ ರೈತರಲ್ಲಿ ಇಲ್ಲ.

ADVERTISEMENT

ಸಂಸ್ಕರಿಸದ ತಾಜಾ ಅರಿಸಿಣದ ಮೇಲೆ ಯಾವುದೇ ತೆರಿಗೆ ಅನ್ವಯ ವಾಗುವುದಿಲ್ಲ. ಜಿಎಸ್‌ಟಿಯಲ್ಲಿ ಅದಕ್ಕೆ ವಿನಾಯಿತಿ ನೀಡಲಾಗಿದೆ. ಅಡುಗೆ, ಬಣ್ಣ, ಔಷಧ ಮುಂತಾದವುಗಳಿಗೆ ಬಳಕೆಯಾಗುವ ಒಣ ಮತ್ತು ಪುಡಿ ಅರಿಸಿಣಗಳ ಮೇಲೆ ಶೇ 5ರಷ್ಟು ತೆರಿಗೆ ನಿಗದಿ ಮಾಡಲಾಗಿದೆ.

ಆರೋಗ್ಯ ಉತ್ಪನ್ನವಾಗಿರುವ ಅರಿಸಿಣ ತೈಲದ ಮೇಲೆ ಶೇ 18ರ ತೆರಿಗೆ ಹಾಕಲಾಗಿದೆ. ಸೌಂದರ್ಯವರ್ಧಕ ಸಾಧನವಾಗಿ ಬಳಕೆಯಾಗುವ ಅರಿಸಿಣ ಉತ್ಪನ್ನಗಳ ಬೆಲೆ ದುಬಾರಿಯಾಗಲಿದೆ. ಈ ಮುಂಚೆ ಇವುಗಳ ಮೇಲೆ ಶೇ 12.5ರಷ್ಟು ವ್ಯಾಟ್‌ ಮತ್ತು ಸುಂಕ ಹೇರಲಾಗಿತ್ತು. ಹೊಸ ವ್ಯವಸ್ಥೆಯಲ್ಲಿ ಸೌಂದರ್ಯ ಉತ್ಪನ್ನಗಳ ಮೇಲಿನ ತೆರಿಗೆ ಶೇ 28ಕ್ಕೆ ಏರಿಕೆಯಾಗಿದೆ.

‘ಅಡುಗೆಗೆ ಬಳಕೆಯಾಗುವ ಅರಿಸಿಣ ಪುಡಿ ಉತ್ಪನ್ನದ ಬೆಲೆಯಲ್ಲಿ ದೊಡ್ಡ ವ್ಯತ್ಯಾಸವಾಗಲಾರದು’ ಎನ್ನುತ್ತಾರೆ ಕೊಳ್ಳೇಗಾಲದ ಸಪ್ತಗಿರಿ ಇಂಡಸ್ಟ್ರೀಸ್‌ನ ಅಶೋಕ್‌ ಒಲೆಟಿ.

‘ಅರಿಸಿಣದ ಮೇಲೆ ಯಾವ ಹಂತದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂಬುದರ ಮಾಹಿತಿ ಇಲ್ಲ. ಹೀಗಾಗಿ ದರ ಏರಿಳಿತದ ಕುರಿತು ಅಂದಾಜು ಸಿಗುತ್ತಿಲ್ಲ. ಒಂದು ವೇಳೆ ಬೆಲೆ ಏರಿಕೆಯಾದರೂ ಗ್ರಾಹ ಕರ ಮೇಲೆ ಹೆಚ್ಚಿನ ಹೊರೆಯಾಗು ವುದಿಲ್ಲ’ ಎಂದು ಅವರು ತಿಳಿಸಿದರು.

‘ಈ ತೆರಿಗೆ ವ್ಯವಸ್ಥೆ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದರಿಂದ ಸಮಸ್ಯೆ ಉಂಟಾಗಬಹುದು ಎಂಬ ಆತಂಕವೂ ಇಲ್ಲ. ಪ್ರಯೋಜನದ ನಿರೀಕ್ಷೆಯೂ ಇಲ್ಲ’ ಎನ್ನುತ್ತಾರೆ ರೈತ ಮುಖಂಡ ಜಗದೀಶನ್‌.

ಹೊಸ ತೆರಿಗೆ ವ್ಯವಸ್ಥೆಯಿಂದ ಅರಿಸಿಣ ದರ ಕ್ವಿಂಟಲ್‌ಗೆ ₹300 ರಿಂದ 400ರಷ್ಟು ಕಡಿಮೆಯಾಗಬಹುದು ಎಂದು ಅಭಿಪ್ರಾಯಪಡುತ್ತಾರೆ ಎಪಿ ಎಂಸಿ ಅಧಿಕಾರಿ ಮಧುಕುಮಾರ್.

ಜಿಎಸ್‌ಟಿಯ ನಿಯಮ ಮತ್ತು ಪರಿಣಾಮಗಳು ಅರ್ಥವಾಗಲು ಅದು ಜಾರಿಯಾಗಿ ಕನಿಷ್ಠ ಮೂರು ತಿಂಗಳಾ ದರೂ ಬೇಕಾಗುತ್ತದೆ. ಅದರಿಂದ ನಕಲಿ ಬಿಲ್ಲಿಂಗ್ ಹಾವಳಿಗೆ ತಡೆಬಿದ್ದು, ಪಾರ ದರ್ಶಕತೆ ಬರುತ್ತದೆ ಎನ್ನುವುದೊಂದೇ ಸ್ಪಷ್ಟವಾಗಿರುವ ಅಂಶ ಎಂದು ಅವರು ತಿಳಿಸಿದರು.

ಬರಗಾಲದಿಂದ ಅರಿಸಿಣ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅರಿಸಿಣ ಬೆಳೆ ಪ್ರಮಾಣ ಹೆಚ್ಚಾಗಿದ್ದು, ಬೆಲೆ ಇಳಿಕೆಯಾಗಿದೆ. ಕ್ವಿಂಟಲ್‌ಗೆ ₹5,500 ರಿಂದ ₹6,000 ದರದಲ್ಲಿ ಅಲ್ಲಿ ಖರೀದಿ ನಡೆಯುತ್ತಿವೆ.

ಹೀಗಾಗಿ, ಇಲ್ಲಿನ ಬೆಲೆಯೂ ಅದೇ ಮಟ್ಟಕ್ಕೆ ಇಳಿದಿದೆ. ಕರ್ನಾಟಕದ ವಿವಿಧ ಭಾಗದ ಕಂಪೆನಿಗಳು ಆ ರಾಜ್ಯಗಳಿಂದಲೇ ಅರಿಸಿಣ ಖರೀದಿಗೆ ಮುಂದಾಗುತ್ತಿರುವು ದರಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅರಿಸಿಣ ಮಾರಾಟ ವಾಗುತ್ತಿಲ್ಲ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

**

ಲಾಭದ ಸಾಧ್ಯತೆ ಕಡಿಮೆ
‘ಅರಿಸಿಣದ ಮೇಲಿನ ತೆರಿಗೆಯಿಂದ ರೈತರಿಗೆ ಲಾಭ ಆಗುವ ಸಾಧ್ಯತೆ ಕಡಿಮೆ. ಉತ್ಪನ್ನಗಳ ಮೇಲೆ ಹೊರೆ ಬೀಳುತ್ತದೆ. ಅದು ಸಹಜವಾಗಿ ಗ್ರಾಹಕರ ಮೇಲೆ ವರ್ಗಾವಣೆಯಾಗುತ್ತದೆ’ ಎಂದು ಎಪಿಎಂಸಿ ಅಧಿಕಾರಿ ಮಧುಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.