ADVERTISEMENT

ಹುಲಿ ದಾಳಿ: ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 6:52 IST
Last Updated 17 ಮಾರ್ಚ್ 2018, 6:52 IST
ಹುಲಿ ದಾಳಿಗೆ ಬಲಿಯಾದ ಹಸು
ಹುಲಿ ದಾಳಿಗೆ ಬಲಿಯಾದ ಹಸು   

ಗೋಣಿಕೊಪ್ಪಲು: ಬಾಳೆಲೆ ಸಮೀಪದ ಕೊಟ್ಟಗೇರಿಯಲ್ಲಿ ಗುರುವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿದ ಹುಲಿ ಹಸುವೊಂದನ್ನು ಕೊಂದು ಹಾಕಿದೆ.

ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯ ಅವರಿಗೆ ಸೇರಿದ ಕೊಟ್ಟಿಗೆಗೆ ರಾತ್ರಿ 8ರ ವೇಳೆಗೆ ನುಗ್ಗಿದ ಹುಲಿ ಕಟ್ಟಿ ಹಾಕಿದ್ದ ಹಸುವನ್ನು ಕೊಂದು ಹಾಕಿದೆ. ಬಳಿಕ ಗೂಟ ಸಮೇತ ಕಿತ್ತು ಸುಮಾರು 300 ಮೀಟರ್ ದೂರಕ್ಕೆ ಎಳೆದೊಯ್ದು ಹಸುವಿನ ಹಿಂಭಾಗವನ್ನು ತಿಂದು ಹಾಕಿದೆ.

ಮುದ್ದಯ್ಯನವರು ರಾತ್ರಿಯೇ ಹಸುವನ್ನು ಹುಡುಕಾಡಿದರೂ ಕತ್ತಲೆಯಲ್ಲಿ ಕಾಣಿಸಲಿಲ್ಲ. ಶುಕ್ರವಾರ ಬೆಳಿಗ್ಗೆ ಮತ್ತೆ ಹುಡುಕಿದಾಗ ಮನೆಯಿಂದ 100 ಮೀಟರ್ ದೂರದ ತೋಟದಲ್ಲಿಯೇ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಇಟ್ಟಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹುಲಿ ದಾಳಿ ಮಾಡಿರುವುದು ದಾಖಲಾಗಿದೆ.

ADVERTISEMENT

ಬೆಳಿಗ್ಗೆ ಕಲ್ಲಳ್ಳ ಆರ್‌ಎಫ್‌ಒ ಶಿವರಾಂ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಟ್ಟಗೇರಿ ಗ್ರಾಮ ಪೊನ್ನಂಪೇಟೆ ವಲಯದ ವ್ಯಾಪ್ತಿಗೆ ಬರಲಿದೆ. ವಿಷಯ ತಿಳಿಸಿದರೂ ಯಾವುದೇ ಒಬ್ಬ ಅಧಿಕಾರಿಯೂ ಇತ್ತ ಸುಳಿದು ನೋಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ತಿತಿಮತಿ ಎಸಿಎಫ್ ಶ್ರೀಪತಿಯವರಿಗೆ ತಿಳಿಸಿದರೆ ಅವರು, ‘ಹುಲಿ ಓಡಾಡುವ ಸ್ಥಳದಲ್ಲಿ ಬೋನು ಹೊತ್ತು ತಿರುಗಾಡಲು ಸಾಧ್ಯವೇ’ ಎಂದು ಉದಾಸೀನದಿಂದ ಮಾತನಾಡುತ್ತಾರೆ ಎಂದು ಹಸುವಿನ ಮಾಲಿಕರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.