ADVERTISEMENT

ಹೆಚ್ಚಿದ ಸೈನಿಕ ಹುಳುಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:39 IST
Last Updated 14 ನವೆಂಬರ್ 2017, 5:39 IST
ಚಾಮರಾಜನಗರದ ವೀರನಪುರ ಗ್ರಾಮದಲ್ಲಿನ ಹೊಲವೊಂದರಲ್ಲಿ ಭಾನುವಾರ ಸೈನಿಕ ಹುಳು ನಿಯಂತ್ರಣದ ಬಗ್ಗೆ ಕೃಷಿ ಇಲಾಖೆ ಉಪನಿರ್ದೇಶಕ ಜಿ.ಎಚ್‌. ಯೋಗೇಶ್‌ ರೈತರಿಗೆ ಸಲಹೆ ನೀಡಿದರು
ಚಾಮರಾಜನಗರದ ವೀರನಪುರ ಗ್ರಾಮದಲ್ಲಿನ ಹೊಲವೊಂದರಲ್ಲಿ ಭಾನುವಾರ ಸೈನಿಕ ಹುಳು ನಿಯಂತ್ರಣದ ಬಗ್ಗೆ ಕೃಷಿ ಇಲಾಖೆ ಉಪನಿರ್ದೇಶಕ ಜಿ.ಎಚ್‌. ಯೋಗೇಶ್‌ ರೈತರಿಗೆ ಸಲಹೆ ನೀಡಿದರು   

ಚಾಮರಾಜನಗರ: ಜಿಲ್ಲೆಯ ವಿವಿಧ ಜಮೀನುಗಳಲ್ಲಿ ಕಾಣಿಸಿಕೊಂಡಿರುವ ಸೈನಿಕ ಹುಳುವಿನ ನಿಯಂತ್ರಣಕ್ಕೆ ಕೃಷಿ ಇಲಾಖೆ ಮುಂದಾಗಿದೆ. ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಸೈನಿಕ ಹುಳುಗಳು ಈಗ ಯಳಂದೂರು, ಸಂತೇಮರಹಳ್ಳಿ, ಕೊಳ್ಳೇಗಾಲ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭತ್ತ, ರಾಗಿ, ಕಡಲೆ ಮತ್ತು ಮುಸುಕಿನ ಜೋಳದ ಹೊಲಗಳಿಗೆ ದಾಳಿ ಇಟ್ಟಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಸಂತೇಮರಹಳ್ಳಿ ಭಾಗದಲ್ಲಿ ಮುಸು ಕಿನ ಜೋಳದ ಬೆಳೆಯಲ್ಲಿ ಆರಂಭದಲ್ಲಿ ಕಾಣಿಸಿಕೊಂಡ ಸೈನಿಕ ಹುಳುಗಳು, ಯಳಂದೂರು, ಕೊಳ್ಳೇಗಾಲದ ಪಾಳ್ಯ ಹೋಬಳಿ ಭಾಗಗಳಲ್ಲಿ ಹೆಚ್ಚಾಗಿ ವ್ಯಾಪಿಸಿವೆ. ಈ ಬಾರಿ ಮಳೆ ಚೆನ್ನಾಗಿ ಆಗಿದ್ದರಿಂದ ಈ ಭಾಗಗಳಲ್ಲಿ ಜೋಳ ಮತ್ತು ಭತ್ತದ ಫಸಲು ಉತ್ತಮವಾಗಿ ಬಂದಿತ್ತು. ಬೆಳೆ ಕೈಗೆ ಬರುವ ಹೊತ್ತಲ್ಲೇ ಹುಳುಗಳ ಹಾವಳಿ ಎದುರಾಗಿದೆ.

ಹಸಿರು ಹುಳುಗಳು ತೆನೆಯೊಳಗೆ ಸೇರಿಕೊಂಡು ಅದನ್ನು ತಿಂದು ಹಾಕಿದರೆ, ಕಡು ಕಂದು ಬಣ್ಣದ ಹುಳುಗಳು ಬೆಳೆಯ ಎಲೆಯನ್ನು ತಿಂದು ತೆನೆಯನ್ನು ಕತ್ತರಿಸಿ ಹಾಕುತ್ತಿವೆ. ಇದರಿಂದ ಅಪಾರ ಫಸಲು ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ADVERTISEMENT

ರೈತರಲ್ಲಿ ಜಾಗೃತಿ ಮತ್ತು ಔಷಧ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಎರಡು ದಿನಗಳಿಂದ ಹಳ್ಳಿಗಳಿಗೆ ತೆರಳಿ ಮಾಹಿತಿ, ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡುತ್ತಿದೆ. ಕರಪತ್ರಗಳನ್ನು ಹಂಚುವ ಜತೆಗೆ ಸೋಮವಾರದಿಂದ ಆಟೊದಲ್ಲಿ ಪ್ರಚಾರವನ್ನೂ ಆರಂಭಿಸಿದೆ.

ಸಾವಿರಾರು ಮೊಟ್ಟೆ: ಪತಂಗಗಳ ರೂಪದಲ್ಲಿ ಹಾರಿ ಬರುವ ಈ ಹುಳುಗಳು ಬೆಳೆಗಳ ನಡುವೆ ಮೊಟ್ಟೆಗಳನ್ನು ಇರಿಸುತ್ತವೆ. ಒಂದು ಪತಂಗ 800–1000 ಮೊಟ್ಟೆ ಇರಿಸಬಲ್ಲದು. 12–15 ದಿನಗಳಲ್ಲಿ ಅವು ಕೋಶಾವಸ್ಥೆಗೆ ತಲುಪುತ್ತವೆ. 5–7 ದಿನಗಳಲ್ಲಿ ಪತಂಗಗಳು ಹೊರಬರುತ್ತವೆ.

ಜಮೀನಿನ ಬದಿ ಸಣ್ಣನೆ ಬೆಂಕಿ ಹಾಕಿ ಈ ಪತಂಗಗಳನ್ನು ಆಕರ್ಷಿಸಿ ಸಾಯಿಸಬಹುದು. ಒಂದು ಪತಂಗ ಸಾಯುವುದರಿಂದ ಸಾವಿರ ಹುಳುಗಳ ಸೃಷ್ಟಿಯನ್ನು ತಡೆಯಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.