ADVERTISEMENT

‘ಬಾಲ್ಯವಿವಾಹ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 9:04 IST
Last Updated 16 ಸೆಪ್ಟೆಂಬರ್ 2014, 9:04 IST

ಚಾಮರಾಜನಗರ: ‘ಜಿಲ್ಲಾ ವ್ಯಾಪಿ ಬಾಲ್ಯವಿವಾಹ ಪ್ರಕರಣಗಳನ್ನು ತಡೆಯಲು ಅಧಿಕಾರಿಗಳು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ನಡೆಯುತ್ತಿವೆ. ಇದರಲ್ಲಿ ಉಪ್ಪಾರ ಸಮುದಾಯದಲ್ಲಿ ಹೆಚ್ಚು ಪ್ರಕರಣವಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಇದರ ಮಾಹಿತಿ ಪಡೆದು ಪರಿಶೀಲಿಸಲು  ನಗರಕ್ಕೆ ಭೇಟಿ ನೀಡಿದ್ದೇನೆ. ಬಾಲ್ಯವಿವಾಹ ಘಟನೆಗಳು ನಡೆದ ಬಳಿಕ ಪತ್ತೆ ಮಾಡುವುದಕ್ಕಿಂತ ಪ್ರಕರಣ ನಡೆಯದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೂಢನಂಬಿಕೆ: ಸಂಪ್ರದಾಯ, ಮೂಢನಂಬಿಕೆಗಳನ್ನು ಮಹಿಳೆಯರ ಮೇಲೆ ಬಲವಂತವಾಗಿ ಹೇರುವ ಮೂಲಕ ಸಂಕಷ್ಟಕ್ಕೆ ದೂಡಲಾಗುತ್ತಿದೆ,  ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿಗೆ  ವಿವಾಹ ಮಾಡುವ ಪರಿಸ್ಥಿತಿ ಹೋಗಲಾಡಿಸಬೇಕು. ಈ ಕುರಿತು ಅರಿವು ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಾಕಿ ಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಲು ಮುಂದಾಗುವುದರಿಂದ ಉಂಟಾಗಬಹುದಾದ ದುಷ್ಪರಿಣಾಮ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಪೋಷಕರ ಮನ ಪರಿವರ್ತಿಸಲು ಪ್ರಯತ್ನಿಸಬೇಕು ಎಂದರು.

ಮಹಿಳೆಯುರು ಸ್ಥಳೀಯವಾಗಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರಿಯುವ ಕೆಲಸ ನಡೆಯಬೇಕಿದೆ. ಸಮಸ್ಯೆಗಳ ಮೂಲ ಹುಡುಕಿ ಪರಿಹರಿಸಲು ಸ್ಥಳೀಯ ಆಡಳಿತ ವರ್ಗ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಳ್ಳಬೇಕು, ಸಂಸ್ಥೆಗಳ ವಿಶ್ವಾಸಗಳಿಸಿ ನೆರವು ಪಡೆಯಬೇಕು. ಮುಂದಿನ ದಿನಗಳಲ್ಲಿ ಆಯೋಜಿಸುವ ಸಭೆಗಳಲ್ಲಿ ಸೇವಾ ಸಂಘಟನೆಗಳ ಪ್ರತಿನಿಧಿಗಳನ್ನೂ ಹೆಚ್ಚು ಸಂಖ್ಯೆಯಲ್ಲಿ ಆಹ್ವಾನಿಸಬೇಕು ಎಂದು ಸೂಚಿಸಿದರು.

ಸಹಾಯ ವಾಣಿ: ಶಾಲಾ– ಕಾಲೇಜು, ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಚೇರಿಗಳ ವ್ಯಾಪ್ತಿಯಲ್ಲಿ ಸಹಾಯ ವಾಣಿ ಆರಂಭಿಸಬೇಕು ಎಂಬ ನಿರ್ದೇಶನವಿದೆ. ಆದರೆ ಎಲ್ಲೆಡೆ ಇದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ ಎಂದು ವಿಷಾದಿಸಿದರು.

ಆಯೋಗದ ಅಧ್ಯಕ್ಷರು  ಶಿಕ್ಷಣ ಇಲಾಖೆ, ಪೊಲೀಸ್ ಅಧಿಕಾರಿಗಳು ಈ ದಿಸೆಯಲ್ಲಿ ವಿಶೇಷ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂದರು.
ಮಹಿಳೆಯರ ಅಹವಾಲು ಸಂಕಷ್ಟಕ್ಕೆ ನೆರವಾಗಿ ಪರಿಹಾರ ಒದಗಿಸಲು ಸ್ಥಾಪಿಸಲಾಗಿರುವ ತಾಲ್ಲೂಕು ಸಾಂತ್ವನ ಕೇಂದ್ರಗಳು ಕೆಲವೆಡೆ ವಾಣಿಜ್ಯಿಕರಣವಾಗುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಜಿಲ್ಲೆಯ ಸಾಂತ್ವನ ಕೇಂದ್ರಗಳು ಈ ಬಗೆಯ ಆಪಾದನೆಗಳಿಗೆ ಅವಕಾಶವಾಗದಂತೆ ನಿರ್ವಹಣೆಯಾಗಬೇಕು. ಸಮಸ್ಯೆಗಳನ್ನು ಕೇಳಿ ಅರ್ಹ ಪ್ರಕರಣಗಳನ್ನು ಮುಂದಿನ ಕ್ರಮಕ್ಕೆ ಶಿಫಾರಸು ಮಾಡಬೇಕು. ಸಾಂತ್ವನ ಕೇಂದ್ರದ ಪ್ರಯೋಜನಗಳನ್ನು ತಿಳಿಯಪಡಿಸುವ ಪ್ರಚಾರ ಕಾರ್ಯಕ್ರಮ ವ್ಯಾಪಕವಾಗಿ ನಡೆಯಬೇಕು. ಕರಪತ್ರ, ಭಿತ್ತಿಪತ್ರಗಳ ಮೂಲಕ ಜನರನ್ನು ತಲುಪಬೇಕು ಎಂದು ಮಂಜುಳಾ ಮಾನಸ ಹೇಳಿದರು.

ದೌರ್ಜನ್ಯ ಪ್ರಕರಣ ಇತ್ಯರ್ಥಕ್ಕೆ ಲೋಕ ಅದಾಲತ್: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರು ಸ್ವೀಕರಿಸಿ ಇತ್ಯರ್ಥ ಪಡಿಸುವ ಸಲುವಾಗಿ ಎರಡು ಜಿಲ್ಲೆಯನ್ನು ಸೇರಿಸಿ ಒಂದೆಡೆ ಲೋಕ ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಸಂತ್ರಸ್ತರಿಗೆ ರಾಜಧಾನಿಗೆ ಬಂದು ಹೋಗುವ ಸಮಯ, ಖರ್ಚು ಉಳಿತಾಯವಾಗಲಿದೆ ಎಂದರು. ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಗಸ್ವಾಮಿ ನಾಯಕ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಚ್.ಕೆ. ಭಾಸ್ಕರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಚಂದ್ರಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಜಯರಾಂ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಪತ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಚಂದ್ರೇಗೌಡ ಹಾಜರಿದ್ದರು.

ಅನುಪಾತ ಸರಿ ಇದೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಂಡುವಿಜಯನ್ ಮಾತನಾಡಿ, ‘ಅಂದಾಜು 1000ಕ್ಕೆ  953ರಂತೆ ಗಂಡುಹೆಣ್ಣಿನ ಅನುಪಾತವಿದೆ. ಜಿಲ್ಲೆಯಲ್ಲಿ 18 ಸ್ಕ್ಯಾನಿಂಗ್ ಸೆಂಟರ್‌ಗಳಿವೆ. ಸರಿಯಾದ ಸಮಯಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.