ADVERTISEMENT

‘ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 9:02 IST
Last Updated 16 ಸೆಪ್ಟೆಂಬರ್ 2014, 9:02 IST

ಚಾಮರಾಜನಗರ: ‘ಹೆಣ್ಣು ಮಕ್ಕಳ ಮನಸ್ಸನ್ನು ಕುಗ್ಗಿಸುವಂತ ಬಾಲ್ಯ ವಿವಾಹ ಪದ್ಧತಿ ಒಂದು ಕೆಟ್ಟ ಪರಂಪರೆ’ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅಭಿಪ್ರಾಯಪಟ್ಟರು.

ನಗರದ ಜೆಎಸ್ಎಸ್ ಪದವಿ ಮತ್ತು ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ, ಕ್ರೀಡಾ ವೇದಿಕೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಪರವಾಗಿ ಸರ್ಕಾರ ಕಾನೂನು ಜಾರಿಗೊಳಿಸಿದೆ. ಆದರೆ, ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯ ಕೆಲವೆಡೆ ಇಂದಿಗೂ ನಡೆಯುತ್ತಿದೆ ಎಂದು ವಿಷಾದಿಸಿದರು.

ಸರ್ಕಾರ ಮಹಿಳೆಯರಿಗಾಗಿ ರೂಪಿಸಿರುವ ಕಾನೂನು ಇಂದು ಕೆಲವೆಡೆ ಮಹಿಳೆಯರಿಂದಲೇ ದುರುಪಯೋಗವಾಗುತ್ತಿದೆ. ಮಹಿಳೆಯರಿಗಾಗಿ ಸೃಷ್ಟಿಸಿರುವ ಪೂರಕ ವಾತಾವರಣ ದುರ್ಬಳಕೆಯಾಗುತ್ತಿದೆ ಎಂದ ಅವರು, ಮಹಿಳೆ ಪರಿಪೂರ್ಣತೆಯಿಂದ ಬೆಳೆದರೆ ದುಷ್ಟ ಸಮಾಜಕ್ಕೆ ಪಾಠ ಕಲಿಸಬಹುದು ಎಂದು ಹೇಳಿದರು.

ಜನಸಂಖ್ಯಾ ಸ್ಫೋಟದ ಪರಿಣಾಮ ಮಹಿಳೆಯರ ಸಮಸ್ಯೆ ಜಾಗತಿಕ ಸಮಸ್ಯೆಯಾಗಿ ಬೆಳೆಯುತ್ತಿದೆ. ನಮ್ಮ ಹಕ್ಕನ್ನು ಹೋರಾಟದ ಮೂಲಕ ಪಡೆಯುವುದು ನಮ್ಮ ಸಂಸ್ಕೃತಿ ಅಲ್ಲ. ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಪಡೆದುಕೊಳ್ಳಬೇಕು ಎಂದು ಹೇಳಿದರು.

ಚಿಕ್ಕ ಪುಟ್ಟ ಕಾರಣಗಳಿಗೆ ಇಂದು ವಿವಾಹ ವಿಚ್ಛೇದನ ಪ್ರಕರಣಗಳು ಸೃಷ್ಟಿಯಾಗುತ್ತಿವೆ. ಸಂಬಂಧ ಬೆಸೆಯುವ ಪಾತ್ರದಲ್ಲಿ ಬೆಸುಗೆ ಇರಬೇಕು ಆಗ ಮಾತ್ರ ಸಂಬಂಧ ಗಟ್ಟಿಯಾಗುತ್ತದೆ. ಗಂಡ– ಹೆಂಡತಿ ಯಾರೊಬ್ಬರಲ್ಲೂ ಯಾವುದೇ ಧೋರಣೆ ಇರಬಾರದು ಎಂದು ಹೇಳಿದರು.

ಮಕ್ಕಳನ್ನು ಪೋಷಕರೊಟ್ಟಿಗೆ ಇರಿಸಿ ಶಿಕ್ಷಣ ನೀಡಬೇಕು ಇದರಿಂದ ಮಕ್ಕಳಿಗೆ ಸಂಬಂಧಗಳ ಪರಿಚಯ ಆಗುತ್ತದೆ. ಸುಸಂಸ್ಕೃತರಾಗಿ ಬೆಳೆಯುತ್ತಾರೆ. ಇಲ್ಲವಾದರೆ ಮಕ್ಕಳ ಮನಸ್ಸು ಕುಗ್ಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ  ಡಿ.ಸಿ. ನಾಗೇಂದ್ರ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ. ಪುಷ್ಪಾವತಿ, ಉಪ ಪ್ರಾಂಶುಪಾಲ ಎ.ಜಿ. ಶಿವಕುಮಾರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮಹಾಲಿಂಗಪ್ಪ, ಸಿ.ಎಚ್. ಶಿವಣ್ಣ, ಎಸ್. ನಾಗೇಂದ್ರ, ಎಂ. ದೇವಿಕಾ, ಎಸ್. ಶಿಲ್ಪಾ, ವಿ. ಐಶ್ವರ್ಯಾ, ಮಹಾಲಕ್ಷ್ಮೀ,  ಎಸ್‌. ಉಮೇಶ್‌, ಜೆ. ರವಿಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.