ADVERTISEMENT

15ರಂದು ಪೌರ ಕಾರ್ಮಿಕರೊಂದಿಗೆ ಮಠಾಧೀಶರ ಸಹಪಂಕ್ತಿ ಭೋಜನ

​ಪ್ರಜಾವಾಣಿ ವಾರ್ತೆ
Published 13 ಮೇ 2017, 11:10 IST
Last Updated 13 ಮೇ 2017, 11:10 IST

ಚಾಮರಾಜನಗರ: ‘ಅಸ್ಪೃಶ್ಯತೆ ನಿರ್ಮೂಲನೆ ಉದ್ದೇಶದಿಂದ ಮೇ 15ರಂದು ಪೌರ ಕಾರ್ಮಿಕರೊಂದಿಗೆ ಸಹಪಂಕ್ತಿ ಭೋಜನ ಹಮ್ಮಿಕೊಳ್ಳಲಾಗಿದೆ’ ಎಂದು ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

‘ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಪೌರ ಕಾರ್ಮಿಕರ ಬಡಾವಣೆಯಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆಯಿಂದ ಸಹಪಂಕ್ತಿ ಭೋಜನ ಹಾಗೂ ಅಸ್ಪಶ್ಯತೆ ಮುಕ್ತ ಸಮಾಜ ಚಿಂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮನುಷ್ಯರೆಲ್ಲ ಒಂದೇ ಎಂದು ಸಾರಿದ ಮಹನೀಯರ ತತ್ವವನ್ನು ಆಚರಿಸುವುದೇ ಅವರ ನಿಜವಾದ ಜಯಂತಿ. ಈ ನಿಟ್ಟಿನಲ್ಲಿ ಸಹಪಂಕ್ತಿ ಭೋಜನ ನಡೆಸುತ್ತಿದ್ದೇವೆ. ರಾಜ್ಯದ ಹಲವು ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಮಠಾಧೀಶರು, ಸಾಹಿತಿಗಳು, ಚಿಂತಕರು ಸೇರಿದಂತೆ ಎಲ್ಲ ಸಮುದಾಯದ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ಹಿಂದೂ ಮತದ ವಕ್ತಾರರಂತೆ ಬಿಂಬಿಸಿಕೊಳ್ಳುತ್ತಿರುವ ಸ್ವಾಮೀಜಿಗಳು, ಮಠಾಧಿಪತಿಗಳು ಇಂತಹ ಕೆಲಸವನ್ನು ಹೆಚ್ಚಾಗಿ ಮಾಡಬೇಕಿದೆ. ಅಸ್ಪೃಶ್ಯತೆ ತಿರಸ್ಕರಿಸಿ ಸ್ನೇಹ, ಸೌಹಾರ್ದ ಹಾಗೂ ಸಮಾನತೆಯ ಸಂದೇಶವನ್ನು ಹಂಚಿಕೊಳ್ಳಬೇಕು’ ಎಂದು ತಿಳಿಸಿದರು.

‘ಅಂದು ಬೆಳಿಗ್ಗೆ 10.30ಕ್ಕೆ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಸಂಸದ ಆರ್‌. ಧ್ರುವನಾರಾಯಣ, ಶಾಸಕ ಸಿ. ಪುಟ್ಟರಂಗಶೆಟ್ಟಿ, ವೀರಭದ್ರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಡಾ. ಸಾಗರ ಶಿವಚಾರ್ಯ ಸ್ವಾಮೀಜಿ, ಬಸವರಾಜ ಭಟ್ಟಾಧರ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಸಾಹಿತಿಗಳಾದ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಕೃಷ್ಣಮೂರ್ತಿ ಹನೂರು, ಡಾ.ನರೇಂದ್ರಕುಮಾರ್, ವೆಂಕಟೇಶ್‌ ಇಂದುವಾಡಿ ಮತ್ತು ಡಾ. ಮಹೇಶ್‌ಚಂದ್ರಗುರು ಚಿಂತನ ಕಾರ್ಯಕ್ರಮ ನಡೆಸಿಕೊಡುವರು. ಬಳಿಕ, ಸಹ ಪಂಕ್ತಿ ಭೋಜನ ನಡೆಯಲಿದೆ’ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆಯ ಮಹದೇವ ಸ್ವಾಮೀಜಿ, ಸಿದ್ದರಾಜು ಸ್ವಾಮೀಜಿ, ಬಸವಲಿಂಗಮೂರ್ತಿ ಸ್ವಾಮೀಜಿ, ಮುಖಂಡ ಸಿ.ಎಂ. ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.