ADVERTISEMENT

20 ಸಾವಿರ ಹುದ್ದೆ ಖಾಲಿ

ಪಿಎಸ್ಐ, ಎಎಸ್ಐಗೆ ತರಬೇತಿ: ಲಾಲ್‌ ರುಕುಮ್‌ ಪಚಾವೋ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2014, 9:08 IST
Last Updated 23 ಆಗಸ್ಟ್ 2014, 9:08 IST

ಚಾಮರಾಜನಗರ: ‘ರಾಜ್ಯದಲ್ಲಿ ಕೆಎಸ್‌ಆರ್‌ಪಿ, ಡಿಎಆರ್‌, ನಾಗರಿಕ ಪೊಲೀಸ್‌ ಹುದ್ದೆಗಳು ಸೇರಿದಂತೆ ಇಲಾಖೆಯಲ್ಲಿ ಸುಮಾರು 20 ಸಾವಿರ  ಸಿಬ್ಬಂದಿಯ ಕೊರತೆಯಿದ್ದು, ಹಂತ ಹಂತವಾಗಿ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌ ರುಕುಮ್ ಪಚಾವೋ ಹೇಳಿದರು.

ಜಿಲ್ಲಾ ಕೇಂದ್ರಕ್ಕೆ ಶುಕ್ರವಾರ ಅಧಿಕೃತವಾಗಿ ಭೇಟಿ ನೀಡಿದ್ದ ಅವರು, ಪೊಲೀಸ್‌ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
94 ಸಾವಿರ ಪೊಲೀಸ್‌ ಹುದ್ದೆಗಳು ಮಂಜೂರಾಗಿವೆ. ಪ್ರಸ್ತುತ ಎಲ್ಲ ಜಿಲ್ಲೆಗಳು ಹಾಗೂ ಬೆಂಗಳೂರು ನಗರದಲ್ಲಿ ಖಾಲಿ ಇರುವ ನಾಗರಿಕ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಖಾಲಿ ಇರುವ ಹುದ್ದೆಗಳಲ್ಲಿ ಶೇ 20ರಷ್ಟು ನಾಗರಿಕ ಪೊಲೀಸ್‌ ಹುದ್ದೆಗಳು ಖಾಲಿ ಇವೆ. ಈ ಪೈಕಿ ಶೇ 7ರಷ್ಟು ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ನೇಮಕಾತಿಯಲ್ಲಿ ಹೈದರಾಬಾದ್‌– ಕರ್ನಾಟಕಕ್ಕೆ ನೀಡಿರುವ ಮೀಸಲಾತಿ  ನಿಯಮಾವಳಿಯನ್ನು ಪಾಲಿಸಲಾಗಿದೆ. ಸುಮಾರು 600 ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಗಳು ಖಾಲಿಯಿದ್ದು, ಇವುಗಳ ಭರ್ತಿಗೂ ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದ ಬಳಿಕ ಐಪಿಸಿ 376 ಕಲಂಗೆ (ಅತ್ಯಾಚಾರ) ತಿದ್ದುಪಡಿ ತರಲಾಗಿದೆ. ಆದರೆ, ಬಹಳಷ್ಟು ಪೊಲೀಸ್‌ ಠಾಣೆಯ ಸಿಬ್ಬಂದಿಗೆ ಈ ಕುರಿತು ಮಾಹಿತಿ ಇಲ್ಲ. ಹೀಗಾಗಿ, ತಿದ್ದುಪಡಿ ಅನ್ವಯ ಮಹಿಳಾ ದೌರ್ಜನ್ಯದ ಬಗ್ಗೆ ದೂರು ದಾಖಲಿಸುವಾಗ ಎಡವುತ್ತಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ)– 2012ರ ಬಗ್ಗೆಯೂ ತಿಳಿವಳಿಕೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಠಾಣೆಯ ಸಬ್ಇನ್‌ಸ್ಪೆಕ್ಟರ್‌, ಎಎಸ್‌ಐಗೆ ಕಾಯ್ದೆ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ನಿವೃತ್ತ ನ್ಯಾಯಾಧೀಶರು, ನಿವೃತ್ತ ಪೊಲೀಸ್‌ ಅಧಿಕಾರಿಗಳು ಮತ್ತು ಕಾನೂನು ತಜ್ಞರು ಐಪಿಸಿ 376ರ ಕಲಂ ತಿದ್ದುಪಡಿ ಮತ್ತು ಪೋಕ್ಸೋ ಬಗ್ಗೆ ಪೊಲೀಸ್‌ ಸಿಬ್ಬಂದಿಗೆ ತಿಳಿಸಿಕೊಡಲಿದ್ದಾರೆ. ಇದರಿಂದ ಮಹಿಳೆಯರು, ಮಕ್ಕಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪ್ರಕರಣ ದಾಖಲಿಸುವಾಗ ಸಿಬ್ಬಂದಿ ಗೊಂದಲಕ್ಕೆ ಒಳಗಾಗುವುದು ತಪ್ಪುತ್ತದೆ ಎಂದರು.

ಕರ್ನಾಟಕ ಕೈಗಾರಿಕಾ ರಕ್ಷಣಾ ಪಡೆ ಕೂಡ ಸಜ್ಜಾಗುತ್ತಿದೆ. 3 ಬೆಟಾಲಿಯನ್‌ ಒಳಗೊಂಡಿರುವ ಈ ಪಡೆಗೆ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು 700 ಕಾನ್‌ಸ್ಟೆಬಲ್‌ಗಳನ್ನು ನೇಮಿಸಿದ್ದು, ತರಬೇತಿ ಪಡೆಯುತ್ತಿದ್ದಾರೆ. ಶೀಘ್ರವೇ, ಈ ಪಡೆ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವ ನಕ್ಸಲೀಯರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರವೇ ವಿಶೇಷ ಪ್ಯಾಕೇಜ್‌ ಘೋಷಿಸಿದೆ. ಪುನರ್ವಸತಿ ಕಲ್ಪಿಸುವ ಅವಕಾಶ ಮುಕ್ತವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸ್ಪಿ ಎಸ್‌. ರಂಗಸ್ವಾಮಿನಾಯಕ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೆಂಕಟನಾಯಕ್‌, ಡಿವೈಎಸ್‌ಪಿಗಳಾದ ಮಹಾಂತೇಶ್‌ ಮುಪ್ಪಿನಮಠ, ಚೆನ್ನಬಸವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.