ADVERTISEMENT

ಹುಲಿಯ ಕಾಟ: ಭಯದಲ್ಲಿ ಕಾಡಂಚಿನ ಗ್ರಾಮಸ್ಥರು

ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣಿಗೆ ಬೀಳದ ವ್ಯಾಘ್ರ

ಮಲ್ಲೇಶ ಎಂ.
Published 3 ಜುಲೈ 2018, 15:30 IST
Last Updated 3 ಜುಲೈ 2018, 15:30 IST
ಹುಲಿಯನ್ನು ಸೆರೆ ಹಿಡಿಯಲು ಜಮೀನೊಂದರಲ್ಲಿ ಇಡಲಾಗಿರುವ ಬೋನು
ಹುಲಿಯನ್ನು ಸೆರೆ ಹಿಡಿಯಲು ಜಮೀನೊಂದರಲ್ಲಿ ಇಡಲಾಗಿರುವ ಬೋನು   

ಗುಂಡ್ಲುಪೇಟೆ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಆಗಾಗ ಪ್ರತ್ಯಕ್ಷ ಆಗುವ ಹುಲಿಯು ಸ್ಥಳೀಯ ಗ್ರಾಮಸ್ಥರಲ್ಲಿಭಯ ಮೂಡಿಸಿದೆ. ಜನರ ಕಣ್ಣಿಗೆ ಬೀಳುತ್ತಿರುವ ಹುಲಿಯುಅರಣ್ಯ ಇಲಾಖೆ ಸಿಬ್ಬಂದಿಗೆ ಕಾಣಿಸುತ್ತಿಲ್ಲ.

ಒಂದೆರೆಡು ತಿಂಗಳಿನಿಂದ ತಾಲ್ಲೂಕಿನ ಓಂಕಾರ ವಲಯ ಅರಣ್ಯ ವ್ಯಾಪ್ತಿಯ ಹಕ್ಕಲಪುರ, ರಂಗೂಪುರ, ರಾಘವಪುರ, ಹಸಗೂಲಿ, ಸೋಮಹಳ್ಳಿ, ಹೊಸಪುರ, ಚಿಕ್ಕಾಟಿ, ತೊಂಡವಾಡಿ, ಹೊರೆಯಾಲ, ಕೋಟೆಕೆರೆ, ಮಂಚಹಳ್ಳಿ ಮುಂತಾದ ಗ್ರಾಮಗಳಲ್ಲಿ ಹುಲಿ, ಚಿರತೆಗಳು ಕಾಣಿಸಿಕೊಂಡಿದ್ದು ನಾಲ್ಕೈದು ಜಾನುವಾರುಗಳ ಮೇಲೆ ದಾಳಿ ಮಾಡಿ ಸಾಯಿಸಿವೆ. ಕೆಲವೊಂದು ಗ್ರಾಮಗಳ ಜಮೀನುಗಳಲ್ಲಿ ನಾಯಿ ಮತ್ತು ಹಂದಿಗಳ ಮೇಲೆ ದಾಳಿ ಮಾಡಿರುವ ಬಗ್ಗೆಯೂ ವರದಿಯಾಗಿದೆ.

ಜೂನ್ 27ರಂದು ಶುಕ್ರವಾರ ಹಕ್ಕಲಪುರದ ಸುರೇಶ್ ಎಂಬವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡು ಕರುವನ್ನು ತಿಂದಿತ್ತು. ಗ್ರಾಮದ ಜನರೆಲ್ಲ ಗಲಾಟೆ ಮಾಡಿದ್ದರಿಂದ ಹುಲಿ ಪೊದೆಯೊಳಗೆ ಹೋಗಿತ್ತು. ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುವ ವೇಳೆ ಹುಲಿ ಕಣ್ಣಿಗೆ ಬಿದ್ದಿಲ್ಲ. ಇದೇ ಹುಲಿ ಚಿಕ್ಕಾಟಿ ಗ್ರಾಮದಲ್ಲೂ ಹಸುವೊಂದನ್ನು ತಿಂದು ಹಾಕಿತ್ತು.

ADVERTISEMENT

ಓಂಕಾರ ಅರಣ್ಯವು ಸುಮಾರು 78 ಚದರ ಕಿ.ಮೀ ವ್ಯಾಪ್ತಿ ಹೊಂದಿದ್ದು, ಸುಮಾರು 14 ಹುಲಿಗಳು ಇಲ್ಲಿವೆ ಎಂಬ ಮಾಹಿತಿ ಗಣತಿ ವೇಳೆ ಸಿಕ್ಕಿದೆ. ತಜ್ಞರ ಪ್ರಕಾರ, ಒಂದು ಹುಲಿ ಮಾತ್ರ ಕಾಡಿನಿಂದ ಬೇರ್ಪಟ್ಟು ಕಾಡಂಚಿನಲ್ಲಿರುವ ಗ್ರಾಮಗಳಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದೆ.

‘ಸಾಮಾನ್ಯವಾಗಿ ಹುಲಿಯು ಜಾನವಾರುಗಳ ಮೇಲೆ ದಾಳಿ ನಡೆಸುತ್ತಿದೆ ಎಂದರೆ ಅದು ಬಲಹೀನವಾಗಿದೆ ಎಂದರ್ಥ. ಆ ಪ್ರದೇಶದಲ್ಲಿರುವ ಹುಲಿಗಳೊಡನೆ ಹೋರಾಟ ಮಾಡಲು ಸಾಧ್ಯವಾಗದೇ ಮತ್ತುಕಾಡು ಪ್ರಾಣಿಗಳನ್ನು ಭೇಟೆಯಾಡುವ ಶಕ್ತಿಯನ್ನು ಕಳೆದುಕೊಂಡು ಕಾಡಿನಿಂದ ಹೊರ ಬಂದು ಸಾಕು ಪ್ರಾಣಿಗಳ ಮೇಲೆ ಹುಲಿ ದಾಳಿ ಮಾಡುತ್ತದೆ. ಆದರೆ, ಈ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿ ಬಲಿಷ್ಠವಾಗಿದೆ. ಸುಮಾರು 300 ಕೆಜಿಯಷ್ಟು ತೂಕದ ಎತ್ತನ್ನು ಅದು ಹೊತ್ತೊಯ್ದಿರುವುದನ್ನು ನೋಡಿದರೆ, ಅಕ್ಕೆ ಎಷ್ಟು ಶಕ್ತಿ ಇದೆ ಎಂಬುದನ್ನು ನಾವು ಅಂದಾಜಿಸಬಹುದು’ ಎಂದುಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

ಬೋನಿಗೆ ಬೀಳುವುದು ಕಷ್ಟ:ಹುಲಿಗಳು ಒಂದೇ ಸ್ಥಳದಲ್ಲಿ ಸಂಚರಿಸುವುದಿಲ್ಲ.ಗಂಡು ಹುಲಿ 20ರಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುತ್ತದೆ.ಹೆಣ್ಣು ಹುಲಿಯು 10ರಿಂದ 12 ಚದರ ಕಿ.ಮೀ ಜಾಗದಲ್ಲಿ ಸಂಚಾರ ಮಾಡಬಹುದು.ಒಂದು ಗಂಡು ಇರುವ ಪ್ರದೇಶದಲ್ಲಿ 5 ಹೆಣ್ಣು ಹುಲಿಗಳು ಇರುತ್ತವೆ. ಹುಲಿಗಳು ಸಂಚರಿಸುವ ಪ್ರದೇಶದ ವ್ಯಾಪ್ತಿಯು ದೊಡ್ಡದಿರುವುದರಿಂದ ಅಷ್ಟು ಸುಲಭವಾಗಿ ಅವು ಬೋನಿಗೆ ಬೀಳುವುದಿಲ್ಲ ಎಂದು ವಲಯಾರಣ್ಯಾಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಬೋನು ತೆಗೆದುಕೊಂಡು ಹೋಗಲು ವಿರೋಧ: ಈಗಾಗಲೇ ಚಿಕ್ಕಾಟಿ ಮತ್ತು ಹಕ್ಕಲಪುರ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದರಿಂದ ಅಲ್ಲಿ ಬೋನುಇಡಲಾಗಿದೆ. ಅದು ಸಾಲದು ಎಂಬಂತೆ ಬೇರೆ ವಲಯಗಳಿಂದ ಬೋನನ್ನು ತರಿಸಿ ಇರಿಸಲಾಗಿದೆ. ಆದರೆ, ಬೇರೆ ಕಡೆ ಹುಲಿ, ಚಿರತೆಗಳು ಕಾಣಿಸಿಕೊಂಡಾಗ ಈಗಾಗಲೇ ಇಡಲಾಗಿರುವ ಸ್ಥಳದಿಂದ ಬೋನನ್ನು ತೆಗೆದುಕೊಂಡು ಹೋಗುವುದಕ್ಕೆ ಗ್ರಾಮಸ್ಥರು ಒಪ್ಪುವುದಿಲ್ಲ. ಇಲ್ಲಿ ಮತ್ತೆ ಪ್ರಾಣಿಗಳು ಕಾಣಿಸಿಕೊಂಡರೆ ಏನು ಮಾಡುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅವರು ಪ್ರಶ್ನಿಸುತ್ತಾರೆ. ಇಲಾಖೆಯ ಬಳಿ ಇರುವುದೇ ಕೆಲವೇ ಬೋನುಗಳು. ಅವುಗಳನ್ನು ಎಲ್ಲಿ ಎಂದು ಇಡುವುದು ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.