ADVERTISEMENT

ಸಂವಿಧಾನ ಪ್ರತಿಗೆ ಬೆಂಕಿ ಪ್ರಕರಣ: ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 12:42 IST
Last Updated 23 ಆಗಸ್ಟ್ 2018, 12:42 IST
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ಪ್ರತಿಭಟನೆ ನಡೆಯಿತು.   

ಚಾಮರಾಜನಗರ: ದೆಹಲಿಯ ಜಂತರ್‌ ಮಂತರ್‌ನಲ್ಲಿ ಸಂವಿಧಾನ ಪ್ರತಿ ಸುಟ್ಟು ಹಾಕಿದ್ದನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ಪ್ರತಿಭಟನೆ ನಡೆಯಿತು.

ಪಟ್ಟಣದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಸಮಿತಿಯ ಸದಸ್ಯರು, ತಹಶೀಲ್ದಾರ್ ಪುರಂದರ ಅವರಿಗೆ ಮನವಿ ಸಲ್ಲಿಸಿದರು. ಸಂವಿಧಾನ ಪ್ರತಿಗೆ ಅಗೌರವ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ದೇಶದ ಜನತೆ ಉತ್ತಮ ಜೀವನ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಸಂವಿಧಾನವೇ ಅಂತಿಮ. ಇಂತಹ ವ್ಯವಸ್ಥೆಯನ್ನು ಸಹಿಸಲಾಗದ ಕೆಲ ಸಂಘಟನೆಗಳು ದೇಶದ್ರೋಹದ ಕೃತ್ಯದಲ್ಲಿತೊಡಗಿವೆ’ ಎಂದು ಆರೋಪಿಸಿದರು.

ADVERTISEMENT

ಆರಕ್ಷಣ್‌ ವಿರೋಧಿ, ಭೂಮಿಯಾರ್‌, ಆಜಾದ್‌ ಸೇನಾ ಇತ್ಯಾದಿ ಸಂಘಟನೆಗಳು ರಾಷ್ಟ್ರ ದ್ರೋಹದ ಕೆಲಸ ಮಾಡುತ್ತಿವೆ. ಈ ಸಂಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‌‘ಸಂವಿಧಾನ ಸುಡಲು ಮುಂದಾಗಿರುವ ಸಂಘಟನೆಗಳು ಹಾಗೂ ಕಿಡಿಗೇಡಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಸಿ.ಎಂ.ಶಿವಣ್ಣ, ಸಂಘಟನಾ ಸಂಚಾಲಕ ರಂಗಸ್ವಾಮಿ, ಮುಖಂಡರಾದ ಆಲೂರು ನಾಗೇಂದ್ರ, ಎಸ್‌. ಪ್ರಕಾಶ್, ನಾಗೇಶ್‌, ಗೌತಮ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.