ADVERTISEMENT

ಅಂತರ್ಜಲ ಉಳಿಸಲು ಕರೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 11:00 IST
Last Updated 28 ಸೆಪ್ಟೆಂಬರ್ 2016, 11:00 IST

ಚಿಂತಾಮಣಿ: ‘ಚುನಾಯಿತ ಪ್ರತಿನಿಧಿ, ಅಧಿಕಾರಿಗಳು, ಸಾರ್ವಜನಿಕರು ಸಂಘಟಿತ ಪ್ರಯತ್ನ ನಡೆಸಿ ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳುವುದರ ಮೂಲಕ, ಮುಂದಿನ ಪೀಳಿಗೆಗೆ ನೀರು ಉಳಿಸಲು ಮುಂದಾಗಬೇಕು’ ಎಂದು ಸ್ಥಳೀಯ ಜೆ.ಎಂ.ಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಎಸ್‌.ಶಕುಂತಲಾ ತಿಳಿಸಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕಂದಾಯ ಇಲಾಖೆ ಸಂಯುಕ್ತವಾಗಿ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೀರಿನ ಶುದ್ಧಿಕರಣ ಹಾಗೂ ಸಂರಕ್ಷಣೆ ಕುರಿತು ‘ಕಾನೂನು ಅರಿವು–ನೆರವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಜನ ಮಳೆಯ ನೀರು ವ್ಯರ್ಥ ಮಾಡದೆ ಸಂಗ್ರಹಿಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

ನಗರದ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್‌.ರಘು ಮಾತನಾಡಿ, ‘ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಕೆರೆಗಳನ್ನು ಹೊಂದಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಿಗೆ ಬರಬಂದಿರುವುದು ವಿಷಾದನೀಯ. ಕೊಳವೆ ಬಾವಿಗಳ ಮೂಲಕ ಅಂತರ್ಜಲ ನಿರಂತರವಾಗಿ ಬಳಕೆ ಮಾಡಿರುವುದು ಹಾಗೂ ಗಿಡಮರಗಳನ್ನು ನಾಶ ಮಾಡಿ, ಪ್ರಕೃತಿಯ ವಿರುದ್ಧ ನಡೆದು ಕೊಂಡಿರುವುದು ನೀರಿಗೆ ಬರ ಬರಲು ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ವಕೀಲ ಶ್ರೀನಾಥ್‌ ನೀರಿನ ಸ್ವಚ್ಛತೆ ಕುರಿತು ಉಪನ್ಯಾಸ ನೀಡಿದರು. ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಆರ್‌.ನಟೇಶ್‌, ತಹಶೀಲ್ದಾರ್‌ ಗಂಗಪ್ಪ, ಎಸ್‌.ಆರ್‌.ಬೈರಾರೆಡ್ಡಿ, ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.