ADVERTISEMENT

ಅದ್ಧೂರಿಯಾಗಿ ಕೃಷ್ಣ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 9:26 IST
Last Updated 14 ಸೆಪ್ಟೆಂಬರ್ 2017, 9:26 IST
ಚಿಕ್ಕಬಳ್ಳಾಪುರದಲ್ಲಿ ಕೃಷ್ಣ ಜಯಂತಿ ಅಂಗವಾಗಿ ಬುಧವಾರ ಯಾದವ ಸಮುದಾಯದವರು ಹೂವಿನ ಪಲ್ಲಕ್ಕಿ ಮೆರವಣಿಗೆ ಆಯೋಜಿಸಿದ್ದರು
ಚಿಕ್ಕಬಳ್ಳಾಪುರದಲ್ಲಿ ಕೃಷ್ಣ ಜಯಂತಿ ಅಂಗವಾಗಿ ಬುಧವಾರ ಯಾದವ ಸಮುದಾಯದವರು ಹೂವಿನ ಪಲ್ಲಕ್ಕಿ ಮೆರವಣಿಗೆ ಆಯೋಜಿಸಿದ್ದರು   

ಚಿಕ್ಕಬಳ್ಳಾಪುರ: ಯಾದವ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು, ಅಖಿಲ ಭಾರತ ಯಾದವ ಯುವ ಮಹಾಸಭಾ ಜಿಲ್ಲಾ ಘಟಕ, ಕರ್ನಾಟಕ ಯಾದವ ಯುವ ವೇದಿಕೆ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಅದ್ಧೂರಿಯಾಗಿ ಕೃಷ್ಣ ಜಯಂತಿ ಆಚರಿಸಲಾಯಿತು.

ಎಂ.ಜಿ.ರಸ್ತೆಯಲ್ಲಿರುವ ವೇಣು ಗೋಪಾಲಸ್ವಾಮಿ ದೇವಾಲಯದಲ್ಲಿ ಕೃಷ್ಣ ಜಯಂತಿ ಪ್ರಯುಕ್ತ ಬೆಳಿಗ್ಗೆಯಿಂದಲೇ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ನಂತರ ಪೂರ್ಣಕುಂಭ ಕಳಸಗಳು, ಮಂಗಳವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹೂವಿನ ಪಲ್ಲಕ್ಕಿ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಯಾದವ ಗುರುಪೀಠದ ಯಾದವಾನಂದ ಸ್ವಾಮೀಜಿ ಅವರು ಭಾಗವಹಿಸಿದ್ದರು. ಎಂ.ಜಿ.ರಸ್ತೆ, ಬಿ.ಬಿ.ರಸ್ತೆ, ಬಜಾರ್ ರಸ್ತೆ, ಗಂಗಮ್ಮನಗುಡಿ ರಸ್ತೆ ಮೂಲಕ ಮೆರವಣಿಗೆ ಸಾಗಿತು.

ADVERTISEMENT

ಅಂಬೇಡ್ಕರ್ ವೃತ್ತದ ಬಳಿ ನಡೆದ ಹುಟ್ಟು ಒಡೆಯುವ ಕಾರ್ಯಕ್ರಮ ಜನರ ಮನ ಸೆಳೆಯಿತು. ಕೃಷ್ಣ ವೇಷಧಾರಿ ಮಕ್ಕಳು ಕೈಯಲ್ಲಿ ಬಡಿಗೆ ಹಿಡಿದು ಮಡಿಕೆ ಒಡೆಯಲು ಮಾಡುತ್ತಿದ್ದ ಸಾಹಸಗಳನ್ನು ಜನರು ನಗುತ್ತಲೇ ಕಣ್ತುಂಬಿಕೊಂಡರು.

ಯಾದವ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಕೆ.ಎಂ.ಮುನೇಗೌಡ, ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಮುನಿನರಸಪ್ಪ, ಅಧ್ಯಕ್ಷ ಎಂ.ಮೂರ್ತಿ, ಅಖಿಲ ಭಾರತ ಯಾದವ ಯುವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾಗರಾಜ್ ಯಾದವ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಮೂರ್ತಿ, ಮುಖಂಡರಾದ ಎಂ.ಕೆ.ಅಶ್ವತ್ಥನಾರಾಯಣ, ನರಸಪ್ಪ, ಮುತ್ತುರಾಜ್, ಮೋಹನ್, ಎಂ.ಮಂಜುನಾಥ್, ಮುನಿರಾಜು, ವಿ.ಎ.ಶಂಕರಪ್ಪ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.