ADVERTISEMENT

ಅರಣ್ಯರೋಧನವಾದ ಪರಿತ್ಯಕ್ತ ಶಿಶು ನರಳಾಟ

ಜಿಲ್ಲೆಯಲ್ಲಿ ‘ದೇವರ ತೊಟ್ಟಿಲು’ ಯೋಜನೆಗೆ ಸಿಗದ ವ್ಯಾಪಕ ಪ್ರಚಾರ

ಈರಪ್ಪ ಹಳಕಟ್ಟಿ
Published 18 ಜನವರಿ 2017, 4:56 IST
Last Updated 18 ಜನವರಿ 2017, 4:56 IST
ಚಿಕ್ಕಬಳ್ಳಾಪುರದ ನಗರ್ತಪೇಟೆ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಮಂದಿರದಲ್ಲಿ ಕಳೆದ ನವೆಂಬರ್ 14 ರಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಅವರು ಮಗುವಿನ ಬೊಂಬೆಯನ್ನು ತೊಟ್ಟಿಲಲ್ಲಿ ಇಡುವ ಮೂಲಕ ‘ಮಮತೆಯ ತೊಟ್ಟಿಲು’ ಯೋಜನೆಗೆ ಚಾಲನೆ ನೀಡಿದ ಕ್ಷಣ
ಚಿಕ್ಕಬಳ್ಳಾಪುರದ ನಗರ್ತಪೇಟೆ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಮಂದಿರದಲ್ಲಿ ಕಳೆದ ನವೆಂಬರ್ 14 ರಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಅವರು ಮಗುವಿನ ಬೊಂಬೆಯನ್ನು ತೊಟ್ಟಿಲಲ್ಲಿ ಇಡುವ ಮೂಲಕ ‘ಮಮತೆಯ ತೊಟ್ಟಿಲು’ ಯೋಜನೆಗೆ ಚಾಲನೆ ನೀಡಿದ ಕ್ಷಣ   

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧ, ಅತ್ಯಾಚಾರ, ಲಿಂಗ ತಾರತಮ್ಯ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ತಾಯಿಗೆ ಬೇಡವಾದ ನವಜಾತ ಶಿಶುಗಳಿಗೆ ಸುರಕ್ಷಿತ ನೆಲೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ದೇವರ ತೊಟ್ಟಿಲು’ ಯೋಜನೆ ಬಗ್ಗೆ ಜಿಲ್ಲೆಯಲ್ಲಿ ಈವರೆಗೆ ವ್ಯಾಪಕ ಪ್ರಚಾರ ಸಿಕ್ಕಿಲ್ಲ. ಪರಿಣಾಮ ಪರಿತ್ಯಕ್ತ ಶಿಶುಗಳನ್ನು ಬೇಲಿ ಪೊದೆ, ಖಾಲಿ ನಿವೇಶನ, ಬಾವಿ, ಚರಂಡಿ ಮುಂತಾದ ಕಡೆಗಳಲ್ಲಿ ಎಸೆದು ಹೋಗುವ ಅಮಾನವೀಯ ಪ್ರಕರಣಗಳು ಪದೇ ಪದೇ ವರದಿಯಾಗುತ್ತಲೇ ಇವೆ.

ಪರಿತ್ಯಕ್ತ ಶಿಶುಗಳಿಗೆ ನೆಲೆ ಒದಗಿಸುವ ಜತೆಗೆ ಬದುಕು ಕಲ್ಪಿಸಿಕೊಡುವ ಉದಾತ್ತ ಆಶಯ ಹೊಂದಿರುವ ‘ದೇವರ ತೊಟ್ಟಿಲು’ ಯೋಜನೆಯನ್ನು ರಾಜ್ಯ ಸರ್ಕಾರ 2013 ರಲ್ಲಿ ಜಾರಿಗೆ ತಂದಿತು. ಅದರಂತೆ ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಪ್ರತಿ ತಾಲ್ಲೂಕು ಆಸ್ಪತ್ರೆ, ಸಾಂತ್ವನ ಕೇಂದ್ರ, ಸರ್ಕಾರಿ ಬಾಲಕಿಯರ ಬಾಲ ಮಂದಿರ ಮತ್ತು  ಸ್ವಾಧಾರ ಕೇಂದ್ರದಲ್ಲಿ ಈ ತೊಟ್ಟಿಲು ಅಳವಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಕೂಡ ಹೊರಡಿಸಿತ್ತು.

ಜಿಲ್ಲೆಯಾದ್ಯಂತ ಸುಮಾರು 15 ಪರಿತ್ಯಕ್ತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋದ ಮತ್ತು ಅನೇಕ ಶಿಶುಗಳಿಗೆ ಇರುವೆ, ಇಲಿ, ಹೆಗ್ಗಣ, ಹಂದಿ, ನಾಯಿ ಕಚ್ಚಿ ಗಾಯಗೊಳಿಸಿದ ಹೃದಯ ವಿದ್ರಾವಕ ಘಟನೆಗಳು ವರದಿಯಾಗಿವೆ. ಇಷ್ಟಾದರೂ ಬೀದಿಗೆ ಬಿದ್ದ ಶಿಶುಗಳ ಕಿರುಚಾಟ ‘ಅರಣ್ಯರೋದನ’ ವಾಗುತ್ತಿದೆಯೇ ಹೊರತು ಸಂಬಂಧಪಟ್ಟ ಇಲಾಖೆಗಳು ಈವರೆಗೆ ಎಚ್ಚೆತ್ತುಕೊಂಡಿಲ್ಲ!

ಇತ್ತೀಚೆಗಷ್ಟೇ (ಜನವರಿ 10) ನಗರದ ಮುನ್ಸಿಪಲ್‌ ಕಾಲೇಜು ಹಿಂಭಾಗದಲ್ಲಿರುವ ಕೆ.ಎನ್‌.ರಾಮಯ್ಯ ಬಡಾವಣೆಯ ಖಾಲಿ ನಿವೇಶನದಲ್ಲಿ ಎಸೆದು ಹೋದ ನವಜಾತ ಹೆಣ್ಣು ಶಿಶುವನ್ನು ಬೀದಿನಾಯಿ ಕಚ್ಚಿ ತಿನ್ನಲು ಆರಂಭಿಸಿತ್ತು. ಶಿಶು ಅಳುವ ಧ್ವನಿ ಕೇಳಿ ಸಮೀಪಕ್ಕೆ ಹೋಗಿ ನೋಡಿದ ಸ್ಥಳೀಯ ಮಹಿಳೆ ನಾಯಿಯಿಂದ ಶಿಶುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.

ನಾಯಿ ಕಚ್ಚಿದ್ದರಿಂದಾಗಿ ಶಿಶುವಿನ ಎದೆ ಮತ್ತು ತಲೆಯ ಭಾಗದಲ್ಲಿ ಆಳವಾದ ಗಾಯಗಳಾಗಿದ್ದವು. ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಆ ಶಿಶುವನ್ನು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು. ಸದ್ಯ ಆ ಶಿಶು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ.

ಎಚ್ಚೆತ್ತುಕೊಳ್ಳದ ಇಲಾಖೆಗಳು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಗಳು ಎಚ್ಚೆತ್ತುಕೊಂಡು ‘ದೇವರ ತೊಟ್ಟಿಲು’ ಯೋಜನೆ ಮುಖ್ಯ ಉದ್ದೇಶವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತಿಲ್ಲ.

‘ತಾಯಿಯ ಗರ್ಭದಲ್ಲಿರುವಾಗಲೇ ಶಿಶು ಕಾನೂನಿನ ವ್ಯಾಪ್ತಿಗೆ ಬರುತ್ತದೆ. ಪ್ರತಿ ಶಿಶು ಆರೋಗ್ಯಯುತವಾಗಿ ಬೆಳೆಯುವ ಸಂವಿಧಾನಬದ್ಧ ಹಕ್ಕು ಹೊಂದಿದೆ. ಜನಿಸುವ ಪ್ರತಿ ಶಿಶು ಕಾನೂನುಬದ್ಧ ಹೌದೋ ಅಲ್ಲವೋ ಎಂದು ಪ್ರಶ್ನಿಸುವುದಕ್ಕಿಂತಲೂ ಅದಕ್ಕೆ ಬದುಕುವ, ವಿಕಾಸ ಹೊಂದುವ ಹಕ್ಕನ್ನು ಒದಗಿಸಿಕೊಡುವುದು ಸಂಬಂಧಪಟ್ಟ ಇಲಾಖೆಗಳ ಆದ್ಯ ಕರ್ತವ್ಯ’ ಎನ್ನುತ್ತಾರೆ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ನಟರಾಜ್.

ಆದರೆ ಈ ಇಲಾಖೆಗಳು ಈವರೆಗೆ ತಮ್ಮ ಕರ್ತವ್ಯಕ್ಕೆ ಆದ್ಯತೆ ಕೊಟ್ಟು ಕೆಲಸ ಮಾಡುತ್ತಿಲ್ಲ ಎನ್ನುವುದಕ್ಕೆ ಇಷ್ಟೊಂದು ಶಿಶುಗಳು ಬೀದಿಗೆ ಬಿದ್ದು ಘಾಸಿಗೊಂಡಿದ್ದೆ ಸಾಕ್ಷಿ. ಇನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಕೈಜೋಡಿಸಬೇಕು. ಅದು ಕೂಡ ತನ್ನ ಕೆಲಸ ಮರೆತಂತಿದೆ ಎನ್ನುತ್ತಾರೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು.

ಪ್ರಾಥಮಿಕ ಹಂತದಲ್ಲಿ ಕೆಲಸ ಮಾಡುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಇನ್ನು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿರುವ ಕಾವಲು ಸಮಿತಿಗಳು ತಮ್ಮ ಧೇಯ್ಯೋದ್ದೇಶಗಳನ್ನೇ ಮರೆತಂತಿವೆ.

ನ್ಯಾಯಾಲಯವೇ ಬೆಚ್ಚಿ ಬಿದ್ದಿತ್ತು!
2013–14ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಪರಿತ್ಯಕ್ತ ಶಿಶುಗಳನ್ನು ಎಸೆಯುವ ಮತ್ತು ಶಿಶುಗಳನ್ನು ಪ್ರಾಣಿಗಳು ಕಚ್ಚಿದ ಪ್ರಕರಣಗಳು ಹೆಚ್ಚು ವರದಿಯಾಗಿದ್ದವು. 2014ರಲ್ಲಿ ನವಜಾತ ಶಿಶುವನ್ನು ನಾಯಿಯೊಂದು ಬಾಯಿಯಲ್ಲಿ ಕಚ್ಚಿಕೊಂಡು ಜನದಟ್ಟಣೆಯ ನಡುವೆಯೇ ಜಿಲ್ಲಾ ನ್ಯಾಯಾಲಯದ ಕಟ್ಟಡದೊಳಗೆ ತೆಗೆದುಕೊಂಡು ಹೋಗಿ ನ್ಯಾಯಾಲಯದ ಹಾಲ್‌ನಲ್ಲಿ ಶಿಶುವನ್ನು ಬಿಟ್ಟು ಓಡಿಹೋದ ಪ್ರಕರಣ ನಡೆದಿತ್ತು.

ಆ ದೃಶ್ಯ ನೋಡಿ ನ್ಯಾಯಾಲಯದಲ್ಲಿದ್ದ ಹಿರಿಯ ಸಿವಿಲ್‌ ನ್ಯಾಯಾಧೀಶರು ಸೇರಿದಂತೆ ವಕೀಲ ಸಮೂಹವೇ ಕ್ಷಣಕಾಲ ದಿಗ್ಭ್ರಮೆಗೊಂಡಿತ್ತು. ಅಲ್ಲಿದ್ದ ಎಲ್ಲರೂ ಸಾವರಿಸಿಕೊಂಡು ಹೋಗಿ ಶಿಶುವನ್ನು ನೋಡುವ ವೇಳೆಗೆ ಅದು ಪ್ರಾಣ ಬಿಟ್ಟಿತ್ತು.

ADVERTISEMENT

ಅದೇ ವರ್ಷ ಚಿಂತಾಮಣಿಯಲ್ಲಿ ನಾಯಿಗಳು ಪರಿತ್ಯಕ್ತ ಶಿಶುವೊಂದರ ಕೈ ಮತ್ತು ಕಾಲಿನ ಬೆರಳುಗಳನ್ನೇ ತುಂಡರಿಸಿದ್ದವು. ರಕ್ಷಣೆಗೊಳಗಾದ ಆ ಮಗುವನ್ನು ವಿದೇಶಿ ದಂಪತಿಗಳು ದತ್ತು ಪಡೆದರು. ಗೌರಿಬಿದನೂರು ರಸ್ತೆಯಲ್ಲಿರುವ ಕಣಿವೆ ಸಮೀಪದ ಹಳ್ಳವೊಂದರ ಬೇಲಿಯಲ್ಲಿ ಇಟ್ಟು ಹೋಗಿದ್ದ ಹೆಣ್ಣು ಶಿಶು ಇರುವೆ ಕಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿತ್ತು.

ತೊಟ್ಟಿಲು ಒಳಗಿಟ್ಟರೆ ಹೇಗೆ?
ಜಿಲ್ಲೆಯಾದ್ಯಂತ ಇಟ್ಟಿರುವ ‘ದೇವರ ತೊಟ್ಟಿಲು’ಗಳನ್ನು ಕಟ್ಟಡಗಳ ಒಳಗೆ ಇಡಲಾಗಿದೆ. ಹೀಗಾಗಿ ಗೌಪ್ಯತೆ ಬಹಿರಂಗವಾಗುತ್ತದೆ ಎನ್ನುವ ಕಾರಣಕ್ಕೆ ಯಾರು ಕೂಡ ತೊಟ್ಟಿಲ ಗೊಡವೆಗೆ ಹೋಗುತ್ತಿಲ್ಲ. ವಾಸ್ತವದಲ್ಲಿ ಕಾಂಪೌಂಡ್‌ ಆಚೆಯಿಂದ ಬೇಡದ ಶಿಶುಗಳನ್ನು ಸುಲಭವಾಗಿ ಹಾಕಿ ಹೋಗಲು ಅನುಕೂಲವಾಗುವಂತೆ ಕಟ್ಟಡದ ಆವರಣದೊಳಗೆ ಶೆಡ್‌ ನಿರ್ಮಿಸಿ ತೊಟ್ಟಿಲು ಅಳವಡಿಸಬೇಕು. ಜತೆಗೆ ಒಂದು ಗಂಟೆ ಕಟ್ಟಬೇಕು. ಶಿಶು ಹಾಕಿದವರು ಗಂಟೆ ಸದ್ದು ಮಾಡಿ ಹೋದಾಗ ಸಂಬಂಧಪಟ್ಟ ಸಿಬ್ಬಂದಿ ಶಿಶುವನ್ನು ತೆಗೆದುಕೊಂಡು ಮುಂದಿನ ಕ್ರಮಕೈಗೊಳ್ಳಬೇಕು.

ಏನಿದು ‘ದೇವರ ತೊಟ್ಟಿಲು’?
‘ತನಗೆ ಬೇಡವಾದ ನವಜಾತ ಶಿಶುವನ್ನು ತಾಯಿಯಾದವಳು ಎಲ್ಲೆಂದರಲ್ಲಿ ಎಸೆಯದೆ ಈ ತೊಟ್ಟಿಲಲ್ಲಿ ಹಾಕಿದರೆ. ಯಾರೊಬ್ಬರೂ ಆ ತಾಯಿಗೆ ಏನೊಂದು ಪ್ರಶ್ನೆ ಕೇಳುವುದಿಲ್ಲ. ಜಾತಿ, ಲಿಂಗ ವಿಚಾರಿಸುವುದಿಲ್ಲ. ಮಗುವನ್ನು ಆರೈಕೆ ಮಾಡುವ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಯೇ ನಾಮಕರಣ ಕೂಡ ಮಾಡುತ್ತಾರೆ. ಮಕ್ಕಳಿಲ್ಲದ ದಂಪತಿಗೆ ಮಗುವನ್ನು ದತ್ತು ನೀಡಿ, ಆಸ್ತಿ ಹಕ್ಕಿನ ಜತೆಗೆ ಕುಟುಂಬದ ವಾತಾವರಣ ಕಲ್ಪಿಸುವ ಕೆಲಸ ಮಾಡುತ್ತಾರೆ. ಈ ಯೋಜನೆಯ ಹೆಚ್ಚಿನ ಮಾಹಿತಿ ತಿಳಿಯಲು ಬಯಸುವವರು 08156–275382  ಈ ಸಂಖ್ಯೆಗೆ ಕರೆ ಮಾಡಬಹುದು.

*
‘ದೇವರ ತೊಟ್ಟಿಲು’ ಯೋಜನೆ ಬಗ್ಗೆ ಜನಸಾಮಾನ್ಯರಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಯರ ಮೂಲಕ ತಿಳಿವಳಿಕೆ ಮೂಡಿಸುವ ಕೆಲಸ ಮಾಡಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯುತ್ತೇನೆ.
-ರಾಜಣ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.